ADVERTISEMENT

ವಿದ್ಯುತ್ ವ್ಯತ್ಯಯಕ್ಕೆ ಕಾರಣಗಳೇನು?

ಗ್ರಾಹಕರಿಗಾಗಿ ಮೆಸ್ಕಾಂನಿಂದ ಮಾಹಿತಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 6:14 IST
Last Updated 12 ಜೂನ್ 2018, 6:14 IST

ಬ್ರಹ್ಮಾವರ: ಅನಗತ್ಯ ವಿದ್ಯುತ್ ಕಡಿತವಾಗುವುದರ ಬಗ್ಗೆ ಗ್ರಾಹಕರು ಮೆಸ್ಕಾಂಗೆ ಶಾಪ ಹಾಕುವುದು ಸಹಜ. ಆದರೆ, ಯಾಕೆ ವಿದ್ಯುತ್ ಕಡಿತಗೊಳಿಸಲಾಗುತ್ತದೆ, ಹೇಗೆ ಕಡಿತಗೊಳ್ಳುತ್ತದೆ ಮತ್ತು ಸಾರ್ವಜನಿಕರು ಯಾವ ರೀತಿಯ ಮುಂಜಾಗ್ರತೆ ವಹಿಸಬೇಕು ಎನ್ನುವುದರ ಬಗ್ಗೆ ಮೆಸ್ಕಾಂ ಇಲಾಖೆ ಮಾಹಿತಿ ನೀಡಿದೆ.

ಸಾಮಾನ್ಯವಾಗಿ ವಿದ್ಯುತ್‌ ಅನ್ನು ಸಮಯ ನಿಗದಿ ಪಡಿಸಿದ, ಅನಿಯಮಿತ ಮತ್ತು ತುರ್ತು ಪರಿಸ್ಥಿತಿಯಲ್ಲಿ ವಿದ್ಯುತ್ ಕಡಿತಗೊಳಿಸಲಾಗುತ್ತದೆ.

ವಿದ್ಯುತ್ ನೀಡುವಾಗ ಒಂದೊಂದು ಪ್ರದೇಶಗಳಿಗೆ ಪ್ರತ್ಯೇಕ ಲೈನ್ (ಫೀಡರ್)ಗಳನ್ನು ಮಾಡಿ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ. ಒಂದು ಉಪವಿಭಾಗದ ಮಟ್ಟದಲ್ಲಿ ಸುಮಾರು 8 ರಿಂದ 15 ಲೈನ್‌ಗಳಿರುತ್ತವೆ. ಈ ಲೈನ್‌ಗಳು ತುಂಬ ಸೂಕ್ಷ್ಮ ಆಗಿದ್ದು ಮರದ ಕೊಂಬೆ ಬಿದ್ದಲ್ಲಿ, ಗರಿಗಳು ತಾಗಿದಾಗ ಈ ಲೈನ್‌ನ ವಿದ್ಯುತ್ ತಕ್ಷಣ ತನ್ನಿಂದ ತಾನೇ ಕಡಿತಗೊಳ್ಳುವ ವ್ಯವಸ್ಥೆ ಇರುತ್ತದೆ. ಅಂತಹ ಸಂದರ್ಭದಲ್ಲಿ ದೋಷಗೊಂಡ ಭಾಗಗಳಿಗೆ ವಿದ್ಯುತ್ ಕಡಿತವಾಗುತ್ತದೆ. ಇದನ್ನು ಟ್ರಿಪ್ ಎನ್ನಲಾಗುವುದು.

ADVERTISEMENT

ವಿದ್ಯುತ್ ಉಪಕೇಂದ್ರದಿಂದ ಆಯಾ ಭಾಗಗಳಿಗೆ ವಿದ್ಯುತ್ ಸರಬರಾಜು ಮಾಡುವ ಫೀಡರ್‌ಗಳು ದೋಷ ಉಂಟಾದಾಗ ತನ್ನಿಂದ ತಾನೇ ಟ್ರಿಪ್ ಆಗಿ ವಿದ್ಯುತ್ ಕಡಿತಗೊಳ್ಳುತ್ತದೆ. ಕೆಲವೊಮ್ಮೆ ರಸ್ತೆ ಬದಿಯ ವಿದ್ಯುತ್ ಲೈನ್‌ಗಳಿಗೆ ವಾಹನಗಳು ತಾಗಿ/ ಅಫಘಾತವಾಗಿ ಕಂಬಗಳು ಮುರಿದು, ಲೈನ್‌ಗಳು ತುಂಡಾಗಿ ವಿದ್ಯುತ್ ಅಡಚಣೆ ಆಗುವ ಸಂಭವವಿರುತ್ತದೆ. ಕೆಲ ತುರ್ತು ಸಂದರ್ಭಗಳಲ್ಲಿ ಉದಾಹರಣೆಗೆ ಲೈನ್‌ಗಳು ತುಂಡಾದ ಸಂದರ್ಭಗಳಲ್ಲಿ ಸದರಿ ಲೈನ್‌ನಿಂದಾಗುವ ಪ್ರಾಣಾಪಾಯಗಳನ್ನು ಮತ್ತು ತೊಂದರೆಗಳನ್ನು ತಪ್ಪಿಸಲು ವಿದ್ಯುತ್ ನಿಲುಗಡೆಗೊಳಿಸುವುದು ಅನಿವಾರ್ಯವಾಗಿರುತ್ತದೆ.

ಲೈನ್‌ನ ಅಕ್ಕ ಪಕ್ಕ ತೆಂಗು ಹಾಗೂ ಇತರೆ ಮರಗಳನ್ನು ನೆಟ್ಟು ಇದರಿಂದ ವಿದ್ಯುತ್ ಲೈನ್‌ನಲ್ಲಿ ದೋಷ ಕಂಡುಬಂದಾಗ, ಮಳೆ, ಗಾಳಿ ಜಾಸ್ತಿ ಇದ್ದಾಗ ಉಪಕರಣಗಳಲ್ಲಿ ದೋಷ ಕಂಡು ಬರುವುದು ಸಹಜ. ಅಂತಹ ಸಂದರ್ಭದಲ್ಲಿ ಸುರಕ್ಷತೆಯ ಸಲುವಾಗಿ ಸ್ವಯಂ ವಿದ್ಯುತ್ ಕಡಿತ ಉಂಟಾಗುತ್ತದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಎಷ್ಟು ನಿರ್ವಹಣೆ ಮಾಡಿದರೂ ಲೈನ್‌ನಲ್ಲಿ ದೋಷ ಬಂದೇ ಬರುತ್ತದೆ. ಎಷ್ಟು ಬೇಗ ದೋಷವನ್ನು ಸರಿಪಡಿಸಬಹುದು ಎಂಬುದು ಸ್ಥಳೀಯ ವಿದ್ಯುತ್ ಇಲಾಖೆಯ ಕೈಯಲ್ಲಿ ಇರುತ್ತದೆ. ಅದೂ ಕೂಡ ಪರಿಸ್ಥಿತಿಗೆ ಅನುಗುಣವಾಗಿರುತ್ತವೆ. ಇದಕ್ಕೆ ಸಾರ್ವಜನಿಕರ ಸಹಕಾರ ಖಂಡಿತ ಅಗತ್ಯ.

ಸಾರ್ವಜನಿಕರು ಆದಷ್ಟು ವಿದ್ಯುತ್‌ ತಂತಿಗಳಿಗೆ ತಾಗುವ ಮರ, ಮರದ ಗೆಲ್ಲುಗಳ ಬಗ್ಗೆ ಮತ್ತು ಲೈನ್, ಟ್ರಾನ್ಸ್ ಫಾರ್ಮರ್‌ಗಳಲ್ಲಿ ದೋಷಗಳಿರುವ ಬಗ್ಗೆ ಗ್ರಾಹಕರ ಗಮನಕ್ಕೆ ಬಂದಾಗ ಮೆಸ್ಕಾಂ ಸಿಬ್ಬಂದಿ ಅಥವಾ ಸಮೀಪದ ಕಚೇರಿಗಳಿಗೆ ತಿಳಿಸಿದಲ್ಲಿ ವಿದ್ಯುತ್ ಕಡಿತವನ್ನು ಆದಷ್ಟು ಕಡಿಮೆ ಮಾಡಲು ಸಾಧ್ಯ. ಅನಗತ್ಯ ದೂರುಗಳನ್ನು ನೀಡುವುದರ ಬದಲು ಸಾರ್ವಜನಿಕರು ಮೆಸ್ಕಾಂನೊಂದಿಗೆ ಕೈಜೋಡಿಸಿದಲ್ಲಿ ಉತ್ತಮ ಎಂದು ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.