ADVERTISEMENT

125 ಅಡಿ ಎತ್ತರದ ಧ್ವಜಸ್ತಂಭದಲ್ಲಿ ರಾಷ್ಟ್ರ ಧ್ವಜಾರೋಹಣ– ಸಂಭ್ರಮ

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 7:08 IST
Last Updated 28 ಜನವರಿ 2018, 7:08 IST

ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ 125 ಅಡಿ ಎತ್ತರದ ಶಾಶ್ವತ ಧ್ವಜ ಸ್ತಂಭ ಮೇಲೆ 20x30 ಅಡಿ ಉದ್ದಗಲದ ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ ಗಣರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಿತು.

ದೇಶದ ಎಲ್ಲ ಕೇಂದ್ರೀಯ ವಿವಿಗಳು ವಾರದ 7 ದಿನಗಳ ಕಾಲವೂ ಧ್ವಜವನ್ನು ಹಾರಾಡಿಸಬೇಕೆಂದು ಕೇಂದ್ರ ಮಾನವ ಸಂಪನ್ಮೂಲ ಮಂತ್ರಾಲಯವು ಆದೇಶವನ್ನು ಹೊರಡಿಸಿದ್ದು, ಈ ಹಿನ್ನೆಲೆಯಲ್ಲಿ ಈ ನಿಯಮವನ್ನು ಪಾಲಿಸಲಾಗುತ್ತಿದೆ. ಇಷ್ಟು ಎತ್ತರದ ಧ್ವಜಸ್ತಂಭದ ಮೇಲೆ, ಇಷ್ಟು ದೊಡ್ಡ ಗಾತ್ರದ ಧ್ವಜವನ್ನು ಹಾರಾಡಿಸುತ್ತಿರುವ ದೇಶದ ಪ್ರಥಮ ವಿವಿ ಮಾಹೆಯಾಗಿದೆ ಎಂದು ವಿವಿ ತಿಳಿಸಿದೆ.

ಸುಮಾರು 400 ವ್ಯಾಟಿನ ಹೊನಲು ಬೆಳಕಿನ 4 ದೀಪಗಳನ್ನು ಧ್ವಜಸ್ತಂಭಕ್ಕೆ ಅಳವಡಿಸಿದ್ದು, ಕತ್ತಲಲ್ಲೂ ಧ್ಜಜವು ದೂರದವರೆಗೆ ಕಾಣಲಿದೆ. ಧ್ವಜಸ್ತಂಭವು ಬುಡದಲ್ಲಿ 650 ಮಿ.ಮಿ., ತುದಿಯಲ್ಲಿ 200 ಮಿ.ಮಿ. ಸುತ್ತಳತೆಯನ್ನು ಹೊಂದಿದ್ದು, 47ಮೀ.ಸೆ.ನಷ್ಟು ವೇಗದ ಗಾಳಿಯನ್ನು ತಡೆದುಕೊಳ್ಳವಂತಹ ಸಾಮರ್ಥ್ಯವನ್ನು ಹೊಂದಿದೆ.

ADVERTISEMENT

ಸ್ತಂಭದಲ್ಲಿ ಧ್ವಜವನ್ನು ಆರೋಹಣ, ಆವರೋಹಣ ಮಾಡಲು ಯಂತ್ರವೊಂದನ್ನು ಅಳಪಡಿಸಲಾಗಿದೆ. ಧ್ವಜ ಅರೋಹಣಗೊಳಿಸಲು 5 ನಿಮಿಷಗಳ ಕಾಲ ತಗಲುತ್ತದೆ. ಈ ಧ್ವಜ ಇನ್ನು ಮುಂದೆ 24x7 ಗಂಟೆ ಕಾಲ ಹಾರಾಟ ನಡೆಸಲಿದೆ ಎಂದು ಮಾಹೆ ತಿಳಿಸಿದೆ.

ಮಾಹೆಯಲ್ಲಿ ಶುಕ್ರವಾರ ನಡೆದ ಗಣರಾಜ್ಯೋತ್ಸವಲ್ಲಿ ಕುಲಾಧಿಪತಿ ಡಾ.ಎಚ್.ಎಸ್‌ ಬಲ್ಲಾಳ್‌ ಧ್ವಜಾರೋಹಣ ನೆರವೇರಿಸಿ, ವಿದ್ಯಾರ್ಥಿಗಳ ಪಥಸಂಚಲನ ತಂಡಗಳಿಂದ ಗೌರವ ರಕ್ಷೆ ಸ್ವೀಕರಿಸಿದರು. ಕುಲಪತಿ ಡಾ.ವಿನೋದ್ ಭಟ್ ಸಂದೇಶ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.