ADVERTISEMENT

ಹಾಲಾಡಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕ

ಪಕ್ಷದ ನಾಯಕರ ಗೆಲುವನ್ನು ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 16 ಮೇ 2018, 9:01 IST
Last Updated 16 ಮೇ 2018, 9:01 IST

ಉಡುಪಿ 5 ಕ್ಷೇತ್ರಗಳಲ್ಲಿ ಬಿಜೆಪಿ ಅಭೂತ ಪೂರ್ವ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ‘ಮೋದಿ’ ಘೋಷಣೆ ಮೊಳಗಿಸಿದರು. ಕಾರ್ಯಕರ್ತರ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ಟಿ.ಎ. ಪೈ ಆಂಗ್ಲ ಮಾಧ್ಯಮ ಶಾಲೆಗೆ ಮುಂಜಾನೆ ಆರು ಗಂಟೆಯಿಂದಲೇ 5 ವಿಧಾನಸಭಾ ಕ್ಷೇತ್ರ ಅಭ್ಯರ್ಥಿಗಳ ಬೆಂಬಲಿಗರು ಬಂದಿದ್ದರು. ಮತ ಎಣಿಕೆ ಆರಂಭದಲ್ಲಿ ಕೇವಲ ಕುಂದಾಪುರ ಕ್ಷೇತ್ರದ ಅಭ್ಯರ್ಥಿ ಬೆಂಬಲಿತ ಕಾರ್ಯಕರ್ತರು ಇರುವ ದೃಶ್ಯ ಕಂಡು ಬಂದಿತು. ಬೆಳಿಗ್ಗೆ 9.15 ಸುಮಾರಿಗೆ ಒಂದನೇ ಸುತ್ತಿನ ಫಲಿತಾಂಶ ಹೊರ ಬರುತ್ತಿದಂತೆ ಜಿಲ್ಲೆಯ ಎಲ್ಲ ಕ್ಷೇತ್ರದ ಅಭ್ಯರ್ಥಿಗಳ ಬೆಂಬಲಿಗರು ಒಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಪರ ಘೋಷಣೆ ಕೂಗಿದರು.

ಪ್ರತಿಯೊಂದು ಮುನ್ನಡೆಯನ್ನು ಬಿಜೆಪಿ ಪಕ್ಷ ಕಾರ್ಯಕರ್ತರು ಗೆಲುವಿನಂತೆ ಸಂಭ್ರಮಿಸಿದರು. 5 ವಿಧಾನ ಸಭಾ ಕ್ಷೇತ್ರದ ಫಲಿತಾಂಶದಲ್ಲಿ ಅಭ್ಯರ್ಥಿಗಳ ಮುನ್ನಡೆ, ಫಲಿತಾಂಶ ಹೊರ ಬೀಳುತ್ತಿದಂತೆ ಕಾರ್ಯಕರ್ತ ಹುರುಪು ಹೆಚ್ಚಾಯಿತು. ಮೂರನೇ ಸುತ್ತಿನ ಫಲಿತಾಂಶ ಹೊರ ಬೀಳುತ್ತಿದಂತೆ ಎಂಜಿಎಂ ಮೈದಾನಕ್ಕೆ ಅಗಮಿಸುವವರ ಕಾರ್ಯಕರ್ತರ ಸಂಖ್ಯೆ ಹೆಚ್ಚಾಗುತ್ತಾ ಹೋದಂತೆ ಕಾಂಗ್ರೆಸ್‌ ಕಾರ್ಯಕರ್ತರ ಸಂಖ್ಯೆ ಕ್ಷೀಣಿಸಿತು.

ADVERTISEMENT

ಸುಮಾರು 7 ಸುತ್ತಿನ ಫಲಿತಾಂಶ ಹೊರ ಬೀಳುತ್ತಿದಂತೆ ಕಾರ್ಯಕರ್ತರು ಪಕ್ಷದ ಬೃಹತ್‌ ಗಾತ್ರದ ಬಾವುಟವನ್ನು ಹಿಡಿದು ಮೈದಾನದ ತುಂಬ ತಿರುಗಿದರು. ಫಲಿತಾಂಶದ ವಿವರವನ್ನು ಫೇಸ್‌ ಬುಕ್‌ನಲ್ಲಿ ಲೈವ್‌ ನೀಡಿದರು. ಇನ್ನು ಕೆಲವರು ತಮ್ಮ ಅಪ್ತರಿಗೆ ದೂರವಾಣಿಯಲ್ಲಿ ಮಾಹಿತಿಯನ್ನು ನೀಡುವುದರಲ್ಲಿ ಮಗ್ನರಾಗಿದ್ದರು. ಮೋಡ ಕವಿದ ವಾತವಾರಣ ಅವರ ಸಂಭ್ರಮಕ್ಕೆ ಇನ್ನಷ್ಟು ಮೆರಗು ನೀಡಿತ್ತು.

ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಖಚಿತವಾಗುತ್ತಿದಂತೆ ಕಾರ್ಯಕರ್ತರು ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪರ ಘೋಷಣೆ ಹಾಕಿದರು. ಅನೇಕ ಕಾರ್ಯಕರ್ತರು ಹಾಲಾಡಿ ಅವರ ಭಾವಚಿತ್ರ ಹೊಂದಿರುವ ಟೀ ಶರ್ಟ್‌ ಹಾಗೂ ಅವರ ಭಾವ ಚಿತ್ರವನ್ನು ಕೊರಳಿಗೆ ಹಾಕಿಕೊಂಡು ಮುನ್ನಡೆಯನ್ನು ಸಂಭ್ರಮಿಸಿದರು. ಯಾವಾಗ ಕುಂದಾಪುರ ಕ್ಷೇತ್ರದಲ್ಲಿ ಅಭ್ಯರ್ಥಿ ಗೆಲುವು ನಿಶ್ಚಿತವಾಯಿತೋ ಕಾರ್ಯಕರ್ತರು ಶ್ರೀನಿವಾಸ ಶೆಟ್ಟಿ ಅವರ ಭಾವಚಿತ್ರಕ್ಕೆ ಹಾಲಿ ಅಭಿಷೇಕ ಮಾಡಿದರು.

ಕಾಪು, ಬೈಂದೂರು, ಕಾರ್ಕಳ ಅಭ್ಯರ್ಥಿಗಳಾದ ಸುಕುಮಾರ್‌ ಶೆಟ್ಟಿ, ವಿ.ಸುನೀಲ್‌ ಕುಮಾರ್‌, ಲಾಲಾಜಿ ಮೆಂಡನ್‌ ಅವರು ಗೆಲುವು ಖಚಿತವಾಗುತ್ತಿದ್ದಂತೆ ಮತ ಎಣಿಕ ಕೇಂದ್ರಕ್ಕೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಫೋಟೋ ತೆಗೆದುಕೊಳ್ಳುವ ಮೂಲಕ ಸಂಭ್ರಮಿಸಿದರು. ಕಾಂಗ್ರೆಸ್‌ ಅಭ್ಯರ್ಥಿ ರಾಕೇಶ್‌ ಮಲ್ಲಿ ಅವರು ಸೋಲು ಖಚಿತವಾಗುತ್ತಿದ್ದಂತೆ ಮತ ಎಣಿಕೆ ಕೇಂದ್ರದಿಂದ ನಿರ್ಗಮಿಸಿದರು. ಇದನ್ನು ಕಂಡ ಬಿಜೆಪಿ ಕಾರ್ಯಕರ್ತರು ಎತ್ತರದ ಧ್ವನಿಯಲ್ಲಿ ಮೋದಿ ಘೋಷಣೆಯನ್ನು ಕೂಗುವ ಮೂಲಕ ಸಂತೋಷ ವ್ಯಕ್ತಪಡಿಸಿದರು.

ಚುನಾವಣಾ ನೀತಿ ಸಂಹಿತೆ ಹಾಗೂ ಕಾನೂನು ಸುವ್ಯವಸ್ಥೆ ಸಮಸ್ಯೆಯಾಗದಂತೆ ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹಾಗೂ ಚುನಾವಣಾಧಿಕಾರಿಗಳು ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದರು.

ಮುಗಿಲುಮುಟ್ಟಿದ ಸಂಭ್ರಮ

ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಖಚಿತವಾಗುತ್ತಿದ್ದಂತೆ ಕಾರ್ಯಕರ್ತರು ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪರ ಘೋಷಣೆ ಕೂಗಿದರು. ಅನೇಕ ಕಾರ್ಯಕರ್ತರು ಹಾಲಾಡಿ ಅವರ ಭಾವಚಿತ್ರ ಹೊಂದಿರುವ ಟೀ ಶರ್ಟ್‌ ಹಾಗೂ ಅವರ ಭಾವ ಚಿತ್ರವನ್ನು ಕೊರಳಿಗೆ ಹಾಕಿಕೊಂಡು ಮುನ್ನಡೆಯನ್ನು ಸಂಭ್ರಮಿಸಿದರು. ಯಾವಾಗ ಕುಂದಾಪುರ ಕ್ಷೇತ್ರದಲ್ಲಿ ಅಭ್ಯರ್ಥಿ ಗೆಲುವು ನಿಶ್ಚಿತವಾಯಿತೋ ಕಾರ್ಯಕರ್ತರು ಶ್ರೀನಿವಾಸ ಶೆಟ್ಟಿ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಸಂಭ್ರಮ ಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.