ADVERTISEMENT

ಸವಲತ್ತುಗಳಿದ್ದರೂ ಫಲಾನುಭವಿಗಳು ಇಲ್ಲ: ಶಾಸಕ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 6:00 IST
Last Updated 1 ಅಕ್ಟೋಬರ್ 2012, 6:00 IST

ಬ್ರಹ್ಮಾವರ: ರಾಜ್ಯ ಸರ್ಕಾರ ಮೀನುಗಾರರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ನೀಡುತ್ತಿದ್ದರೂ ಅರ್ಹ ಫಲಾನುಭವಿಗಳು ಕಡಿಮೆ ಎಂದು ಶಾಸಕ ಕೆ.ರಘುಪತಿ ಭಟ್ ವಿಷಾದ ವ್ಯಕ್ತಪಡಿಸಿದರು.

ಹೇರೂರು ಗ್ರಾಮದ ಬಂಡ್ಸಾಲೆ ಬೆಟ್ಟಿನಲ್ಲಿ ಸುಮಾರು 19ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಹೇರೂರು ಮೀನುಗಾರರ ಪ್ರಾಥಮಿಕ ವಿವಿಧೋದ್ದೇಶ ಸಹಕಾರಿ ಸಂಘದ ಕಟ್ಟಡವನ್ನು ಅವರು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಮತ್ಸ್ಯಾಶ್ರಯ ಸ್ವಾವಲಂಬಿ ಯೋಜನೆ ಮಹಿಳೆಯರಿಗೆ ವರದಾನವಾಗಿ ಯಶಸ್ವಿಯಾಗಿ ನಡೆಯುತ್ತಿದೆ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಜಿಲ್ಲೆಯಲ್ಲಿ 110 ಸದಸ್ಯರಿಗೆ 14ಲಕ್ಷ ರೂ.ಗಳ ಸಾಲ ನೀಡಲಾಗಿದೆ. 10 ಜನರ ಗುಂಪಿಗೆ ತಲಾ 50ಸಾವಿರದಂತೆ 5ಲಕ್ಷವನ್ನು ಶೇ3ರ ಬಡ್ಡಿ ದರದಲ್ಲಿ ಮೀನುಗಾರ ಮಹಿಳೆಯರಿಗೆ ಸಾಲದ ಸೌಲಭ್ಯವನ್ನು ನೀಡಲಾಗುತ್ತಿದೆ. ಮಹಿಳೆಯರಿಗೆ ನೀಡುವ ಸಾಲದ ಮರುಪಾವತಿಯೂ ಜಿಲ್ಲೆಯಲ್ಲಿ ಶೇ100ರಷ್ಟು ಆಗಿದೆ ಎಂದು ಹೇಳಿದರು.

ಇತ್ತೀಚೆಗೆ ಬಂದ ಪ್ರವಾಹದಲ್ಲಿ ಹಾನಿಯಾದ ಉಪ್ಪೂರು ಹೇರೂರು ಉಗ್ಗೇಲ್‌ಬೆಟ್ಟು ಸಂಪರ್ಕ ಕಲ್ಪಿಸುವ ತೂಗು ಸೇತುವೆಯ ದುರಸ್ತಿಗೆ ಈಗಾಗಲೇ ರೂ.10ಲಕ್ಷ ನಿರ್ಮಿತಿ ಕೇಂದ್ರಕ್ಕೆ ಮಂಜೂರಾಗಿದೆ. ಶೀಘ್ರವೇ ಇದರ ದುರಸ್ತಿಕಾರ್ಯ ಪ್ರಾರಂಭಿಸಲಾ ಗುವುದು. ಚಾಂತಾರು ಹೇರೂರು ಗ್ರಾಮ ಪಂಚಾಯಿತಿಯ ಹೇರೂರು ಗ್ರಾಮ ಸುವರ್ಣ ಗ್ರಾಮ ಯೋಜನೆಯಡಿ ಗುರುತಿಸಿಕೊಂಡಿದ್ದು, ಅನೇಕ ಅಭಿವೃದ್ಧಿ ಕಾರ್ಯಗಳು ಇಲ್ಲಿ ಮಾಡಲಾಗುವುದು ಎಂದರು.

ಮಲ್ಪೆಯ ಉದ್ಯಮಿ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆ ವಹಿಸಿದ್ದರು.
ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನುಮಾರಾಟ ಫೆಡರೇಶನ್‌ನ ಅಧ್ಯಕ್ಷ ಯಶಪಾಲ್ ಸುವರ್ಣ ಭದ್ರತಾ ಕೊಠಡಿ ಉದ್ಘಾಟಿಸಿದರು.

ಚಾಂತಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ ವಾಸುದೇವ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಾಮಮೂರ್ತಿ ಮಯ್ಯ, ಹೇರೂರು ಮೀನುಗಾರರ ಪ್ರಾಥಮಿಕ ವಿವಿದ್ದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಸುವರ್ಣ ಉಗ್ಗೇಲ್‌ಬೆಟ್ಟು, ಸ್ಥಾಪಕಾಧ್ಯಕ್ಷ ದೇವು ತಿಂಗಳಾಯ, ಉಡುಪಿ ತಾಲ್ಲೂಕು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ವಿಜಯ್ ಕುಮಾರ್ ಮತ್ತಿತರರು ಇದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.