ಬೈಂದೂರು : ಕೇಂದ್ರ ಸರ್ಕಾರದ ರಾಜೀವ ಗಾಂಧಿ ಗ್ರಾಮೀಣ ವಿದ್ಯುದೀ ಕರಣ ಯೋಜನೆಯನ್ನು ತ್ವರಿತ ಗತಿಯಲ್ಲಿ ಅನುಷ್ಠಾನಿಸುವ ಮೂಲಕ ವಿದ್ಯುತ್ ವಂಚಿತ ಗ್ರಾಮ ಮತ್ತು ಕುಟುಂಬಗಳಿಗೆ ಅದರ ಅನುಕೂಲ ಕಲ್ಪಿಸುವಂತೆ ಶಾಸಕ ಕೆ. ಗೋಪಾಲ ಪೂಜಾರಿ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕರ ಕಚೇರಿಯಲ್ಲಿ ಅವರು ಗುರುವಾರ ಅಧಿಕಾರಿಗಳ ಜತೆ ಸಭೆ ನಡೆಸಿ ವಿಚಾರ ವಿನಿಮಯ ನಡೆಸಿದ ಸಂದರ್ಭ ಈ ಸೂಚನೆ ನೀಡಿದರು.
ಬೈಂದೂರು ಕ್ಷೇತ್ರದಲ್ಲಿ ಅನುಷ್ಠಾನ ಹಂತ ದಲ್ಲಿರುವ ಯೋಜನೆಗಳ ವಿವರವನ್ನು ಕಾರ್ಯಪಾಲಕ ಎಂಜಿನಿಯರ್ ಎಚ್.ಸಿ.ಮಹದೇವಪ್ಪ ಶಾಸಕರಿಗೆ ನೀಡಿದರು.
ಈ ಯೊಜನೆಯಡಿ ಉಡುಪಿ ಜಿಲ್ಲೆಗೆ ರೂ. 28 ಕೋಟಿ ಮಂಜೂರಾಗಿದ್ದು, ಕಾಮ ಗಾರಿಗಳ ಟೆಂಡರ್ ಕರೆಯಲಾಗಿದೆ. ಅದರಲ್ಲಿ ಕುಂದಾಪುರ ತಾಲ್ಲೂಕಿನ 96 ಗ್ರಾಮಗಳ ರೂ. 12 ಕೋಟಿ ಮೊತ್ತದ ಯೋಜನೆ ಒಳಗೊಂಡಿದೆ. ಅದರಂತೆ ಬಿಪಿಎಲ್ ಕುಟುಂಬಗಳಿಗೆ ವಿದ್ಯುತ್ ಒದಗಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ ಎಂದರು.
ಕ್ಷೇತ್ರದ ಕುಗ್ರಾಮಗಳಾದ ಬಸ್ರಿಬೇರು, ಹಳ್ಳಿಬೇರು, ತಾರೆಕೊಡ್ಲು, ಚಾರ‌್ಸಾಲು, ಹರ, ಬಾವಡಿಗಳಿಗೆ ಸುರಕ್ಷಿತ ಅರಣ್ಯದ ಮೂಲಕ ಲೈನ್ ಹಾಕಬೇಕಾದ್ದರಿಂದ ಶಾಸಕರು ಅರಣ್ಯ ಅಧಿಕಾರಿಗಳೊಂದಿಗೆ ಚರ್ಚಿಸಬೇಕೆಂದು ಅವರು ಸಲಹೆಯಿತ್ತರು. ದೊಡ್ಡಹರ, ಮಣ್ಮನ್‌ಹರ ಪ್ರದೇಶಕ್ಕೆ ರೂ. 11 ಲಕ್ಷ ವೆಚ್ಚದಲ್ಲಿ ಸೋಲಾರ್ ವಿದ್ಯುತ್ ಅಳವಡಿಸುವ ಪ್ರಸ್ತಾವಕ್ಕೆ ಅಲ್ಲಿನ ಜನರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅನುಷ್ಠಾನಿಸಲಾಗಿಲ್ಲ ಎಂದರು.
ಬಿಪಿಎಲ್ ಕುಟುಂಬಗಳಿಗೆ ವಿದ್ಯುತ್ ಸೌಲಭ್ಯ ಒದಗಿಸುತ್ತಿದ್ದ ಹಾಗಿ ಈಗ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದವರಿಗೂ ಅದನ್ನು ವಿಸ್ತರಿಸಬೇಕು. ಗ್ರಾಮ ಪಂಚಾಯಿತಿಗಳು ಹೊಸ ಬಿಪಿಎಲ್ ಕಾರ್ಡ್‌ಗಳಿಗೆ ಅರ್ಜಿ ಸ್ವೀಕರಿಸಬೇಕು ಎಂದು ಶಾಸಕರು ತಿಳಿಸಿದರು.
ಬೈಂದೂರು ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಸಿದ್ದೇಶ್, ಬೈಂದೂರು ಮತ್ತು ಕೊಲ್ಲೂರು ಶಾಖಾಧಿ ಕಾರಿಗಳಾದ ರಾಘವೇಂದ್ರ, ಸುದರ್ಶನ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಎಸ್. ರಾಜು ಪೂಜಾರಿ, ಕೆ. ರಮೇಶ ಗಾಣಿಗ, ರಾಮ ಶೇರುಗಾರ್, ಮುಖಂಡರಾದ ಎಸ್. ವಾಸುದೇವ ಯಡಿಯಾಳ, ಎಸ್. ಮದನ್‌ಕುಮಾರ್, ರಿಯಾಜ್ ಅಹಮದ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.