ADVERTISEMENT

ಸಿದ್ದರಾಮಯ್ಯ ಹೇಳಿಕೆ ವಿರೋಧಿಸಿಜೈಲ್ ಭರೋ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 7:32 IST
Last Updated 14 ಜನವರಿ 2018, 7:32 IST

ಉಡುಪಿ: ಸಂಘ ಪರಿವಾರ ಮತ್ತು ಬಿಜೆಪಿಯ ಕಾರ್ಯಕರ್ತರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉಗ್ರಗಾಮಿಗಳು ಎಂದು ನಿಂದಿಸಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಶನಿವಾರ ಜೈಲ್‌ ಭರೋ ಪ್ರತಿಭಟನೆ ನಡೆಸಿದರು.

ಬ್ರಹ್ಮಗಿರಿ ವೃತ್ತದಲ್ಲಿ ಸೇರಿದ್ದ ಕಾರ್ಯಕರ್ತರು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ದೇಶಕ್ಕಾಗಿ ಹೋರಾಟ ಮಾಡಿರುವ ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯ ಕಾರ್ಯಕರ್ತರನ್ನು ಉಗ್ರಗಾಮಿಗಳಿಗೆ ಹೋಲಿಸಿರುವುದು ಖಂಡನೀಯ. ಮುಖ್ಯಮಂತ್ರಿ ಅವರು ಕ್ಷಮೆ ಯಾಚನೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಬ್ರಹ್ಮಗಿರಿ ವೃತ್ತದಿಂದ ಸ್ವಲ್ಪ ದೂರದಲ್ಲಿ ಇರುವ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಆ ನಂತರ ಬಿಡುಗಡೆ ಮಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಂಡ ದಿನದಿಂದಲೇ ಹಿಂದೂಗಳನ್ನು ಅವಹೇಳನ ಮಾಡುತ್ತಿದ್ದಾರೆ. ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರನ್ನು ಕೊಲೆ ಮಾಡುತ್ತಿರುವ ಪಾಪುಲರ್ ಫ್ರಂಟ್ ಆಫ್ ಇಂಡಿಯಾ, ಕರ್ನಾಟಕ ಫೋರಂ ಫಾರ್ ಡಿಗ್ನಿಟಿ ಸಂಘಟನೆಗಳ ಮೇಲೆ ಇದ್ದ ಪ್ರಕರಣಗಳನ್ನು ಅವರು ಹಿಂದಕ್ಕೆ ಪಡೆದಿದ್ದರು. ಆ ಮೂಲಕ ಇನ್ನಷ್ಟು ಹತ್ಯೆ ಕುಮ್ಮಕ್ಕು ನೀಡಿದರು ಎಂದು ಗಂಭೀರ ಆರೋಪ ಮಾಡಿದರು.

ADVERTISEMENT

ಹಿಂಸಾಚಾರ, ಕೊಲೆ ಮಾಡುವ ಮೂಲಕ ಹಿಂದೂ ಸಂಘಟನೆಗಳಿಗೆ ಸೇರುವವರ ಮೇಲೆ ಪರಿಣಾಮ ಬೀರ ಲು, ತಡೆಯಲು ಪ್ರಯತ್ನಿಸಲಾಗುತ್ತಿದೆ. ಆರ್‌ಎಸ್‌ಎಸ್‌ನ ಶಕ್ತಿ ಏನೆಂದಬುದು ಕಾಂಗ್ರೆಸ್‌ಗೆ ಗೊತ್ತಿಲ್ಲ. ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಜನರು ತಕ್ಕ ಪಾಠ ಕಲಿಸಬೇಕು ಎಂದರು. ಕೋಟ ಶ್ರೀನಿವಾಸ ಪೂಜಾರಿ, ಕೆ. ರಘುಪತಿ ಭಟ್, ಸುಪ್ರಸಾದ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್, ಶ್ರೀಶ ನಾಯಕ್, ಅಕ್ಷಿತ್ ಶೆಟ್ಟಿ, ಪ್ರಭಾಕರ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.