ADVERTISEMENT

ಲೋಕಪಾಲರ ನೇಮಕಕ್ಕೆ ಆಗ್ರಹಿಸಿ ಮಾಸ್ ಇಂಡಿಯಾ ಸಂಸ್ಥೆ ಧರಣಿ ನಾಳೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 11:49 IST
Last Updated 27 ಮಾರ್ಚ್ 2018, 11:49 IST

ಉಡುಪಿ: ನರೇಂದ್ರ ಮೋದಿ ಅವರು ಭರವಸೆ ನೀಡಿದಂತೆ ಬಲಿಷ್ಠ ಲೋಕಪಾಲ ಕಾಯ್ದೆ ಜಾರಿ ಮಾಡಬೇಕು ಹಾಗೂ ಲೋಕಪಾಲರನ್ನು ನೇಮಕ ಮಾಡಬೇಕು ಎಂದು ಮಾಸ್ ಇಂಡಿಯಾ ಸಂಸ್ಥೆ ಆಗ್ರಹಿಸಿದೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಜಿ.ಎ ಕೋಟೆಯಾರ್ ಅವರು, ‘ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು 2011ರಲ್ಲಿ ದೊಡ್ಡ ಆಂದೋಲನಾ ಮಾಡಿ ಲೋಕಪಾಲ ಕಾಯ್ದೆಗೆ ಆಗ್ರಹಿಸಿದ್ದರು. ಇಡೀ ದೇಶದಲ್ಲಿ ಅವರ ಹೋರಾಟಕ್ಕೆ ಬೆಂಬಲ ಸಿಕ್ಕಿತ್ತು. ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಲೋಕಪಾಲ ಕಾಯ್ದೆಯನ್ನು ಜಾರಿ ಮಾಡಿತು. ಆದರೆ, ಆ ನಂತರ ಬಂದ ಬಿಜೆಪಿ ಸರ್ಕಾರ ಅದನ್ನು ಕಾರ್ಯಗತಗೊಳಿಸಲಿಲ್ಲ, ಲೋಕಪಾಲರನ್ನು ನೇಮಕ ಮಾಡಲಿಲ್ಲ. ಆದ್ದರಿಂದ ಅಣ್ಣಾ ಹಜಾರೆ ಅವರು ಈಗ ಮತ್ತೊಮ್ಮೆ ದೆಹಲಿಯಲ್ಲಿ ಹೋರಾಟ ಆರಂಭಿಸಿದ್ದಾರೆ. ಅದನ್ನು ಬೆಂಬಲಿಸಿ ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಎದುರು ಸಂಘಟನೆ ವತಿಯಿಂದ ಇದೇ 28ರಂದು ಧರಣಿ ನಡೆಸಲಾಗುವುದು’ ಎಂದರು.

ಎಲ್ಲಿಯವರೆಗೆ ಲೋಕಪಾಲ್ ಕಾಯ್ದೆ ಜಾರಿಯಾಗುವುದಿಲ್ಲವೋ ಅಲ್ಲಿಯ ವರೆಗೆ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಿಲ್ಲ. ಆದ್ದರಿಂದ ದೇಶದ ಪ್ರತಿಯೊಬ್ಬ ನಾಗರಿಕನು ಇದಕ್ಕಾಗಿ ಸರ್ಕಾರವನ್ನು ಆಗ್ರಹಿಸಬೇಕು ಹಾಗೂ ಹೋರಾಟ ನಡೆಸಬೇಕು. ಅಣ್ಣಾ ಹಜಾರೆ ಅವರು ಈ ಬಾರಿ ಲೋಕಪಾಲ ವಿಷಯವನ್ನು ಮಾತ್ರ ತೆಗೆದುಕೊಳ್ಳದೆ ರೈತರ ಪರವೂ ಧ್ವನಿ ಎತ್ತಿದ್ದಾರೆ. ರೈತರ ಬೆಳೆಗೆ ಸೂಕ್ತ ಬೆಂಬಲ ಬೆಲೆ ಸಿಗಬೇಕು. ಪಿಂಚಣಿಯನ್ನೂ ನೀಡಬೇಕು ಎಂದರು.

ADVERTISEMENT

ರೈತರು ಬೆಳೆದ ಬೆಳೆಯನ್ನು ಮಾರಾಟ ಮಾಡುವಾಗ ಮಧ್ಯವರ್ತಿಗಳ ಹಾವಳಿಯಿಂದ ನ್ಯಾಯಯುತ ದರ ಸಿಗದಂತಾಗಿದೆ. ಪರಿಣಾಮ ಆತ ಸಾಲ ಮಾಡಿ ಜೀವನ ದೂಡುವಂತಹ ಸ್ಥಿತಿ ಇದೆ. ದೇಶದಲ್ಲಿ ನಿರಂತರವಾಗಿ ರೈತರ ಆತ್ಮಹತ್ಯೆಗಳು ನಡೆಯುತ್ತಿವೆ. ಇದನ್ನು ತಡೆಯಲು ಸಹ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.