ADVERTISEMENT

9/11 ಆಸ್ತಿ ನೋಂದಣಿ ಪಂಚಾಯಿತಿ ಮಟ್ಟದಲ್ಲೇ ಇರಲಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 13:07 IST
Last Updated 15 ಜೂನ್ 2025, 13:07 IST
ಬ್ರಹ್ಮಾವರದ ಉನ್ನತಿ ಸಭಾಂಗಣದಲ್ಲಿ ಭಾನುವಾರ ನಡೆದ ‘ಮೋದಿ ಸರ್ಕಾರಕ್ಕೆ 11 ವರ್ಷ, ವಿಕಸಿತ ಭಾರತ ಸಂಕಲ್ಪ ಸಭೆ’ಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು
ಬ್ರಹ್ಮಾವರದ ಉನ್ನತಿ ಸಭಾಂಗಣದಲ್ಲಿ ಭಾನುವಾರ ನಡೆದ ‘ಮೋದಿ ಸರ್ಕಾರಕ್ಕೆ 11 ವರ್ಷ, ವಿಕಸಿತ ಭಾರತ ಸಂಕಲ್ಪ ಸಭೆ’ಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು   

ಬ್ರಹ್ಮಾವರ: ‘ಈ ಹಿಂದೆ ಆಸ್ತಿ ನೋಂದಣಿ ವಿಷಯಕ್ಕೆ ಸಂಬಂಧಿಸಿದ 9/11 ಅನ್ನು ಗ್ರಾಮ ಪಂಚಾಯಿತಿ ಹಂತದಲ್ಲೇ ನೀಡಲಾಗುತ್ತಿತ್ತು. ಇದೀಗ ರಾಜ್ಯ ಸರ್ಕಾರ ಜಿಲ್ಲಾಮಟ್ಟದಲ್ಲಿ ತೆಗೆದುಕೊಳ್ಳುವಂತೆ ಆದೇಶ ಹೊರಡಿಸಿದ್ದು, ಈ ಬಗ್ಗೆ ಪ್ರತಿಭಟನೆ, ಹೋರಾಟ ಅನಿವಾರ್ಯವಾಗಿದೆ’ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಬ್ರಹ್ಮಾವರದ ಉನ್ನತಿ ಸಭಾಂಗಣದಲ್ಲಿ ಭಾನುವಾರ ನಡೆದ ‘ಮೋದಿ ಸರ್ಕಾರಕ್ಕೆ 11 ವರ್ಷ, ವಿಕಸಿತ ಭಾರತ ಸಂಕಲ್ಪ’ ಸಭೆಯಲ್ಲಿ ಅವರು ಮಾತನಾಡಿದರು.

ಈ ಹಿಂದಿನಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಜನರಿಗೆ 9/11 ಸಿಗುವಂತಾಗಬೇಕು. ಈ ಸಂಬಂಧ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಪ್ರತಿಭಟನೆ, ಹೋರಾಟ ನಡೆಸಲು ಸಜ್ಜಾಗಿದ್ದೇವೆ ಎಂದು ಅವರು ಹೇಳಿದರು.

ADVERTISEMENT

ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಅವರ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಕಂಡಿದ್ದ ನಂತರ ಭಾರತ ಮತ್ತೆ ಅಭಿವೃದ್ಧಿ ಪಥದಲ್ಲಿ ಇಂದು ಸಾಗುತ್ತಿದೆ. ಮೋದಿ ಸರ್ಕಾರವು ಸಂಘರ್ಷ, ಸಮಸ್ಯೆಗಳ ನಡುವೆ ಇರುವುದು ಸಾಮಾನ್ಯ ವಿಷಯವಲ್ಲ. ಒಂದೆಡೆ ಮೋದಿ ಅವರು ದೇಶ ಕಟ್ಟುವ ಕೆಲಸ ಮಾಡುತ್ತಿದ್ದರೆ, ರಾಜ್ಯ ಸರ್ಕಾರ ಅನಾಹುತಗಳನ್ನು ಮಾಡುತ್ತಿದೆ ಎಂದರು.

ಆಯುಷ್ಮಾನ್‌ ಭಾರತ್‌, ಬಡವರ ಕಲ್ಯಾಣ ಅನುಷ್ಠಾನಕ್ಕೂ ರಾಜ್ಯ ಸರ್ಕಾರ ನಿರಾಸಕ್ತಿ ತೋರಿಸುತ್ತಿದೆ. 14 ಲಕ್ಷ ಜನರ ಸಂಧ್ಯಾ ಸುರಕ್ಷಾ ವಾಪಸ್‌ ಪಡೆಯುತ್ತಿರುವುದೇ ರಾಜ್ಯ ಸರ್ಕಾರದ ಸಾಧನೆ ಎಂದು ಆರೋಪಿಸಿದ ಅವರು, ಕೇಂದ್ರದ ಮೋದಿ ಸರ್ಕಾರದ ಯೋಜನೆ, ಯೋಚನೆಗಳನ್ನು ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತ ಜನಸಾಮಾನ್ಯರಿಗೆ ತಿಳಿಸಬೇಕು ಎಂದು ಹೇಳಿದರು.

ವಿಕಾಸ್‌ ಪುತ್ತೂರು ಮಾತನಾಡಿ, ಭಾರತದ ಸಂಸ್ಕೃತಿ, ಆಧ್ಯಾತ್ಮಿಕ ಮೌಲ್ಯಗಳು ಇಂದು ವಿಶ್ವದಾದ್ಯಂತ ಪಸರಿಸುವಂತೆ ಮಾಡಿರುವುದು, 25 ವರ್ಷಗಳಲ್ಲಿ ಭಯೋತ್ಪಾದನೆ ಚಟುವಟಿಕೆಯನ್ನು ಮಿಲಿಟರಿ ಪಡೆಯಿಂದ ನಾಶ ಮಾಡಿ ವಿಶ್ವದ ಗಮನ ಸೆಳೆಯುವಂತೆ ಮಾಡಿರುವುದು, ಹಿಂದೂ ವಿರೋಧಿ ಸಂಘಟನೆ ಪಾಪ್ಯುಲರ್‌ ಫ್ರಂಟ್‌ ಅನ್ನು ನರೇಂದ್ರ ಮೋದಿ ನಿಷೇಧಿಸಿದ್ದಾರೆ. ಒಬ್ಬ ಕಾಲೇಜು ವಿದ್ಯಾರ್ಥಿ ತನ್ನ ಭವಿಷ್ಯವನ್ನು ರೂಪಿಸಿಲು ಯೋಜನೆ, ಯೋಚನೆ ಹಾಕಿಕೊಳ್ಳುತ್ತಾನೋ, ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಗೆ ಯಾವಾಗಲೂ ಯೋಜನೆ, ಯೋಚನೆ ಮಾಡುತ್ತಾರೆ ಎಂದು ಹೇಳಿದರು.

ಬಿಜೆಪಿಯ ಉಡುಪಿ ಗ್ರಾಮಾಂತರ ಘಟಕದ ಅಧ್ಯಕ್ಷ ರಾಜೀವ ಕುಲಾಲ ಅಧ್ಯಕ್ಷತೆ ವಹಿಸಿದ್ದರು.

ಶಾಸಕ ಯಶಪಾಲ್‌ ಸುವರ್ಣ, ಪ್ರಮುಖರಾದ ಪ್ರಮೋದ್‌ ಮಧ್ವರಾಜ್‌, ಹರಿಮಕ್ಕಿ ರತ್ನಾಕರ ಶೆಟ್ಟಿ, ಜ್ಞಾನವಸಂತ ಶೆಟ್ಟಿ, ಬಿ.ಎನ್‌.ಶಂಕರ ಪೂಜಾರಿ, ರಾಜೇಶ ಶೆಟ್ಟಿ ಬಿರ್ತಿ, ಸುಪ್ರಸಾದ ಶೆಟ್ಟಿ ಬೈಕಾಡಿ, ಪೃಥ್ವಿರಾಜ ಶೆಟ್ಟಿ ಬಿಲ್ಲಾಡಿ, ಚೇರ್ಕಾಡಿ ಉಮೇಶ ನಾಯ್ಕ, ಜಿಲ್ಲಾ ಸಂಚಾಲಕ ರಾಜೇಶ ಕಾವೇರಿ, ರಾಘವೇಂದ್ರ, ದಿನೇಶ ಶೆಟ್ಟಿ, ಆದರ್ಶ ಶೆಟ್ಟಿ ಕೆಂಜೂರು, ಶೋಭಾ ಪೂಜಾರಿ ಭಾಗವಹಿಸಿದ್ದರು.

ರಾಜೀವ ಕುಲಾಲ ಸ್ವಾಗತಿಸಿದರು. ರಾಜೇಶ ಕಾವೇರಿ ಮಾಹಿತಿ ನೀಡಿದರು. ಮನೋಜ್‌ ಕುಮಾರ್‌ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.