ADVERTISEMENT

2007ರಿಂದಲೂ ಬ್ಲಾಗ್ ಬರಹಗಾರ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 10:00 IST
Last Updated 15 ಫೆಬ್ರುವರಿ 2012, 10:00 IST

ಉಡುಪಿ:  `ನಮ್ಮ ಸಮಾಜವನ್ನು ತಿದ್ದುವ ಪತ್ರಿಕಾರಂಗವೇ ದಾರಿತಪ್ಪುವಂತೆ ಕಾಸಿಗಾಗಿ ಸುದ್ದಿ, ಜಾಹೀರಾತು ರೂಪದ ಸುದ್ದಿಗಳಿಂದ ಅದರ ವಿಶ್ವಾಸಾರ್ಹತೆ ಕುಂಠಿತವಾಗುತ್ತಿದ್ದು ನಮ್ಮ ಪ್ರಜಾಪ್ರಭುತ್ವದ ನಾಲ್ಕನೇಯ ಆಧಾರ ಸ್ತಂಭವಾಗಿರುವ ಪತ್ರಿಕಾರಂಗ ವಿಶ್ವಾಸಾರ್ಹತೆ ಕಳೆದುಕೊಳ್ಳಬಾರದು~ ಎಂದು  ಸಚಿವ ಡಾ.ವಿ.ಎಸ್.ಆಚಾರ್ಯ ಹೇಳಿದ್ದರು.

ಬ್ರಹ್ಮಗಿರಿಯ ನಾಯರಕೆರೆ ಬಳಿ ನಿರ್ಮಾಣಗೊಂಡಿದ್ದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ `ಪತ್ರಿಕಾ ಭವನ~ವನ್ನು  ಜು.10ರಂದು ಉದ್ಘಾಟಿಸಿ ಈ ಮಾತು ಹೇಳಿದ್ದರು.ಪ್ರತಿಯೊಬ್ಬರೂ ತಮ್ಮ ತಮ್ಮ ಜವಾಬ್ದಾರಿ ಅರಿತು ನಡೆಯಬೇಕು. ಅಷ್ಟೇ ಅಲ್ಲ ತಮ್ಮ ಇತಿಮಿತಿಯನ್ನೂ ಅರಿತುಕೊಂಡಿರಬೇಕು. ಅದು ತಪ್ಪಿದರೆ ಅನಾಹುತವಾಗುತ್ತದೆ ಎನ್ನುವುದಕ್ಕೆ ನಮ್ಮ ಶಾಸಕಾಂಗ ಕೆಲವು ಸಲ ಕೈಗೊಳ್ಳುವ ನಿರ್ಣಯಗಳು ಸರಿಯಾಗಿರದೇ ನಗೆಪಾಟಲೀಗೀಡಾದ ಸಂದರ್ಭಗಳೂ ಇವೆ ಎಂದು ಆಚಾರ್ಯ ಹೇಳಿದ್ದರು.

ಪತ್ರಿಕಾರಂಗದಲ್ಲಿ ಯಾವುದೇ `ಒಳದಾರಿ~ಗಳಿಲ್ಲ. ಪಾರದರ್ಶಕವಾಗಿರಬೇಕು, ವಸ್ತುನಿಷ್ಠವಾಗಿ, ವಿಶ್ವಾಸಾರ್ಹತೆಯಿಂದ ಮುನ್ನಡೆಯಬೇಕು. ಹಾಗಾದಾಗ ಮಾತ್ರವೇ ಜನರ ಒಲವು ಗಳಿಸಲು ಸಾಧ್ಯ.
 
ಇದನ್ನು ಸಾರ್ವಜನಿಕ ಜೀವನದಲ್ಲಿರುವವರೆಲ್ಲರೂ ಅರಿಯಬೇಕು ಎಂದಿದ್ದರು. ಬಾಲ್ಯದಿಂದಲೂ ತಮಗೆ ಪತ್ರಿಕಾರಂಗದ ಬಗ್ಗೆ ವಿಶೇಷ ವ್ಯಾಮೋಹವಿದ್ದು ತಾವೊಂದು ವೇಳೆ ಆಗ ವೈದ್ಯಕೀಯ ಓದದೇ ಇದ್ದಲ್ಲಿ ಪತ್ರಿಕಾರಂಗದ ಮೂಲಕ ಸಾಮಾಜಿಕ ಕ್ಷೇತ್ರಕ್ಕೆ ಬರುತ್ತಿದ್ದೆನೇನೋ ಎಂದು ಆಚಾರ್ಯರು ಇದೇ ಸಂದರ್ಭದಲ್ಲಿ ಮಾಧ್ಯಮದವರ ಎದುರು ಹೇಳಿಕೊಂಡಿದ್ದರು.
 

ಆಚಾರ್ಯರಿಗೆ ಪತ್ರಿಕಾ ರಂಗದ ಬಗ್ಗೆ ಆಸಕ್ತಿ ಇತ್ತು. ತಮ್ಮದೇ ಆದ ಬ್ಲಾಗ್ ಕೂಡ ಮಾಡಿಕೊಂಡಿದ್ದರು! 2007ರಲ್ಲಿ ಅವರ ಬ್ಲಾಗ್ ಆರಂಭವಾಗಿತ್ತು. ಅದರಲ್ಲಿ 900ಕ್ಕೂ ಅಧಿಕ ಲೇಖನಗಳು ಇವೆ.
`ನಾನು ಆರಾಮ ಆಗಿದ್ದೇನೆ~: ಕೆಲವು ತಿಂಗಳುಗಳಿಂದ ಆಚಾರ್ಯರ ಆರೋಗ್ಯದ ಕೊಂಚ ಹದೆಗೆಡುತ್ತಿರುವ ಬಗ್ಗೆ ಮಾತುಗಳು ಕೇಳಿಬಂದಿದ್ದವು.

ಆದರೆ ಒಮ್ಮಿಂದ್ದೊಮ್ಮೇಲೆ ಇಂಥ ಆಘಾತ ಎದುರಿಸಬೇಕಾದೀತು ಎನ್ನುವುದು ಯಾರ ಊಹೆಗೂ ನಿಲುಕಿರಲಿಲ್ಲ. ಕಳೆದ ತಿಂಗಳು ಯುಪಿಸಿಎಲ್ ಗದ್ದಲ, ಪೇಜಾವರ ಶ್ರೀಗಳ ನಿರಶನದ ಸಂದರ್ಭದಲ್ಲಿ ಪ್ರೆಸ್‌ಕ್ಲಬ್‌ಗೆ ಆಗಮಿಸಿದ ಆಚಾರ್ಯರು ಬಳಲಿದ್ದರು. `ನನಗೆ ವಯೋಸಹಜವಾದ ಕೆಲವು ಸಣ್ಣಪುಟ್ಟ ಕಾಯಿಲೆ ಇದೆ. ಆದರೆ ಗಂಭೀರವಾಗಿದ್ದೇನೂ ಆಗಿಲ್ಲ~ ಎಂದು ಹೇಳಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT