ADVERTISEMENT

‘ಯುವಜನರು ಸೇನೆಯಲ್ಲಿ ದುಡಿಯಬೇಕು’

ಜೈ ಜವಾನ್ ವೀರ ಯೋಧರ ಸ್ಮರಣಾ ಸಮಿತಿಯ ಐದನೇ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 21 ಮೇ 2018, 10:36 IST
Last Updated 21 ಮೇ 2018, 10:36 IST
ತೊಂಡೆಮಕ್ಕಿಯಲ್ಲಿ ಶನಿವಾರ ನಡೆದ ಜೈಜವಾನ ವೀರ ಯೋಧರ ಸ್ಮರಣಾ ಸಮಿತಿಯ ವಾರ್ಷಿಕೋತ್ಸವ ಹಾಗೂ ಯೋಧರಿಗೆ ನಮನ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರನ್ನು ಸನ್ಮಾನಿಸಲಾಯಿತು.(ಬೈಂದೂರು ಚಿತ್ರ)
ತೊಂಡೆಮಕ್ಕಿಯಲ್ಲಿ ಶನಿವಾರ ನಡೆದ ಜೈಜವಾನ ವೀರ ಯೋಧರ ಸ್ಮರಣಾ ಸಮಿತಿಯ ವಾರ್ಷಿಕೋತ್ಸವ ಹಾಗೂ ಯೋಧರಿಗೆ ನಮನ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರನ್ನು ಸನ್ಮಾನಿಸಲಾಯಿತು.(ಬೈಂದೂರು ಚಿತ್ರ)   

ಬೈಂದೂರು : ಭಾರತದ ಸೈನಿಕರು ದೇಶಪ್ರೇಮ, ಕರ್ತವ್ಯ ನಿಷ್ಠೆ ಮತ್ತು ಶೌರ್ಯದ ಉನ್ನತ ಪರಂಪರೆ ಹೊಂದಿದವರು. ವಿಶ್ವದಲ್ಲಿ ಅತಿಹೆಚ್ಚು ಯುವಶಕ್ತಿ ಹೊಂದಿದ ದೇಶ ಎಂದು ಗುರುತಿಸಿಕೊಂಡ  ಈ ದೇಶದ ಇಂದಿನ ಯುವಜನರು ಸೈನ್ಯಕ್ಕೆ ಸೇರುವ ಆಸಕ್ತಿ ತೋರದಿರುವುದು ಬೇಸರದ ಸಂಗತಿ. ಇದು ದೇಶದ ರಕ್ಷಣೆಯ ದೃಷ್ಟಿಯಿಂದ ಮಾರಕವೆನಿಸುವ ಪ್ರವೃತ್ತಿ ಎಂದು ಭಾರತೀಯ ಭೂಸೇನೆಯ ನಿವೃತ್ತ ಯೋಧ ಬೈಂದೂರು ಚಂದ್ರಶೇಖರ ನಾವಡ ಹೇಳಿದರು.

ಸಮೀಪದ ತೊಂಡೆಮಕ್ಕಿಯಲ್ಲಿ ಶನಿವಾರ ಸಂಜೆ ನಡೆದ ಜೈ ಜವಾನ್ ವೀರ ಯೋಧರ ಸ್ಮರಣಾ ಸಮಿತಿಯ ಐದನೇ ವಾರ್ಷಿಕೋತ್ಸವ ಹಾಗೂ ಯೋಧರಿಗೆ ನಮನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ಮೂರು ವರ್ಷಗಳ ಹಿಂದೆ ಜಮ್ಮು-ಕಾಶ್ಮೀರದಲ್ಲಿ ಉಂಟಾದ ಭೀಕರ ಚಂಡಮಾರುತ, ನೆರೆಹಾವಳಿಯಿಂದ ಕಂಗೆಟ್ಟ ಅಲ್ಲಿನ ನಾಗರಿಕರನ್ನು ಭಾರತೀಯ ಸೈನಿಕರು ತಮ್ಮ ಜೀವದ ಹಂಗುತೊರೆದು ರಕ್ಷಿಸಿದರು. ಅವುಗಳನ್ನು ಮಾಧ್ಯಮಗಳಲ್ಲಿ ನೋಡಿದ ಸಂದರ್ಭದಲ್ಲಿ ಮಾತ್ರ ಸೇನೆಯ ಬಗ್ಗೆ ಗೌರವ ವ್ಯಕ್ತಪಡಿಸುವ ಜನರು ಬಳಿಕ ಮರೆತುಬಿಡುತ್ತಾರೆ. ನಂತರದ ದಿನಗಳಲ್ಲಿ ಕಾಶ್ಮೀರದ ಭಾಗದಲ್ಲಿ ಜನರು ರಾಜಕೀಯ ಹಾಗೂ ಧರ್ಮದ ಭಾವನೆಯಲ್ಲಿ ಕೊಚ್ಚಿಹೋಗಿ ನಮ್ಮ ಸೈನಿಕರನ್ನು ತುಚ್ಛವಾಗಿ ನಡೆಸಿಕೊಂಡದ್ದೂ ಇದೆ.  ಅವರ ಮೇಲೆ ನಿರಂತರ ಕಲ್ಲು ತೂರಾಟ ನಡೆಸುವ ಮೂಲಕ ದೈಹಿಕ, ಮಾನಸಿಕ ಹಿಂಸೆಗೆ ಗುರಿಪಡಿಸಿದರು. ನಮ್ಮವರೇ ನಮ್ಮನ್ನು ತಾತ್ಸಾರ ಮಾಡಿದಾಗ ಆಗುವ ನೋವು ಎಂದಿಗೂ ಸಹಿಸಲು ಸಾಧ್ಯವಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ADVERTISEMENT

ಯುವಜನತೆ ಸೇನೆಗೆ ಸೇರುವ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಯಬಾರದು. ಸೇನೆಗೆ ಸೇರಿದ ಬಳಿಕವೂ ವಿದ್ಯಾಭ್ಯಾಸ ಮುಂದುವರೆಸುವ ಅವಕಾಶ ಇದೆ ಎಂದು ಅವರು ಹೇಳಿದರು.

ವಾಯುಸೇನೆ ನಿವೃತ್ತ ಯೋಧ ಯಳಜಿತ ಗಣಪತಿ ಗೌಡ ಅಧ್ಯಕ್ಷತೆವಹಿಸಿದ್ದರು. ಭೂಸೇನೆಯ ಮಾಜಿ ಯೋಧ ಮಹಾಬಲ ಎನ್. ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಯೋಧರಾದ ಶಿರೂರಿನ ರಮೇಶ ಬಿ. ಮೇಸ್ತ, ತೆಕ್ಕೆಟ್ಟೆಯ ಎ. ವಿ. ಶಿವರಾಮ ಶೆಟ್ಟಿ, ರಾಮಚಂದ್ರ ಗಾಣಿಗ, ಬೈಂದೂರಿನ ವಿಷ್ಣು ಆಚಾರ್ಯ ಪರವಾಗಿ ಪತ್ನಿ ಯಶೋದಾ ವಿ. ಆಚಾರ್ಯ ಇವರನ್ನು ಗೌರವಿಸಲಾಯಿತು. ನಿವೃತ್ತ ಯೋಧರಾದ ಬಾಬು ಪೂಜಾರಿ ಮೈದಿನಪುರ, ಮಾಧವ ಕೊಠಾರಿ ತಗ್ಗರ್ಸೆ ಉಪಸ್ಥಿತರಿದ್ದರು.

ಶಶಿಕಲಾ ಚಂದ್ರ ಮೊಗವೀರ ಸ್ವಾಗತಿಸಿದರು. ಸಮಿತಿಯ ಸಂಸ್ಥಾಪಕ, ಯೋಧ ಶ್ರೀಕಾಂತ ಗಾಣಿಗ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚಂದ್ರಕಲಾ ಮೊಗವೀರ ವಂದಿಸಿದರು. ಆಲಂದೂರು ಮಂಜುನಾಥ ಗಾಣಿಗ ನಿರೂಪಿಸಿದರು. ನಂತರ ದೇಶಭಕ್ತಿ ಸಾರುವ ’ಯೋಧರಿಗೊಂದು ನೃತ್ಯ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

**
ದೇಶದ ನಾಗರಿಕರು ಸುರಕ್ಷಿತ, ಸುಂದರ ಬದುಕು ಸಾಗಿಸಲು ತಮ್ಮ ಜೀವದ ಹಂಗು ತೊರೆದು ದೇಶವನ್ನು ಹಗಲಿರುಳು ಕಾಯುತ್ತಿರುವ ಸೈನಿಕರು ಕಾರಣ. ನಾಗರಿಕರಿಗೆ ಅವರ ಬಗೆಗೆ ಕೃತಜ್ಞತಾಭಾವ ಇರಬೇಕು
ಮಹಾಬಲ ಎನ್. ಭಾರತೀಯ ಭೂಸೇನೆಯ ಮಾಜಿ ಯೋಧ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.