ADVERTISEMENT

ವಾರದೊಳಗೆ ಪಟ್ಟಿ ನೀಡಲು ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 10:50 IST
Last Updated 14 ಜೂನ್ 2011, 10:50 IST

ಉಡುಪಿ: `ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಸೂಚಿಸಿದ್ದ ಇಲಾಖೆಯ ಯೋಜನೆಗಳ ಪೈಕಿ ಯಾವ ಕಾರ್ಯಕ್ರಮ ಪ್ರಗತಿಯಲ್ಲಿದೆ, ಎಷ್ಟು ಫಲಾನುಭಗಳಿಗೆ ಯಾವ ಸವಲತ್ತು ನೀಡಲಾಗಿದೆ ಎನ್ನುವ ಬಗ್ಗೆ  ಪಟ್ಟಿ ಮಾಡಿ ಒಂದು ವಾರದೊಳಗೆ ಇ-ಮೇಲ್ ಮಾಡಬೇಕು~ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕಟಪಾಡಿ ಶಂಕರ್ ಪೂಜಾರಿ ಅಧಿಕಾರಿಗಳಿಗೆ ಇಲ್ಲಿ ಸೂಚಿಸಿದರು. 

 ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ) ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

`ಗ್ರಾಮ ಸಭೆಗಳನ್ನು ನಡೆಸುವ ಬಗ್ಗೆ ಎಲ್ಲಾ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದರಂತೆ ಗ್ರಾಮಸಭೆ ನಡೆಸಿ ಆಯಾ ಗ್ರಾಮದ ಪ್ರಗತಿ ಪರಿಶೀಲನೆ ನಡೆಸಬೇಕು~ ಎಂದರು.

`ಕುಂದಾಪುರ ತಾಲ್ಲೂಕಿನಲ್ಲಿ ಬಸವ ವಸತಿ ಯೋಜನೆಯಡಿ ಈಗಾಗಲೇ 194 ಮನೆಗಳ ನಿರ್ಮಾಣ ಪ್ರಗತಿಯಲ್ಲಿದ್ದು, ನಿಗಮದಿಂದ ತೆರೆಯಲಾದ ಫಲಾನುಭವಿಗಳ ಖಾತೆಗೆ ನೇರವಾಗಿ ಅನುದಾನ ಬಿಡುಗಡೆಯಾಗಿದೆ. ಹುಚ್ಚುನಾಯಿಗಳ ಹಾವಳಿ ಇರುವ ಕಡೆ ಗ್ರಾ.ಪಂ. ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಹುಚ್ಚುನಾಯಿ ನಿಯಂತ್ರಣ ಸಭೆ ನಡೆಸಬೇಕು~ ಎಂದು ಎಲ್ಲಾ ಕಾರ್ಯನಿರ್ವಹಣಾಧಿಕಾರಿಗಳಿಗೆ  ಸೂಚಿಸಿದರು.

`ಜಿಲ್ಲೆಯ ವಿದ್ಯಾರ್ಥಿನಿಲಯಗಳ ಸ್ವಚ್ಛತೆ ಮತ್ತಿತರ ವ್ಯವಸ್ಥೆಗಳು ಸರಿ ಇಲ್ಲವೆಂದು ಪೋಷಕರು ದೂರಿದ್ದಾರೆ. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮತ್ತು ಬಿ.ಸಿ.ಎಂ ಅಧಿಕಾರಿಗಳು ವಿದ್ಯಾರ್ಥಿನಿಲಯಗಳನ್ನು ಪರಿಶೀಲಿಸಬೇಕು~ ಎಂದು ಸೂಚನೆ ನೀಡಿದರು.

ತಾಲ್ಲೂಕು ಮಟ್ಟದಲ್ಲಿ ಒಂದು ವಾರದೊಳಗೆ ತೋಟಗಾರಿಕಾ ಮಿಷನ್ ಸಮಿತಿ ಸಭೆ ನಡೆಸಿ ವರದಿ ನೀಡಬೇಕು ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರಿಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಪ್ರಾಣೇಶ್ ರಾವ್ ತಿಳಿಸಿದರು. 

ಜಿಲ್ಲೆಯಲ್ಲಿ ಸುವರ್ಣ ಭೂಮಿ ಯೋಜನೆಯಡಿಯಲ್ಲಿ  11,499 ಅರ್ಜಿಗಳು ಸ್ವೀಕೃತವಾಗಿದೆ. ಜೂನ್ ಅಂತ್ಯದವರೆಗೆ ವಾಡಿಕೆಯಂತೆ 1,272 ಮಿ.ಮೀ ಮಳೆಯಾಗಬೇಕಿದ್ದು, ಇದುವರೆಗೆ 663ಮಿ.ಮೀ ಮಳೆಯಾಗಿದೆ. ಕಳೆದ ವರ್ಷ 1,172 ಮಿ.ಮೀ ಮಳೆಯಾಗಿತ್ತು. ಮುಂಗಾರು ಹಂಗಾಮಿಗೆ 48,200 ಹೆಕ್ಟೇರ್‌ಗಳ ಬಿತ್ತನೆ ಗುರಿ ಹೊಂದಲಾಗಿದ್ದು ಸಸಿ ಮಡಿ ಅಥವಾ ನೇಜಿ ಕಾರ್ಯ ಪ್ರಗತಿಯಲ್ಲಿದೆ. 

ಜಿಲ್ಲೆಯಲ್ಲಿ 2,500 ಕ್ವಿಂಟಲ್ ದೃಢೀಕೃತ ಬತ್ತದ ಬಿತ್ತನೆ ಬೀಜ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನಿದ್ದು,  2,068 ಕ್ವಿಂಟಲ್ ಬೀಜವನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗಿದೆ. 2120 ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜು ಗುರಿ ಇದ್ದು, 2041 ಮೆಟ್ರಿಕ್ ಟನ್ ದಾಸ್ತಾನಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಬಿ.ವೈ ಶ್ರೀನಿವಾಸ್ ಅವರು ತಿಳಿಸಿದರು.

 ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಸವಿತಾ ಶಿವಾನಂದ ಕೋಟ್ಯಾನ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಉಪೇಂದ್ರ ನಾಯ್ಕ, ಮುಖ್ಯ ಯೋಜನಾಧಿಕಾರಿ ವಿಜಯ ಕುಮಾರ್ ಶೆಟ್ಟಿ, ಮುಖ್ಯ ಲೆಕ್ಕಾಧಿಕಾರಿ  ತಿಮ್ಮಪ್ಪ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.