ಪಡುಬಿದ್ರಿ: ಉಡುಪಿ ಜಿಲ್ಲೆಯಲ್ಲಿರುವ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಮುಸ್ಲಿಂ ಸಮುದಾಯವನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಿದೆ. ಅದನ್ನು ಮುಂದಿನ ದಿನಗಳಲ್ಲಿ ಸರಿಪಡಿಸದಿದ್ದಲ್ಲಿ ಸಮುದಾಯ ತನ್ನದೇ ಆದ ನಿಲುವನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗುವುದು ಎಂದು ಮುಸ್ಲಿಂ ಜಮಾ ಅತ್ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಎಚ್ಚರಿಸಲಾಗಿದೆ.
ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ವತಿಯಿಂದ ಪಡುಬಿದ್ರಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಮಾ ಆತ್ ಪದಾಧಿಕಾರಿಗಳು ಹಾಗೂ ಮುಸ್ಲಿಂ ಸಂಘ ಸಂಸ್ಥೆಗಳ ಮುಖ್ಯಸ್ಥರ ಸಭೆಯಲ್ಲಿ ಪಾಲ್ಗೊಂಡಿದ್ದ ಪದಾಧಿಕಾರಿಗಳು ಸರ್ಕಾರ ಜಿಲ್ಲೆಯ ಮುಸ್ಲಿಂ ಸಮುದಾಯವನ್ನು ನಡೆಸಿಕೊಂಡ ರೀತಿ ಹಾಗೂ ಸರ್ಕಾರಿ ಸೌಲಭ್ಯಗಳ ನೀಡಿಕೆ ತಾರತಮ್ಯ ನೀತಿಯನ್ನು ಬಲವಾಗಿ ಖಂಡಿಸಿದರು. ಮುಂದಿನ ದಿನಗಳಲ್ಲಿ ಒಕ್ಕೂಟದ ಪದಾಧಿಕಾರಿಗಳು ಜಿಲ್ಲೆಯ ಜನ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಕ್ರಮ ತೆಗದುಕೊಳ್ಳಬೇಕೆಂದು ಆಗ್ರಹಿಸಿತು.
ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ. ಮೊಯಿದಿನಬ್ಬ ಅವರು ಮಾತನಾಡಿ, ಜಿಲ್ಲೆಯ ಮುಸ್ಲಿಂಮರ ಸಮಸ್ಯೆಗಳು, ಸರ್ಕಾರಿ ಅಧಿಕಾರಿಗಳಿಂದಾದ ತಾರತಮ್ಯ, ಸರ್ಕಾರದ ಯೋಜನೆಗಳಲ್ಲಿ ಒಳಮೀಸಲಾತಿ ನಿಯಮಗಳ ರದ್ಧತಿ, ನಿವೇಶನ ಹಂಚಿಕೆ, ಮಸೀದಿ, ಮದ್ರಸ, ದರ್ಗಾಗಳ ದುರಸ್ತಿ, ನವೀಕರಣಕ್ಕೆ ಹೆಚ್ಚಿನ ಅನುದಾನವನ್ನು ಮಂಜೂರು ಮಾಡುವುದು ಸೇರಿದಂತೆ ಸಂವಿಧಾನ ಬದ್ಧವಾದ ಹಕ್ಕುಗಳನ್ನು ದೊರಕಿಸಿಕೊಂಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಜನ ಪ್ರತಿನಿಧಿಗಳೊಂದಿಗೆ ಚರ್ಚಿಸುವುದಾಗಿ ಹೇಳಿದರು.
ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಯಾಹ್ಯಾ, ಒಕ್ಕೂಟದ ಹಿರಿಯ ಉಪಾಧ್ಯಕ್ಷ ಅಬ್ದುಲ್ಲಾ ಪರ್ಕಳ, ಎ.ಕೆ. ಸುಲೇಮಾನ್, ಕನ್ನಂಗಾರ್ ಜುಮ್ಮಾ ಮಸೀದಿಯ ಅಧ್ಯಕ್ಷ ಎಚ್.ಬಿ.ಮೊಹಮ್ಮದ್, ಪಡುಬಿದ್ರಿ ಜುಮ್ಮಾ ಮಸೀದಿ ಅಧ್ಯಕ್ಷ ಪಿ.ಎಂ. ಉಮಾರ್ ಫಾರೂಕ್, ಶಬ್ಬೀರ್ ಹುಸೇನ್, ಹಮ್ಮಬ್ಬ ಪಡುಬಿದ್ರಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್, ಕಾರ್ಯದರ್ಶಿ ಹುಸೇನ್ ಕೋಡಿ ಬೇಂಗ್ರೆ, ತಾಲ್ಲೂಕು ಘಟಕದ ಕಾರ್ಯದರ್ಶಿ ಅಬ್ದುಲ್ ಅಜೀಜ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.