ADVERTISEMENT

ಸಾವಯವ ಕೃಷಿ: ಹಳ್ಳಿ ಮಹಿಳೆಯ ಖುಷಿ

ಪ.ರಾಮಕೃಷ್ಣ
Published 9 ಏಪ್ರಿಲ್ 2013, 6:36 IST
Last Updated 9 ಏಪ್ರಿಲ್ 2013, 6:36 IST

ಬೆಳ್ತಂಗಡಿ ತಾಲ್ಲೂಕಿನ ನಡ ಗ್ರಾಮದ ಪೆರ್ಮಾಣುವಿನ ಅಂತರದಲ್ಲಿ ಹನ್ನೆರಡು ಮಂದಿಗಳಿರುವ ಅವಿಭಕ್ತ ಕುಟುಂಬವಿದೆ. ಇಲ್ಲಿ ಪುರುಷರು ಹೊರಗೆ ದುಡಿಯಲು ಹೋಗುತ್ತಾರೆ. ಮನೆಯಲ್ಲಿರುವ ಮಹಿಳೆಯರು ಗೃಹಕೃತ್ಯದ ಜತೆಗೆ ಅಚ್ಚುಕಟ್ಟಾಗಿ ಕೃಷಿ ಮಾಡಿ ಬಗೆಬಗೆಯ ತರಕಾರಿ.

ಮಲ್ಲಿಗೆ ಇತ್ಯಾದಿಗಳನ್ನು ಬೆಳೆಯುತ್ತಾರೆ. ಈ ಕೃಷಿ ಸಾಧನೆಗೆ ಪ್ರೇರಣೆಯಾಗಿರುವುದು ಲಾಯಿಲದ ದಯಾಳ್‌ಬಾಗ್ ಗ್ರಾಮೀಣಾಭಿವೃದ್ಧಿ ಯೋಜನೆ ಮಹಿಳೆಯರ ಸ್ವಾವಲಂಬನೆಗಾಗಿ ರೂಪಿಸಿದ ವಿಮುಕ್ತಿ ಸ್ವಸಹಾಯ ಸಂಘದ ಕಾರ್ಯಕ್ರಮ. ಇಂದು ಈ ಮನೆಯ ಮಹಿಳೆಯರು ಈ ಸ್ವಸಹಾಯ ಸಂಘದ ಸದಸ್ಯರಾಗಿ ತರಕಾರಿ ಕೃಷಿಯ ಮೂಲಕ ಸ್ವಂತ ಕಾಲಿನಲ್ಲಿ ನಿಲ್ಲಲು ವಿಮುಕ್ತಿಯ ಸಲಹೆ, ಆರ್ಥಿಕ ನೆರವು, ಮಾರ್ಗದರ್ಶನ ಎಲ್ಲವೂ ಆಧಾರವಾಗಿದೆ,

ತರಕಾರಿ ಕೃಷಿಯನ್ನು ಲಾಭದಾಯಕವಾಗಿ ಮಾಡುತ್ತಿರುವ ಮಹಿಳೆ ವಾರಿಜಾ. ಅವರ ಪತಿ ರಾಜು ಪೂಜಾರಿ ಬೇರೆಡೆ ಕೆಲಸಕ್ಕೆ ಹೋಗುತ್ತಾರೆ. ಮನೆಯಲ್ಲಿ ಹೈನುಗಾರಿಕೆಯಿರುವುದರಿಂದ ರಸಗೊಬ್ಬರದ ಸ್ಪರ್ಶವಿಲ್ಲದೆ ಸಾವಯವದಲ್ಲೇ ತರಕಾರಿ ಬೆಳೆಯಲು ಸುಲಭವಾಗಿದೆ. ಬೇಸಿಗೆಯಲ್ಲಿ ತೊಂಡೆ, ಬದನೆ, ಸೌತೆ, ಬೆಂಡೆ, ಅಲಸಂಡೆ, ಹರಿವೆ, ಬಸಳೆ ಮುಂತಾದ ಬಗೆಬಗೆಯ ತರಕಾರಿ ಕೃಷಿ ಮಾಡುವ ವಾರಿಜಾ ಅತಿ ಕಡಮೆ ಖರ್ಚಿನಲ್ಲಿ ಅಧಿಕ ಲಾಭ ತರುವುದು ಅಲಸಂಡೆ ಮತ್ತು ಬಸಳೆ ಎನ್ನುತ್ತಾರೆ.

ಬಸಳೆಗೆ ಎರಡು ದಿನಕ್ಕೊಮ್ಮೆ ಗಂಜಲಸಹಿತ ಸೆಗಣಿ ನೀರು ಮತ್ತು ಉಪ್ಪುನೀರು ಬುಡಕ್ಕೆ ಹಾಕುವುದರಿಂದ ತಿಂಗಳಲ್ಲೇ ಸೊಕ್ಕಿ ಬೆಳೆದು ವಾರದಲ್ಲಿ ಎರಡು ಸಲ ಮಾರಾಟಕ್ಕೆ ಸಿಗುತ್ತದೆ. ಎಲೆಗಳು ಅಗಲವಾಗಿ ದಂಡುಗಳು ದಪ್ಪಗಿರುತ್ತವೆ. ಕತ್ತರಿಸಿದಷ್ಟೂ ಚಿಗುರುಗಳು ಹೊಸದಾಗಿ ಒಡೆದು ಬೇಗನೆ ಸಿದ್ಧವಾಗುತ್ತವೆ. ರುಚಿ, ಪರಿಮಳ, ಬೇಯುವ ಗುಣದಿಂದಾಗಿ ಪೇಟೆಯಲ್ಲಿ ಸಾವಯವ ಬಸಳೆಗೆ ತುಂಬ ಬೇಡಿಕೆ ಇದೆ. ನೆನೆಸಿದ ಶೇಂಗಾಹಿಂಡಿಯ ನೀರು ಬುಡಕ್ಕೆ ಸೇರಿಸಿದರೆ ಬಸಳೆ ಇನ್ನೂ ಚೆನ್ನಾಗಿ ಬೆಳೆಯುತ್ತದೆ ಎಂಬುದು ವಾರಿಜಾ ಅವರ ಅನುಭವ. ಬಸಳೆ ಒಂದು ಕಟ್ಟಿಗೆ ಹತ್ತು ರೂಪಾಯಿ ಬೆಲೆ ಸಿಗುತ್ತದೆಂದು ಹೇಳುತ್ತಾರೆ. ಅವರ ಮಾತಿಗೆ ಸಮೃದ್ಧವಾದ ಬಸಳೆಯ ಉದ್ದನೆಯ ಚಪ್ಪರವೇ ಸಾಕ್ಷ್ಯ ಹೇಳುತ್ತದೆ.

ಇನ್ನು ಬೇಸಿಗೆಯಲ್ಲಿ ಲಾಭ ತರುವುದು ಅಲಸಂಡೆ. ಇದರ ಬೀಜ ಬಿತ್ತುವಾಗಲೇ ಸಾಲುಗಳಿಗೆ ಬೂದಿ ಹಾಕಿ ಗಿಡವಾದ ಮೇಲೆ ಒಮ್ಮೆ ಮಾತ್ರ ಸೆಗಣಿಗೊಬ್ಬರ ಇರಿಸಿದರೆ ಸಾಕು. ಆಗಾಗ ಬೂದಿ ಇದ್ದರೆ ಹಾಕಿ ಬುಡಕ್ಕೆ ಮಣ್ಣಿನ ಏರು ಹಾಕುವುದರಿಂದ ಬಳ್ಳಿ ಚೆನ್ನಾಗಿ ಬೆಳೆಯುತ್ತದೆ. ಅಧಿಕ ಎಲೆಗಳು ಬಂದರೆ ಕೀಳಬೇಕು. ಇಲ್ಲವಾದರೆ ಹೂ ಬಿಡುವುದಿಲ್ಲ. ಬಂಬೂಚಿಯ ಕಾಟವಿದ್ದರೆ ಬೇವಿನಣ್ಣೆ ಸಿಂಪಡಿಸಬೇಕು. ಇಷ್ಟೇ ಆರೈಕೆಯಿಂದ ಎರಡು ತಿಂಗಳ ಕಾಲ ವಾರದಲ್ಲೆರಡು ಸಲ ಸಮೃದ್ಧಿಯಾಗಿ ಅಲಸಂಡೆ ಮಾರಬಹುದಂತೆ. ಚಳಿಗಾಲಕ್ಕಿಂತ ಬೇಸಗೆ ಮತ್ತು ಮಳೆಗಾಲದಲ್ಲಿ ಅಲಸಂಡೆಯ ಫಸಲು ಅಧಿಕ ಎಂಬ ಗುಟ್ಟನ್ನು ಬಿಚ್ಚುತ್ತಾರೆ ವಾರಿಜಾ.

ಇನ್ನೊಂದೆಡೆ ವೀಳ್ಯದ ಕೃಷಿಯನ್ನೂ ಮಾಡಿರುವ ವಾರಿಜಾ ತಮ್ಮ ಕುಟುಂಬದಲ್ಲಿ ಹನ್ನೆರಡು ಮಂದಿ ಒಟ್ಟಾಗಿ ಇರುವುದರಿಂದ ತಾವೆಲ್ಲರೂ ಒಂದಾಗಿ ಇದರ ಕೆಲಸ ಮಾಡಲು ಸುಲಭವಾಗಿದೆ. ಸ್ವಸಹಾಯ ಸಂಘದಿಂದ ಪಡೆದ ಸಾಲವನ್ನು ಮರುಪಾವತಿ ಮಾಡಲು ತರಕಾರಿ ಕೃಷಿಯೇ ನೆರವಾಗಿದೆ. ವೀಳ್ಯದೆಲೆಗೂ ಉತ್ತಮ ಧಾರಣೆಯಿರುವುದರಿಂದ ನೆಮ್ಮದಿಯ ಜೀವನ ಸಾಧ್ಯವಾಗಿದೆ. ರಸಗೊಬ್ಬರವನ್ನು ಬಳಸದ ಕಾರಣ ಸ್ಥಳೀಯವಾಗಿಯೂ ನಮ್ಮ ಫಸಲಿಗೆ ಬೇಡಿಕೆಯಿದೆ. ವರ್ಷದಲ್ಲಿ ಇಪ್ಪತ್ತೈದು ಸಾವಿರ ರೂ.ಲಾಭವೂ ಸಿಗುತ್ತಿದೆಯೆಂದು ಸಂತಸಪಡುತ್ತಾರೆ. (99727 25667).
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.