ADVERTISEMENT

ಯುಪಿಸಿಎಲ್ ವಿರುದ್ಧ ಹೋರಾಟ ನಿರ್ಧಾರಕ್ಕೆ ಬಾರದ ಪೇಜಾವರ ಶ್ರೀ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2011, 6:15 IST
Last Updated 19 ಏಪ್ರಿಲ್ 2011, 6:15 IST

ಉಡುಪಿ: ನಂದಿಕೂರಿನಲ್ಲಿನ ಉಡುಪಿ ವಿದ್ಯುತ್ ಕಂಪೆನಿ ನಿಯಮಿತ(ಯುಪಿಸಿಎಲ್) ವಿಚಾರದಲ್ಲಿ ನಿತ್ಯೋಪವಾಸ ಕೈಬಿಟ್ಟ ಬಳಿಕ ಹೋರಾಟದ ಗಡುವು ವಿಸ್ತರಿಸುತ್ತಿರುವ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಮುಂದಿನ ಹೋರಾಟದ ಬಗ್ಗೆ ಸೋಮವಾರ ಯಾವುದೇ ನಿರ್ಧಾರವನ್ನೂ ಪ್ರಕಟಿಸಲಿಲ್ಲ.ಇದಕ್ಕೂ ಮುನ್ನ ಯುಪಿಸಿಎಲ್‌ನಿಂದಾಗಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಏ. 15ರ ಗಡುವು ನೀಡಿ ಮುಖ್ಯಮಂತ್ರಿಗೆ ಸ್ವಾಮೀಜಿ ಪತ್ರ ಬರೆದಿದ್ದರು. ನಂತರ ತಾವೊಬ್ಬರೇ ಹೋರಾಟ ಮಾಡಿದರೆ ಸಾಲದು, ಬದಲಿಗೆ ಇದರಲ್ಲಿ ಜನರೂ ಕೈಜೋಡಿಸಬೇಕು. ಸೋಮವಾರ ಈ ಬಗ್ಗೆ ನಿರ್ಧಾರ ಪ್ರಕಟಿಸುವುದಾಗಿ ಏ. 15ರಂದು ತಿಳಿಸಿದ್ದರು.

ಈ ವಿಚಾರದಲ್ಲಿ ಹೋರಾಟ ನಡೆಸಿರುವ ಕೆಲವು ಮುಖಂಡರೊಂದಿಗೆ ಸೋಮವಾರ ಚರ್ಚಿಸಿದ್ದಾಗಿ ತಿಳಿದು ಬಂದಿದೆ. ಆದರೆ ಯಾವುದೇ ವಿಚಾರವನ್ನು ಸ್ವಾಮೀಜಿ ಪ್ರಕಟಿಸಲಿಲ್ಲ. ದೂರವಾಣಿ ಕರೆಗೂ ಲಭ್ಯರಾಗಲಿಲ್ಲ.ಇದೇ ವೇಳೆ, ವಿಶ್ವೇಶತೀರ್ಥ ಸ್ವಾಮೀಯನ್ನು ಸೋಮವಾರ ಭೇಟಿ ಮಾಡಿದ ಪರಿಸರ ಖಾತೆ ಸಚಿವ ಕೃಷ್ಣ ಪಾಲೆಮಾರ್, ಯಾವುದೇ ದುಡುಕು ನಿರ್ಧಾರ ಕೈಗೊಳ್ಳದಂತೆ ಮನವಿ ಮಾಡಿದ್ದಾರೆ.

ಪಾಜಕ ಮಠದಲ್ಲಿ ಭೇಟಿ ಮಾಡಿದ ಮೀನುಗಾರಿಕೆ, ಬಂದರು, ಪರಿಸರ ಸಚಿವ ಪಾಲೆಮಾರ್, ವಿದ್ಯುತ್ ಸ್ಥಾವರ ಪ್ರದೇಶದ ಸ್ಥಿತಿಗತಿ ಬಗ್ಗೆ ತಜ್ಞರು ಪರಿಶೀಲಿಸಿ ವರದಿ ನೀಡಲಿದ್ದಾರೆ. ಅಲ್ಲಿಯವರೆಗೂ ಯಾವ ನಿರ್ಧಾರವನ್ನೂ ಕೈಗೊಳ್ಳದಂತೆ ಮನವೊಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಸಂಸದ ನಳಿನ್ ಕುಮಾರ್ ಕಟೀಲು ಮತ್ತು ರೈತ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ವಿಜಯ ಕುಮಾರ್ ಹೆಗ್ಡೆ ಸೇರಿದಂತೆ ಹಲವರು ಸ್ವಾಮೀಜಿಯನ್ನು ಪೇಜಾವರ ಮಠದಲ್ಲಿ ಸೋಮವಾರ ಸಂಜೆ ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.