ಉಡುಪಿ: ನಂದಿಕೂರಿನ ಉಷ್ಣ ವಿದ್ಯುತ್ ಸ್ಥಾವರ (ಯುಪಿಸಿಎಲ್)ದಲ್ಲಿ ಸಂಗ್ರಹವಾದ ಹಾರುಬೂದಿಯನ್ನು ಲಾರಿಗಳಲ್ಲಿ ಸಾಗಿಸುವುದು ಹಾಗೂ ಸ್ಥಾವರಕ್ಕೆ ಸಮುದ್ರದ ನೀರು ಉಪಯೋಗಿಸುವುದು ಅಕ್ರಮ ಎಂದು ಕೇಂದ್ರ ಪರಿಸರ ಹಾಗೂ ಅರಣ್ಯ ಇಲಾಖೆ ಹೇಳಿದ್ದು, ಇವುಗಳಿಗೆ ಅನುಮೋದನೆ ನೀಡುವಂತೆ ಯುಪಿಸಿಎಲ್ ಮಾಡಿಕೊಂಡಿದ್ದ ಮನವಿ ತಿರಸ್ಕರಿಸಿದೆ ಎಂದು ನಂದಿಕೂರಿನ ಜನಜಾಗೃತಿ ಸಮಿತಿಯ ಕಾರ್ಯನಿರ್ವಾಹಕ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.
ಕೇಂದ್ರ ಪರಿಸರ ಹಾಗೂ ಅರಣ್ಯ ಇಲಾಖೆಯಿಂದ ತಾವು ಈ ಮಾಹಿತಿ ಪಡೆದಿರುವುದಾಗಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಥಾವರಕ್ಕೆ ಅಗತ್ಯವಾದ ಕಲ್ಲಿದ್ದಲನ್ನು ರೈಲಿನಲ್ಲಿ ಸಾಗಣೆ ಮಾಡುವುದನ್ನು ಕೂಡ ಪರಿಸರ ಇಲಾಖೆ ತಡೆಹಿಡಿದಿದೆ ಎಂದು ಅವರು ತಿಳಿಸಿದ್ದಾರೆ.
ಪರಿಸರ ಇಲಾಖೆಯ 1997 ಮಾ. 20ರ ಅಧಿಸೂಚನೆಯ ಅನ್ವಯ ಕಲ್ಲಿದ್ದಲನ್ನು ರೈಲು ಹಾಗೂ ಹಾರುಬೂದಿಯನ್ನು ಟ್ರಕ್‌ಗಳಲ್ಲಿ ಸಾಗಿಸುವಂತಿಲ್ಲ. ಆದರೆ ಈ ತೀರ್ಮಾನವನ್ನು ಮರು ಪರಿಶೀಲಿಸಿ, ಬದಲಾಯಿಸಿ ಇವುಗಳ ಸಾಗಣೆಯ ಅನುಮತಿ ನೀಡುವಂತೆ ಕಳೆದ ವರ್ಷದ ಅಂತ್ಯದಲ್ಲಿ ಕಂಪೆನಿ ಸಲ್ಲಿಸಿದ್ದ ಮನವಿಯನ್ನು ಇಲಾಖೆ ತಿರಸ್ಕರಿಸಿದೆ. ಹಾಗೊಂದು ವೇಳೆ ಕಂಪೆನಿ ಕಲ್ಲಿದ್ದಲನ್ನು ರೈಲಿನಲ್ಲಿ, ಹಾರುಬೂದಿಯನ್ನು ಟ್ರಕ್‌ಗಳಲ್ಲಿ ಸಾಗಿಸುತ್ತಿದ್ದರೆ, ಸ್ಥಾವರಕ್ಕೆ ಸಮುದ್ರದ ನೀರನ್ನು ಬಳಸುತ್ತಿದ್ದರೆ ಇಡೀ ಯೋಜನೆಯೇ ಅಕ್ರಮ ಎಂದು ಸಚಿವಾಲಯ ತಿಳಿಸಿರುವುದಾಗಿ ಶೆಟ್ಟಿ ಹೇಳಿದ್ದಾರೆ.
ಆದರೆ ಕಲ್ಲಿದ್ದಲು ಸಾಗಾಟವಾಗಲಿ ಇಲ್ಲವೇ ಹಾರುಬೂದಿಯನ್ನು ಟ್ರಕ್‌ಗಳಲ್ಲಿ ಸಾಗಾಟ ಮಾಡುವುದಕ್ಕೆ ಕಂಪೆನಿಗೆ ಸಚಿವಾಲಯದಿಂದ ಪರವಾನಿಗೆ ನೀಡಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಈಗಾಗಲೇ ಆಂಧ್ರ ಮತ್ತು ಮುಂಬೈನಲ್ಲಿ ರೈಲಿನಲ್ಲಿ ಕಲ್ಲಿದ್ದಲು ಸಾಗಣೆ ನಿಷೇಧಿಸಲಾಗಿದೆ.
ಆದಾಗ್ಯೂ ಯುಪಿಸಿಎಲ್ ಕಂಪೆನಿ ಈಗಾಗಲೇ ಎನ್‌ಎಂಪಿಟಿಯಿಂದ ಕಲ್ಲಿದ್ದಲನ್ನು ಸಾಗಿಸಲು ಕೊಂಕಣ ರೈಲ್ವೆ ಬಳಸುತ್ತಿದೆ. ಇಲ್ಲಿ ಉತ್ಪಾದನೆಯಾದ ಹಾರುಬೂದಿಯನ್ನು ಸಾಂತೂರಿನ ಬೂದಿಹೊಂಡಕ್ಕೆ ಸಾಗಿಸಲು ಲಾರಿಗಳನ್ನು ಬಳಸುತ್ತಿದೆ. ಅಲ್ಲದೇ 2010ರಿಂದಲೇ ಸ್ಥಾವರದ ಎಲ್ಲಾ ಕೆಲಸಗಳಿಗೂ ಸಮುದ್ರದ ನೀರನ್ನೇ ಬಳಸುತ್ತಿದೆ ಎಂದು ಶೆಟ್ಟಿ ಆರೋಪಿಸಿದ್ದಾರೆ.
ಪರಿಸರಕ್ಕೆ ವಿರುದ್ಧ- ಟೀಕೆ: ಎಲ್ಲ ವಿಧದಿಂದಲೂ ಕಂಪೆನಿ ಪರಿಸರಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಹೀಗಾಗಿ ಪರಿಸರ ಇಲಾಖೆ ಹಾಗೂ ಅರಣ್ಯ ಇಲಾಖೆಗಳು ಜಂಟಿಯಾಗಿ ಈ ಕಂಪೆನಿಯನ್ನು ಮುಚ್ಚಲು ಎಲ್ಲ ರೀತಿಯ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೆಯೇ ಕೊಂಕಣ ರೈಲ್ವೆ ವಿಭಾಗವು ಯುಪಿಸಿಎಲ್ ಕಂಪೆನಿ ಸಾಗಿಸುತ್ತಿರುವ ಕಲ್ಲಿದ್ದಲು ಸಾಗಾಣಕ್ಕೆ ತಡೆ ಹಾಕಬೇಕು, ಹಾಗೆಯೇ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಮಂಡಳಿ ಮತ್ತು ಜಿಲ್ಲಾಡಳಿತವು ಟ್ರಕ್‌ಗಳಲ್ಲಿ ಹಾರುಬೂದಿ ಸಾಗಾಟ ಮಾಡುವುದಕ್ಕೆ ತಡೆ ಹಾಕಬೇಕು ಮತ್ತು ಸಮುದ್ರದ ನೀರನ್ನು ಬಳಕೆ ಮಾಡುವುದನ್ನು ನಿಲ್ಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಸಮರ್ಥನೆ: ಆದರೆ ಯುಪಿಸಿಎಲ್ ಕಂಪೆನಿಯ ಅಧಿಕಾರಿಗಳು, ನಾವು ಎಲ್ಲ ರೀತಿಯಲ್ಲಿಯೂ ಕಾನೂನು ಬದ್ಧವಾಗಿಯೇ ಕೆಲಸ ಮಾಡುತ್ತಿದ್ದೇವೆ. ಪರಿಸರ ಇಲಾಖೆಯಿಂದ ಕೂಡ ನಾವು ಅನುಮತಿ ಪಡೆದುಕೊಂಡಿದ್ದೇವೆ ಎಂದೇ ಸಮರ್ಥಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.