ADVERTISEMENT

ವಿಜಯಾ ಬ್ಯಾಂಕ್‌ ಶಾಖೆ: ಕಳವಿಗೆ ಯತ್ನ

ಆರ್ಡಿ: ಕಿಟಕಿ ಸರಳನ್ನು ಮೀಟಿದ್ದ ಕಳ್ಳರು, ಮೂರು ಕಂಪ್ಯೂಟರ್‌ಗೆ ಹಾನಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 9:23 IST
Last Updated 13 ಮಾರ್ಚ್ 2018, 9:23 IST
ಶಂಕರನಾರಾಯಣ ಠಾಣಾ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.
ಶಂಕರನಾರಾಯಣ ಠಾಣಾ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.   

ಸಿದ್ದಾಪುರ: ವಿಜಯಾ ಬ್ಯಾಂಕಿನ ಕಿಟಕಿಯ ಸರಳುಗಳನ್ನು ಮೀಟಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಶಂಕರನಾರಾಯಣ ಠಾಣಾ ವ್ಯಾಪ್ತಿಯ ಆರ್ಡಿಯಲ್ಲಿ ನಡೆದಿದೆ.

ಎರಡು ದಿನಗಳಿಂದ ಬ್ಯಾಂಕ್ ರಜೆ ಇದ್ದರುವುದರನ್ನು ಗಮನಿಸಿಯೇ ಕಳ್ಳತನಕ್ಕೆ ಯತ್ನ ನಡೆದಿದೆ. ಭಾನುವಾರ ತಡರಾತ್ರಿ ಮೂವರು ಮುಸುಕುಧಾರಿಗಳು ಸರಳು ಕತ್ತರಿಸುವ ಸಾಧನ, ಕಬ್ಬಿಣದ ರಾಡುಗಳನ್ನು ಹಿಡಿದು ಬಂದಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಜಯ ಬ್ಯಾಂಕ್ ಸುತ್ತ ಆವರಣವಿದ್ದು, ಬಲಭಾಗದ ಮೂಲೆಯಿಂದ ಒಳಕ್ಕೆ ಜಿಗಿದಿರುವ ಹೆಜ್ಜೆ ಗುರುತಿದೆ. ದ್ವಾರದಲ್ಲಿ ಸಿಸಿ ಕ್ಯಾಮೆರಾ ಇರುವುದನ್ನು ಗಮನಿಸಿ ಬಲಭಾಗದ ಬದಿಯಲ್ಲಿರುವ ಕಿಟಕಿಯ ಗಾಜು ಪುಡಿಗೈದು, ಕಬ್ಬಿಣದ ಸರಳು ಕತ್ತರಿಸಿ ಕಳ್ಳರು ಒಳಪ್ರವೇಶಿಸಿದ್ದಾರೆ.

ಬ್ಯಾಂಕಿನ ಒಳಗಿದ್ದ ಹಳೆಯ ಬೀರುವನ್ನು ಕಬ್ಬಿಣದ ಸಲಾಖೆಯಿಂದ ಒಡೆದಿದ್ದಾರೆ. ಬೆಲೆಬಾಳುವ ವಸ್ತುಗಳು ದೊರಕದ ಕಾರಣ ಪ್ರಬಂಧಕರ ಟೇಬಲ್ ಮೇಲಿದ್ದ ಕಂಪ್ಯೂಟರ್ ಸೇರಿದಂತೆ ಒಟ್ಟು ಮೂರು ಕಂಪ್ಯೂಟರ್‌ಗಳನ್ನು ನೆಲದ ಮೇಲೆ ಎಸೆದ ಪರಿಣಾಮ ಅವು ಪುಡಿಯಾಗಿದೆ. ಭದ್ರವಾಗಿರುವ ಲಾಕರ್ ರೂಂ ಪ್ರವೇಶಿಸಲು ಸಾಧ್ಯವಾಗದೆ ಬರಿಗೈಯಲ್ಲಿ ಹಿಂದಿರುಗಿದ್ದಾರೆ.

ADVERTISEMENT

ಎರಡನೇ ಶನಿವಾರ, ಭಾನುವಾರ ಎರಡು ದಿನಗಳ ರಜೆ ಕಳೆದು ಸೋಮಾರ ಬ್ಯಾಂಕಿಗೆ ಬಂದ ಗುಮಾಸ್ತೆ ಬೀಗ ತೆಗೆದು ಒಳಪ್ರವೇಶಿಸಿದಾಗ ಕಂಪ್ಯೂಟರ್ ನೆಲದ ಮೇಲೆ ಬಿದ್ದಿತ್ತು. ವಸ್ತುಗಳು ಚೆಲ್ಲಾಪಿಲ್ಲಿಯಾದ ಕಾರಣ ಕಟ್ಟಡದ ಮಾಲೀಕರು, ಪ್ರಬಂಧಕರಿಗೆ ಮಾಹಿತಿ ನೀಡಿದ್ದರು.

ಅದರಂತೆ ಶಂಕರನಾರಾಯಣ ಠಾಣೆಯ ಸಬ್ ಇನ್‌ಸ್ಪೆಕ್ಟರ್ ರಾಘವೇಂದ್ರ ಸಿ. ಅವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನದಳ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

ಅಲಾರಾಂ ಇಲ್ಲ: ಸಾಮಾನ್ಯವಾಗಿ ಎಟಿಎಂ, ಬ್ಯಾಂಕ್‌ಗಳಿಗೆ ಭದ್ರತಾ ಸಿಬ್ಬಂದಿಯನ್ನು ಆಯಾ ಬ್ಯಾಂಕಿನವರು ನಿಯೋಜಿಸುತ್ತಾರೆ. ಆದರೆ, ಆರ್ಡಿ ಶಾಲೆಯ ಸಮೀಪವಿರುವ ಎಟಿಎಂ ಕೇಂದ್ರದ ನಿರ್ವಹಣೆಗೆ ಸಿಬ್ಬಂದಿ ನೇಮಿಸಿದ್ದರೂ, ಬ್ಯಾಂಕಿಗೆ ಯಾವುದೇ ಭದ್ರತಾ ಸಿಬ್ಬಂದಿಯನ್ನು ನೇಮಿಸಿಲ್ಲ. ಬ್ಯಾಂಕಿನ ಲಾಕರ್ ರೂಂ ಅಲಾರಂ ಕೂಡ ಸ್ವಲ್ಪ ದಿನಗಳ ಹಿಂದೆ ಕೆಟ್ಟು ಹೋಗಿತ್ತು ಎನ್ನಲಾಗುತ್ತಿದೆ.

ಎರಡನೇ ಬಾರಿ ಕಳ್ಳತನ: ಎರಡೂವರೆ ದಶಕದ ಹಿಂದೆ ಕಳ್ಳರು ಬ್ಯಾಂಕಿನ ಎದುರಿನ ಬಾಗಿಲನ್ನು ಮುರಿದು ಒಳಪ್ರವೇಶಿದ್ದರು. ಆಗ ಲಾಕರ್ ರೂಂ ಗೋಡೆ ಕೊರೆಯಲು ಯತ್ನಿಸಿ ಯಾವುದೇ ಬೆಲೆಬಾಳುವ ವಸ್ತುಗಳು ಸಿಗದೆ ಬರಿಗೈಯಲ್ಲಿ ಹಿಂದಿರುಗಿದ್ದರು.

ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ನಡೆಸಿದ್ದು, ಕಳ್ಳತನ ನಡೆಸಲು ಯತ್ನಿಸಿರುವ ಕುರಿತು ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಹತ್ತಿರದ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ ಎಂದು ಶಂಕರನಾರಾಯಣ ಸಬ್‌ ಇನ್‌ಸ್ಪೆಕ್ಟರ್‌ ರಾಘವೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಗಸ್ತು ಪೊಲೀಸರು ಬರುತ್ತಿಲ್ಲ!
ದೇವಸ್ಥಾನ, ಮಸೀದಿ, ಚರ್ಚ್, ಬ್ಯಾಂಕ್, ಹಾಸ್ಟೆಲ್, ಶಾಲೆ ಇತರೆ ಪ್ರದೇಶಕ್ಕೆ ಆಯಾ ಠಾಣಾ ವ್ಯಾಪ್ತಿಯ ಗಸ್ತು ಪೊಲೀಸರು ಪ್ರತಿನಿತ್ಯ ಬರಬೇಕು. ಬಂದಿರುವುದಕ್ಕೆ ಸಾಕ್ಷಿಯಾಗಿ ಪುಸ್ತಕದಲ್ಲಿ ಸಹಿ ಮಾಡಬೇಕು. ಆದರೆ, ಬ್ಯಾಂಕಿನ ಸಹಿ ಪುಸ್ತಕ ಎಲ್ಲಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಮೊದಲು ಪೊಲೀಸರು ಬಂದು ಸಹಿ ಮಾಡುತ್ತಿದ್ದು, ಇತ್ತೀಚಿಗೆ ಅವರು ಬರುತ್ತಿಲ್ಲ ಎನ್ನುವ ಮಾತುಗಳು ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.