ADVERTISEMENT

ಮೀನುಗಾರರಿಗೆ 10 ಸಾವಿರ ವಸತಿ: ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌

77ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 7:29 IST
Last Updated 27 ಜನವರಿ 2026, 7:29 IST
ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರು ಕರಾವಳಿ ಕಾವಲು ಪೊಲೀಸರಿಂದ ಗೌರವರಕ್ಷೆ ಸ್ವೀಕರಿಸಿದರು
ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರು ಕರಾವಳಿ ಕಾವಲು ಪೊಲೀಸರಿಂದ ಗೌರವರಕ್ಷೆ ಸ್ವೀಕರಿಸಿದರು   

ಉಡುಪಿ: ಮೀನುಗಾರರಿಗೆ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತೆ ಸಾಲ ಸೌಲಭ್ಯ, ವಿದ್ಯಾನಿಧಿ ಯೋಜನೆ, ಗುಂಪು ವಿಮಾ ಯೋಜನೆ ಸೇರಿದಂತೆ ವಸತಿ ರಹಿತ ಮೀನುಗಾರರಿಗೆ ಮತ್ಸ್ಯಾಶ್ರಯ ಯೋಜನೆಯಡಿ ರಾಜ್ಯದಲ್ಲಿ ಇದುವರೆಗೆ 10 ಸಾವಿರ ವಸತಿಗಳನ್ನು ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ತಿಳಿಸಿದರು.

ಇಲ್ಲಿನ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ 77ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ರೈತರ ಕಲ್ಯಾಣ ಉದ್ದೇಶದ ಯೋಜನೆಗಳಿಗೆ ವಿವಿಧ ಇಲಾಖೆ ಮೂಲಕ ಕಳೆದ ಎರಡು ವರ್ಷಗಳಲ್ಲಿ ಸರ್ಕಾರ ₹95 ಸಾವಿರ ಕೋಟಿಗೂ ಹೆಚ್ಚಿನ ಅನುದಾನ ಒದಗಿಸಿದೆ. ಇದರಿಂದ ಕಳೆದ ಸಾಲಿನಲ್ಲಿ ಕೃಷಿ ವಲಯದಲ್ಲಿ ಶೇ 4ರಷ್ಟು ಬೆಳವಣಿಗೆ ಸಾಧಿಸಲಾಗಿದೆ ಎಂದರು.

ADVERTISEMENT

ಜಿಲ್ಲೆಯ ಕೌಶಲ ತರಬೇತಿ ಕೇಂದ್ರಗಳಲ್ಲಿ ತಾಲ್ಲೂಕು ಹಾಗೂ ಅತಿ ಹಿಂದುಳಿದ ಗ್ರಾಮೀಣ ಪ್ರದೇಶದ ಯುವಕ– ಯುವತಿಯರಿಗೆ ಕೌಶಲ ತರಬೇತಿಯನ್ನು ಪಡೆಯಲು ಪೂರಕವಾಗುವಂತೆ ಅವರಿರುವ ಸ್ಥಳಕ್ಕೆ ತೆರಳಿ ತರಬೇತಿ ನೀಡಲು ಸ್ಕಿಲ್ಸ್ ಆನ್ ವ್ಹೀಲ್ಸ್ ಎಂಬ ಕೌಶಲ ರಥ ವಿನೂತನ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಆರೋಗ್ಯ ಸೇತು ಯೋಜನೆಯಡಿ 81 ಸಂಚಾರಿ ಆರೋಗ್ಯ ಘಟಕಗಳಿಗೆ ಚಾಲನೆ ನೀಡಲಾಗಿದೆ. ಜಿಲ್ಲೆಯ 4 ಸಂಚಾರಿ ಆರೋಗ್ಯ ಘಟಕಗಳು ದುರ್ಗಮ ಹಾಗೂ ಸಂಪರ್ಕ ರಹಿತ ಹಳ್ಳಿಗಳಿಗೆ ಸಂಚರಿಸಲಿದ್ದು, ಇದರಿಂದ ಜಿಲ್ಲೆಯ ಸುಮಾರು 9,218 ಕೊರಗ ಜನಾಂಗದ ನಾಗರಿಕರಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು. 

ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ, ಶಾಸಕ ಯಶ್‌ಪಾಲ್‌ ಸುವರ್ಣ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಜಿಲ್ಲಾ ಪಂಚಾಯಿತಿ ಸಿಇಒ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಉಪಸ್ಥಿತರಿದ್ದರು.

ಕೃಷಿಕರಿಗೆ ಸನ್ಮಾನ: ಕೃಷಿ ಇಲಾಖೆಯ ವತಿಯಿಂದ 2025-26 ನೇ ಸಾಲಿನ ಆತ್ಮ ಯೋಜನೆಯ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾದ ರೈತರುಗಳಾದ ಸುಮಾ, ಗುಲಾಬಿ, ಸೀತಾರಾಮ ಪೂಜಾರಿ, ರಾಜೀವಿ ನಾಯ್ಕ, ರೇವತಿ ಭಟ್, ಜೋಧಾ ಶೆಟ್ಟಿ, ಸುಚಿತ್ರಾ, ಸೀತು, ಅಣ್ಣಿ ಪರವ ಮತ್ತು ಸುಮತಿ ನಾಯಕ್ ಅವರುಗಳನ್ನು ಹಾಗೂ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾದ ಮಮತಾ ಪಿ.ಶೆಟ್ಟಿ, ವಸಂತಿ ಕರ್ಕೇರ, ಶ್ರೀನಿವಾಸ ರಾವ್, ಶಕೀಲ ಶೆಟ್ಟಿ ಹಾಗೂ ಭಾವನಾ ಭಟ್ ಅವರುಗಳನ್ನು ಸನ್ಮಾನಿಸಲಾಯಿತು.

2023-24 ನೇ ಸಾಲಿನ ಜಿಲ್ಲಾ ಮಟ್ಟದ ಕೃಷಿ ಪ್ರಶಸ್ತಿಗೆ ಆಯ್ಕೆಯಾದ ರೈತ ಪುರುಷರ ವಿಭಾಗದಲ್ಲಿ ಮಣೂರಿನ ಲಕ್ಷ್ಮಿ, ಕೆದೂರಿನ ಕರುಣಾಕರ ಶೆಟ್ಟಿ ಮತ್ತು ಪಾದೂರಿನ ನಿತ್ಯಾನಂದ ನಾಯಕ್ ಹಾಗೂ ರೈತ ಮಹಿಳೆಯರ ವಿಭಾಗದಲ್ಲಿ ನೀಲಾವರದ ಲಲಿತಾ ಶೆಟ್ಟಿ, ಗುಲ್ವಾಡಿ ನಾಗರತ್ನ ಪೂಜಾರಿ ಹಾಗೂ ಮಠದಬೆಟ್ಟು ಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.