ADVERTISEMENT

8 ದಿನಗಳಿಂದ ಕೈಕೊಟ್ಟ ವಿದ್ಯುತ್‌: ಅಧಿಕಾರಿಗಳ ನಿರ್ಲಕ್ಷ್ಯ

ಉದ್ಯಾವರ ಬೊಳ್ಜೆ, ಪಿತ್ರೋಡಿ, ಅಂಕುದ್ರು ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 3 ಜೂನ್ 2018, 10:23 IST
Last Updated 3 ಜೂನ್ 2018, 10:23 IST

ಶಿರ್ವ: ಕರಾವಳಿ ಜನತೆ ತತ್ತರಿಸುವಂತೆ ಮಾಡಿದ ಚಂಡಮಾರುತ, ಅಕಾಲಿಕ ಮಳೆ, ಗಾಳಿಯಿಂದ ಶಿರ್ವದ ವಿವಿಧೆಡೆಯಲ್ಲಿ ಬೃಹತ್ ಮರ ಬಿದ್ದಿವೆ. ನೂರಾರು ವಿದ್ಯುತ್ ಕಂಬ ಹಾನಿಗೊಳಗಾಗಿ ಧರೆಗುರುಳಿದ ಪರಿಣಾಮ 8ದಿನಗಳಿಂದ ವಿದ್ಯುತ್‌ ಇಲ್ಲದೆ ಜನರು ಪರದಾಟ ಶುರುವಾಗಿದೆ.

ಉಡುಪಿ ತಾಲ್ಲೂಕಿನ ಉದ್ಯಾವರ, ಬೋಳಾರ್ ಗುಡ್ಡೆ, ಪಿತ್ರೋಡಿ, ಬೊಳ್ಜೆ ಪ್ರದೇಶಗಳಲ್ಲಿ ಕತ್ತಲೆಯಲ್ಲಿ ಜೀವನ ಸಾಗಿಸುವ ಜನರು, ಮೆಸ್ಕಾಂ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.

ಉದ್ಯಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗಾಳಿ ಮಳೆಗೆ ರಸ್ತೆ ಬದಿಯಲ್ಲಿ ಹೆಚ್ಚಿನ ಮರಗಳು ಬಿದ್ದಿವೆ. ಇದರಿಂದಾಗಿ ಹಲವಾರು ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವಿಪರೀತ ಮಳೆ ಗಾಳಿ ಪರಿಣಾಮ ಮೆಸ್ಕಾಂನ ಸಿಮೀತ ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ತೋಡಗಿದ್ದಾರೆ. ಆದರೆ ಅದು ಪರಿಣಾಮಕಾರಿ ಆಗುತ್ತಿಲ್ಲ.

ADVERTISEMENT

ಸಾಕಷ್ಟು ಮಟ್ಟದಲ್ಲಿ ವಿದ್ಯುತ್ ಕಂಬ, ಕೇಬಲ್ ವಯರ್‌ಗಳನ್ನು ಪೂರೈಕೆ ಮಾಡುವಲ್ಲಿ ಇಲಾಖೆ ವೈಫಲ್ಯ ಕಾಣುತ್ತಿದೆ. ಹಾಗಾಗಿ ಎಲ್ಲ ಕಡೆಗಳಲ್ಲಿ ಒಟ್ಟಿಗೆ ನಿರ್ವಹಣೆ ಮಾಡಲಾಗದೆ ಸಮಸ್ಯೆ ಎದುರಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಉದ್ಯಾವರ, ಪಿತ್ರೋಡಿ ಪರಿಸರದಲ್ಲಿ ಹಂತ ಹಂತವಾಗಿ ಕಾಪು ಮತ್ತು ಕುಂಜಿಬೆಟ್ಟು ಲೈನ್‌ ಮೆಸ್ಕಾಂ ಸಿಬಂದ್ದಿ  ದುರಸ್ತಿ ಮಾಡಿದರೂ ಉದ್ಯಾವರ ದೇವಸ್ಥಾನದ ಸಮೀಪ, ಅಂಕುದ್ರು ಹಾಗೂ ಬೊಳ್ಜೆ ಸಮೀಪ ವಿದ್ಯುತ್ ಜೋಡಣೆ ಕಾರ್ಯ ವಿಳಂಬವಾಗಿದೆ. ಈ ಪ್ರದೇಶದಲ್ಲಿ ಚುರುಕು ಕಾರ್ಯ ನಡೆಸಿ ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಕರೆಂಟ್‌, ನೀರೂ, ಮೊಬೈಲ್‌ ಸ್ತಬ್ದ: ಉದ್ಯಾವರ ಗ್ರಾಮ ಪಂಚಾಯಿತಿ ಪಿತ್ರೋಡಿಯಲ್ಲಿ 50 ಕ್ಕೂ ಅಧಿಕ ಮನೆಗಳಲ್ಲಿ ಹಾಗೂ ಬೊಳ್ಜೆ ವ್ಯಾಪ್ತಿಯ 10 ಕ್ಕೂ ಅಧಿಕ ಮನೆಗಳಲ್ಲಿ ಎಂಟು ದಿನಗಳಿಂದ ವಿದ್ಯುತ್‌ ಇಲ್ಲದೆ ಕತ್ತಲೆಯಲ್ಲಿ ಜೀವನ ಸಾಗಿಸಬೇಕಾಗಿದೆ. ನೀರು, ಮೊಬೈಲ್ ಪೋನ್‌ ಬಳಕೆ ನಿಂತಿದೆ. ಶಾಲಾ, ಕಾಲೇಜುಗಳು ಆರಂಭ ಆಗಿರುವುದರಿಂದ ಈ ಪರಿಸರದಲ್ಲಿ ಮಕ್ಕಳ ಶಾಲಾ ಸಮವಸ್ತ್ರ ಸೇರಿದಂತೆ ಮನೆ ಮಂದಿ ತೊಳೆಯುವುದಕ್ಕೂನೀರು ಇಲ್ಲ.ಸೆಖೆ  ಇರುವುದರಿಂದ ರಾತ್ರಿ ವೇಳೆಯಲ್ಲಿ ಫ್ಯಾನ್ ಇಲ್ಲದೆ ವೇದನೆ ಪಡಬೇಕಾದ ಸ್ಥಿತಿ ನಿರ್ಮಾಣ ಆಗಿದೆ ಎಂದು ಶಶಿಧರ್ ಬೊಳ್ಜೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.