ADVERTISEMENT

ಸೊರಕೆಗೆ ಪುತ್ತೂರು ಕ್ಷೇತ್ರ ಆರಿಸಲು ಸೂಚನೆ?

ಕಾಪು ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿಗೆ ಮತ್ತೆರಡು ಹೆಸರು ಸೇರ್ಪಡೆ

ಪ್ರಕಾಶ ಸುವರ್ಣ ಕಟಪಾಡಿ
Published 13 ಏಪ್ರಿಲ್ 2013, 8:24 IST
Last Updated 13 ಏಪ್ರಿಲ್ 2013, 8:24 IST

ಶಿರ್ವ:  ಕಾಪು ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿಕೆಟ್ ಹಂಚಿಕೆ ಹೈಕಮಾಂಡ್‌ಗೆ ದಿನೇ ದಿನೇ ಕಗ್ಗಂಟಾಗಿ ಪರಿಣಮಿಸುತ್ತಿದೆ. ಅಂತಿಮ ಪಟ್ಟಿಯಲ್ಲಿ ಮಂಚೂಣಿಯಲ್ಲಿದ್ದ ಮೂವರು ಆಕಾಂಕ್ಷಿಗಳ ಜೊತೆಗೆ ಇದೀಗ ಮತ್ತೆ ಎರಡು ಹೊಸ ಹೆಸರುಗಳು ಕೇಳಿಬರುತ್ತಿವೆ.  ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬ ಕುತೂಹಲ ಕಾರ್ಯಕರ್ತರದ್ದು.

ನಾಮಪತ್ರ ಸಲ್ಲಿಸುವ ಅಂತಿಮ ದಿನಾಂಕ ಸಮೀಪಿಸುತ್ತಿದ್ದರೂ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದ್ದು, 20ರಿಂದ 3ಕ್ಕಿಳಿದಿದ್ದ ಆಕಾಂಕ್ಷಿಗಳ ಪಟ್ಟಿ ಇದೀಗ ಹೊಸ ರಾಜಕೀಯ ಬೆಳವಣಿಯಿಂದಾಗಿ 5ಕ್ಕೇರಿದೆ. ಕಾಪು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವಿನಯಕುಮಾರ್ ಸೊರಕೆಗೆ ಪುತ್ತೂರು ಕ್ಷೇತ್ರ ಆರಿಸುವಂತೆ ಹೈಕಮಾಂಡ್ ಸೂಚಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಹಿನ್ನೆಲೆಯಲ್ಲಿ ಮತ್ತೆ ಇಬ್ಬರು ಆಕಾಂಕ್ಷಿಗಳ ಹೆಸರು ಸೇರ್ಪಡೆಗೊಂಡಿದೆ. ಪ್ರಾರಂಭದಿಂದಲೂ ಟಿಕೆಟ್ ರೇಸ್‌ನಲ್ಲಿದ್ದ ಮಾಜಿ ಸಚಿವ ವಸಂತ ವಿ.ಸಾಲ್ಯಾನ್, ಸಮಾಜ ಸೇವಕ ಸುರೇಶ್ ಪಿ.ಶೆಟ್ಟಿ ಗುರ್ಮೆ, ಮಾಜಿ ಸಂಸದ ವಿನಯಕುಮಾರ್ ಸೊರಕೆ ಜೊತೆಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎ.ಗಫೂರ್ ಹಾಗೂ ಕೆ.ಎಂ.ಎಫ್. ಮಾಜಿ ಅಧ್ಯಕ್ಷ ಕಾಪು ದಿವಾಕರ್ ಶೆಟ್ಟಿ ಕೂಡಾ ಇದೀಗ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈ ಐವರಲ್ಲಿ ಒಬ್ಬರಿಗೆ ಮಾತ್ರ ಟಿಕೆಟ್ ದೊರೆಯುವುದು ಖಚಿತವಾದರೂ ಈ ಐವರು ಪ್ರಭಾವಿ ಅಭ್ಯರ್ಥಿಗಳ ಪರ ಹೈಕಮಾಂಡ್‌ಗೆ ಒತ್ತಡ ತಂತ್ರ ಜೋರಾಗಿದೆ.

ಐವರು ಆಕಾಂಕ್ಷಿಗಳ ಪೈಕಿ 5 ಬಾರಿ ಕ್ಷೇತ್ರದ ಶಾಸಕರಾಗಿದ್ದ ವಸಂತ ವಿ.ಸಾಲ್ಯಾನ್ ಮತ್ತು ಕಾಂಗ್ರೆಸಿನ ಹೊಸಮುಖ ಉದ್ಯಮಿ ಸುರೇಶ್ ಪಿ.ಶೆಟ್ಟಿ ಗುರ್ಮೆ ಪರ ಹೈಕಮಾಂಡ್ ಒಲವು ಹೆಚ್ಚಿದೆ. ಕಾಂಗ್ರೆಸ್‌ನ ಹಿರಿಯ ನಾಯಕರು ಕೂಡಾ ಈ ಇಬ್ಬರಲ್ಲಿ ಯಾರಾದರೂ ಒಬ್ಬರಿಗೆ ಟಿಕೆಟ್ ನೀಡಿ ಪಕ್ಷವನ್ನು ಗೆಲ್ಲಿಸಬೇಕು ಎಂಬ ನಿಟ್ಟಿನಲ್ಲಿ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಎಂ.ಎ.ಗಫೂರ್ ಅಲ್ಪಸಂಖ್ಯಾತ ಸಮುದಾಯದವರಾದರೆ, ದಿವಾಕರ್ ಶೆಟ್ಟಿ ಅವರು ಬಂಟ ಸಮುದಾಯದವರು. ಟಿಕೆಟ್ ಗೊಂದಲ ಹೆಚ್ಚಿದ್ದು ಕೊನೆಯ ಕ್ಷಣದಲ್ಲಿ ಯಾವುದೇ ಬದಲಾವಣೆ, ಮಾಡಲು ಇಚ್ಛಿಸದ ಕಾಂಗ್ರೆಸ್ ಹೈಕಮಾಂಡ್ ಕಾಪು ಕ್ಷೇತ್ರದಲ್ಲಿ ಗೆಲ್ಲುವ ಕುದುರೆಯನ್ನೇ ಅಭ್ಯರ್ಥಿಯನ್ನಾಗಿಸುವ ಹರಸಾಹಸ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಯಾವುದೇ ಒತ್ತಡಗಳಿಗೆ ಮಣಿಯದೆ ಗೆಲುವು ಸಾಧಿಸುವ ಅಭ್ಯರ್ಥಿಗೆ ಮಣೆಹಾಕಲಿದೆ.
ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿ ಹೈಕಮಾಂಡ್ ವಿಳಂಬ ನೀತಿ ತೋರುತ್ತಿದೆ ಎಂಬುದು ಕಾಂಗ್ರೆಸ್ ನಾಯಕರ ಸಮಜಾಯಿಷಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.