ADVERTISEMENT

‘ಸೇನಾವೃತ್ತಿಯ ಹಿಂದೆ ದೇಶಪ್ರೇಮದ ಸೆಳೆತ’

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2017, 10:47 IST
Last Updated 30 ನವೆಂಬರ್ 2017, 10:47 IST

ಬೈಂದೂರು: ಸೇನೆಯಲ್ಲಿನ ದುಡಿಮೆ ಅನ್ಯ ವೃತ್ತಿಗಳಂತಲ್ಲ. ಅದರ ಹಿಂದೆ ದೇಶಪ್ರೇಮದ ಪ್ರೇರಣೆ, ಸೆಳೆತ ಇರುತ್ತದೆ ಎಂದು ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸುಬ್ರಹ್ಮಣ್ಯ ಭಟ್ ಹೇಳಿದರು.

ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಣೂರಿನ ಗೀತಾನಂದ ಫೌಂಡೇಷನ್ ಜಂಟಿ ಆಶ್ರಯದಲ್ಲಿ ನಾಡದಲ್ಲಿ ಭಾನುವಾರ ನಡೆದ ತಿಂಗಳ ಸಡಗರ ಸರಣಿಯ ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರೀಮಂತ ವರ್ಗದವರು ದೇಶ ಕಾಯುವ ಕಾಯಕಕ್ಕೆ ತಮ್ಮ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಚಿಕ್ಕಂದಿನಿಂದಲೇ ಮಕ್ಕಳಿಗೆ ರಾಷ್ಟ್ರಪ್ರೇಮದ ಪಾಠ ಬೋಧಿಸಿದರೆ ಅವರು ಸ್ವಯಂಪ್ರೇರಣೆಯಿಂದ ದೇಶ ಸೇವೆಗೆ ಮುಂದಾಗುತ್ತಾರೆ ಎಂದರು.

ADVERTISEMENT

ನಾಡ ಗುಡ್ಡೇಅಂಗಡಿ ನಿವಾಸಿ ಮಾಜಿ ಸೈನಿಕ ವೆನೆಸಿಸ್ ಪಿರೇರಾ ದಂಪತಿಯನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಹಿಂದೆ ಸೈನಿಕರ ಜೀವನ ದುಸ್ತರವಾಗಿತ್ತು. ಶಸ್ತ್ರಾಸ್ತ್ರಗಳ ಕೊರತೆ ಇತ್ತು. ಆದರೆ, ಈಗ ನಮ್ಮ ದೇಶದ ಮೂರು ಸೇನೆಗಳು ಸದೃಢವಾಗಿದ್ದು, ಶತ್ರುರಾಷ್ಟ್ರಗಳ ಆಕ್ರಮಣವನ್ನು ಸಮರ್ಥವಾಗಿ ಹಿಮ್ಮೆಟ್ಟಿಸುವ ತಾಕತ್ತು ಅವುಗಳಿಗಿದೆ. ಸೈನಿಕರ ಕುರಿತಾಗಿ ಪ್ರತಿಯೊಬ್ಬರಿಗೂ ಹೆಮ್ಮೆ, ಅಭಿಮಾನ, ಗೌರವ ಇರಬೇಕು. ಆಗ ಗಡಿಯಲ್ಲಿ ತಮ್ಮ ಜೀವವನ್ನು ಒತ್ತೆಯಿರಿಸಿ ನಮ್ಮನ್ನು ಕಾಯುವ ಯೋಧರಿಗೆ ಕೆಲಸ ಮಾಡಲು ಇನ್ನಷ್ಟು ಹುಮ್ಮಸ್ಸು, ಉತ್ಸಾಹ ಬರುತ್ತದೆ’ ಎಂದರು.

ಸಾಮಾಜಿಕ ಕಾರ್ಯಕರ್ತ ಪ್ರಭು ಕೆನಡಿ ಪಿರೇರಾ, ಮಂಜುನಾಥ ಹೆಬ್ಬಾರ್, ಶಿಕ್ಷಕ ಸ್ಟಾಲಿನ್ ಪಿರೇರಾ, ಪ್ರಭು ಆರ್ಥರ್ ಪಿರೇರಾ, ಪ್ರಕಾಶ ಹೆಬ್ಬಾರ್ ಇದ್ದರು. ಘಟಕದ ಕಾರ್ಯದರ್ಶಿ ಡಾ. ಕಿಶೋರಕುಮಾರ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ರವೀಂದ್ರ ಎಚ್. ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.