ADVERTISEMENT

ಉಡುಪಿಯಲ್ಲಿ 421 ಮಂದಿಗೆ ಕೋವಿಡ್‌

ಜಿಲ್ಲೆಯಲ್ಲಿ ದಾಖಲಾದ ಗರಿಷ್ಠ ಸೋಂಕಿತ ಪ್ರಕರಣಗಳು: 321 ಗುಣಮುಖ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 13:51 IST
Last Updated 18 ಆಗಸ್ಟ್ 2020, 13:51 IST

ಉಡುಪಿ: ಜಿಲ್ಲೆಯಲ್ಲಿ ದಿಢೀರ್ ಕೋವಿಡ್ ಸೋಂಕಿನ ಪ್ರಮಾಣ ಏರಿಕೆಯಾಗಿದ್ದು, ಮಂಗಳವಾರ ಒಂದೇ ದಿನ 421 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದುವರೆಗೆ ಜಿಲ್ಲೆಯಲ್ಲಿ ದಾಖಲಾದ ಗರಿಷ್ಠ ಪ್ರಕರಣಗಳ ಸಂಖ್ಯೆ ಇದಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 8,666ಕ್ಕೇರಿಕೆಯಾಗಿದೆ.

ಉಡುಪಿಯಲ್ಲಿ ದ್ವಿಶತಕ: 421 ಸೋಂಕಿತರಲ್ಲಿ ಉಡುಪಿ ತಾಲ್ಲೂಕಿನ 203, ಕುಂದಾಪುರದ 158, ಕಾರ್ಕಳದ 50 ಹಾಗೂ ಬೇರೆ ಜಿಲ್ಲೆಗಳ 10 ಮಂದಿ ಇದ್ದಾರೆ. ಪ್ರಾಥಮಿಕ ಸಂಪರ್ಕದಿಂದ 150, ಶೀತ ಜ್ವರ ಲಕ್ಷಣಗಳಿದ್ದ 90, ತೀವ್ರ ಉಸಿರಾಟದ ಸಮಸ್ಯೆ ಇದ್ದ 17 ಹಾಗೂ ಅಂತರ ಜಿಲ್ಲೆ ಪ್ರಯಾಣ ಮಾಡಿದ್ದ 6 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

150 ಸೋಂಕಿತರಿಗೆ ಹೇಗೆ ಸೋಂಕು ತಗುಲಿದೆ ಎಂಬ ಮಾಹಿತಿ ಸಿಕ್ಕಿಲ್ಲ. ಅವರ ಪ್ರಾಥಮಿಕ ಸಂಪರ್ಕ ಹಾಗೂ ಪ್ರಯಾಣದ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

142 ಸೋಂಕಿರಲ್ಲಿ ರೋಗದ ಗುಣಲಕ್ಷಣಗಳು ಕಾಣಿಸಿಕೊಂಡರೆ, 279 ಜನರಲ್ಲಿ ಯಾವುದೇ ಲಕ್ಷಣಗಳಿಲ್ಲ. ಸೋಂಕು ಹರಡುವ ಅಪಾಯ ಕಡಿಮೆ ಇರುವ ಹಾಗೂ ರೋಗ ಲಕ್ಷಣಗಳು ಇಲ್ಲದ 295 ಸೋಂಕಿತರಿಗೆ ಹೋಂ ಐಸೊಲೇಷನ್‌ನಲ್ಲಿರಿಸಲಾಗಿದ್ದು, ಉಳಿದ 126 ಮಂದಿಗೆ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದರು.

ಜಿಲ್ಲೆಯಲ್ಲಿ ಇದುವರೆಗೂ 5,685 ಸೋಂಕಿತರು ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್‌ ಕೇರ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದರೆ, 2,974 ಸೋಂಕಿತರು ಮನೆಯಲ್ಲಿದ್ದು ಚಿಕಿತ್ಸೆ ಪಡೆದಿದ್ದಾರೆ. ಆಸ್ಪತ್ರೆಗಳಲ್ಲಿದ್ದ 4,300 ರೋಗಿಗಳು ಗುಣಮುಖರಾದರೆ, ಹೋಂ ಐಸೊಲೇಷನ್‌ನಲ್ಲಿದ್ದ 1,651 ಮಂದಿ ಗುಣರಾಗಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ 1,321, ಮನೆಯಲ್ಲಿ 1,316 ಮಂದಿ ಇದ್ದಾರೆ ಎಂದು ಮಾಹಿತಿ ನೀಡಿದರು.

1,837 ಮಾದರಿ ಸಂಗ್ರಹ: ಸಮುದಾಯದಲ್ಲಿ ಸೋಂಕು ಕಾಣಿಸಿಕೊಂಡಿರುವುದರಿಂದ ಕೋವಿಡ್‌ ಪರೀಕ್ಷಾ ಪ್ರಮಾಣವನ್ನು ಹೆಚ್ಚಿಸಲಾಗಿದ್ದು, ಮಂಗಳವಾರ 1,837 ಶಂಕಿತರ ಮಾದರಿ ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. 1,086 ವರದಿಗಳು ಬರುವುದು ಬಾಕಿ ಇದೆ.

321 ಗುಣಮುಖ: ಮಂಗಳವಾರ 321 ಸೇರಿ ಜಿಲ್ಲೆಯಲ್ಲಿ 5,951 ಸೋಂಕಿತರು ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 2,637 ಸಕ್ರಿಯ ಸೋಂಕಿತ ಪ್ರಕರಣಗಳು ಮಾತ್ರ ಇವೆ. ಇತರೆ ಗಂಭೀರ ಕಾಯಿಲೆಗಳಿಂದ ನರಳುತ್ತಿದ್ದ 78 ಸೋಂಕಿತರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.