ADVERTISEMENT

ಸಾಮಾನ್ಯರಂತೆ ಕಾರ್ಯಕರ್ತರಂತೆ ಸಂತರ ಎಂಜಲು ಎಲೆ ಎತ್ತಿ ಕೈತೊಳೆಸಿದ ಸಿಖ್‌ ಗುರು

ತೃಪ್ತಿ .ಎಲ್‌ ಪೂಜಾರಿ
Published 27 ನವೆಂಬರ್ 2017, 9:42 IST
Last Updated 27 ನವೆಂಬರ್ 2017, 9:42 IST
ಸ್ವಾಮೀಜಿಗಳ ಎಂಜಲು ಎಲೆ ತೆಗೆಯುತ್ತಿರುವ ಪಂಜಾಬ್‌ನ ಸಿಖ್‌ ಗುರು ದಿಲೀಪ್‌ ಸಿಂಗ್‌.
ಸ್ವಾಮೀಜಿಗಳ ಎಂಜಲು ಎಲೆ ತೆಗೆಯುತ್ತಿರುವ ಪಂಜಾಬ್‌ನ ಸಿಖ್‌ ಗುರು ದಿಲೀಪ್‌ ಸಿಂಗ್‌.   

ಉಡುಪಿ: ಹಿರಿಯ ಸ್ವಾಮೀಜಿಗಳಿಗೆ ಕಿರಿಯರು ಸೇವೆ ಸಲ್ಲಿಸುವು ಸರ್ವೆ ಸಾಮಾನ್ಯ. ಆದರೆ ಉಡುಪಿಯಲ್ಲಿ ನಡೆದ ಧರ್ಮ ಸಂಸತ್‌ನಲ್ಲಿ ಪಂಜಾಬ್‌ನ ಸಿಖ್‌ ಗುರು ದಿಲೀಪ್‌ ಸಿಂಗ್‌ ಜೀ ಅವರು ಎಂಜಲು ಎಲೆ ಎತ್ತುವ ಮೂಲಕ ತಾವೊಬ್ಬರು ಗುರು ಅಲ್ಲ ಸೇವಕ ಎಂದು ಸಾರಿದರು.

ದೇಹ, ಆರೋಗ್ಯ, ಆಯಸ್ಸು, ಹಣ, ಕೀರ್ತಿ, ಯಾವುದು ಶಾಶ್ವತವಲ್ಲ, ಆತ್ಮ ಶುದ್ಧವಾಗಿರುವಂತೆ ಇತರರ ಸೇವೆಯಲ್ಲಿ ಬದುಕಿನ ಸಾರ್ಥಕತೆಯನ್ನು ಕೊಂಡುಕೊಂಡಾಗ ಮಾತ್ರ ಮನುಷ್ಯ ಸೇವೆ ಅಮರವಾಗಿರುತ್ತದೆ ಎಂಬುದಕ್ಕೆ ಅವರ ಸೇವೆ ಸಾಕ್ಷಿಯಾಗಿತ್ತು.
ಸತ್ಕಾರ್ಯಗಳನ್ನು ನೇರವೇರಿಸುವ ಮೂಲಕ ಸಾರ್ಥಕ ಜೀವನ ನಡೆಸುತ್ತಿರುವ ಸಿಖ್‌ ಗುರು ದಿಲೀಪ್‌ ಸಿಂಗ್‌ ಜೀ ಉಡುಪಿ ಧರ್ಮ ಸಂಸತ್‌ನಲ್ಲಿ ಕೇಂದ್ರ ಬಿಂದುವಾಗಿದ್ದರು.

ಬಿಳಿ ಜುಬ್ಬ ತೊಟ್ಟು ಉದ್ದ ಗಡ್ಡ ಸುಮಾರು 65ರ ಆಸುಪಾಸಿನ ಪಂಜಾಬ್‌ನ ದಿಲೀಪ್‌ ಸಿಂಗ್‌ ಜೀ ಧರ್ಮ ಸಂಸತ್‌ ಕೃಷ್ಣ ಪ್ರಸಾದಂನಲ್ಲಿ ಪಂಕ್ತಿಯಲ್ಲಿ ಊಟಮಾಡಿದ 1000 ಸ್ವಾಮೀಜಿಗಳ ಎಲೆ ಎತ್ತಿದರು. ಮೂರು ದಿನಗಳಿಂದಲೂ ಅವರು ಈ ಸೇವೆ ಮಾಡುತ್ತಿದ್ದಾರೆ.

ADVERTISEMENT

ಇದನ್ನು ನೋಡಿದ ಆನೇಕರು ಪ್ರಶ್ನಿಸಿದಾಗ ‘ನಾವು ದೇವರ ಸೇವಕ, ಸೇವೆಯ ನನ್ನ ಮುಖ್ಯ ಉದ್ದೇಶ’ ಎಂದು ಅವರು ಹೇಳಿದರು. ಅವರ ಸೇವಾ ಗುಣ ನೋಡಿ ಇತರ ಸ್ವಾಮೀಜಿಗಳು ಬೆರಗಾದರು.

ದೇಶದಾದ್ಯಂತ ಸಂಚರಿಸುವ ಅವರಿಗೆ ಕುಟುಂಬ ಇಲ್ಲ. ಆಸ್ತಿ– ಪಾಸ್ತಿಯೂ ಇಲ್ಲ. ಸಂಚರಿಸಿದ ಕಡೆಗಳಲ್ಲಿ ಶಿಷ್ಯರ ಮನೆಗಳಲ್ಲಿ ಉಳಿದುಕೊಳ್ಳುತ್ತಾರೆ. ಬೇರೆ ರಾಜ್ಯ ತೆರಳಿದಾಗ ಮಠ ಮಂದಿರದಲ್ಲಿ ನೆಲೆಸುತ್ತಾರೆ. ಸಾಮಾನ್ಯ ಜೀವನ ಸಾಗಿಸೋ ಇವರು ಚಿಕ್ಕ ವಯಸ್ಸಿನಲ್ಲಿಯೇ ಆಧ್ಯಾತ್ಮದ ಕಡೆ ವಾಲಿದ್ದರು.

ಛಾಯಾಚಿತ್ರಗಾರರೂ ಆಗಿರುವ ಅವರು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಹಲವಾರು ಪ್ರಶಸ್ತಿ ಪಡೆದಿದ್ದಾರೆ. ಅವರು ತೆಗೆದ ಫೋಟೋಗಳನ್ನು ಗುರುನಾನಕರ ಸಂದೇಶಗಳನ್ನು ಒಳಗೊಂಡ ಪುಸಕದಲ್ಲಿ ಮುದ್ರಿಸಲಾಗಿದೆ.

ಗುರುನಾನಕರ ಸಂದೇಶವನ್ನು ಅವರು ಪಸರಿಸುತ್ತಿದ್ದಾರೆ. ಗೋ ರಕ್ಷಣೆ ಹಾಗೂ ಜನಸಾಮಾನ್ಯರ ಸೇವೆಯನ್ನೂ ಮಾಡುತ್ತಿದ್ದಾರೆ. ಇಲ್ಲಿಯ ವರೆಗೆ ದೇಶದ ವಿವಿಧ ಮೂಲೆಯಲ್ಲಿ ನಡೆದ ಧರ್ಮ ಸಂಸತ್‌ನಲ್ಲಿ ಭಾಗವಹಿಸಿ ಅಲ್ಲಿ ಸ್ವಾಮೀಜಿಗಳ ಸೇವೆಯನ್ನು ಸಹ ಮಾಡಿದ್ದಾರೆ. ಯಾವುದೇ ಸ್ವಾರ್ಥ ಭಾವನೆ ಇಲ್ಲದೇ ನಡೆಸುತ್ತಿರುವ ಸೇವೆಗೆ ಆಗಮಿಸಿದ ಎಲ್ಲಾ ಸ್ವಾಮೀಜಿಗಳು ಪ್ರಾಶಂಸೆ ವ್ಯಕ್ತಪಡಿಸಿದ್ದಾರೆ.

ಇದು ಬದಲಾವಣೆಯ ಆರಂಭಿಕ ಹಂತ
‘ಸಿಖ್  ಗುರುಗಳ ನಿಸ್ವಾರ್ಥ ಸೇವೆ ಕಂಡು ನಿಜವಾಗಿಯೂ ಸಂತೋಷವಾಗುತ್ತಿದೆ. ಒಬ್ಬ ಸಿಖ್‌ ಗುರುವಾಗಿದ್ದುಕೊಂಡು ಸ್ವಾಮೀಜಿಗಳ ಎಂಜಲು ಎತ್ತುವ ಹಾಗೂ ಕೈ ತೊಳೆಸುವುದು ಸಾಮಾನ್ಯ ವಿಷಯವಲ್ಲ. ಇದು ಬದಲಾವಣೆಯ ಆರಂಭದ ಹಂತ’.
ಮಹಾನಂದ್‌ ಕುಮಾರ ಗಿರಿ ಮಠ, ಹರಿದ್ವಾರ.

* * 

‘ನಾನು ದೇವರ ಸೇವಕ, ಮನುಷ್ಯರು ಜೀವಿಸುವಾಗ ಕಲ್ಮಷವಿರಬಾರದು, ಇದ್ದರೂ ಕಳಂಕವಿಲ್ಲದಂತೆ ನಾಲ್ಕು ಜನರಿ ಸೇವೆ ಮಾಡಿ ಪುಣ್ಯವನ್ನು ಸಂಪಾದಿಸಿಕೊಳ್ಳಬೇಕು.’
ದಿಲೀಪ್‌  ಸಿಂಗ್‌ ಜೀ, ಸಿಖ್‌ ಗುರು
ಪಂಜಾಬ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.