ಕುಂದಾಪುರ: ಕಾಂಗ್ರೆಸ್ ಬಲಬರ್ಧನೆಗಾಗಿ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಸಂಘಟನಾತ್ಮಕ ಪ್ರಯತ್ನಗಳು ನಡೆಯಬೇಕು ಎಂದು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.
ಇಲ್ಲಿಗೆ ಸಮೀಪದ ತ್ರಾಸಿ ಅಣ್ಣಪ್ಪಯ್ಯ ಸಭಾಭವನದಲ್ಲಿ ಮಂಗಳವಾರ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪ ಚುನಾವಣೆ ಹಿನ್ನೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರ ಸಮಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರೆಂಟಿ, ಇತರ ಜನಪರ ಯೋಜನೆಗಳ ಪರವಾಗಿರುವ ಮತದಾರರ ಅಭಿಪ್ರಾಯಗಳನ್ನು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತವಾಗಿ ಪರಿವರ್ತಿಸುವ ಕೆಲಸ ಕಾರ್ಯಕರ್ತರು ಮಾಡಬೇಕು. ಹಿಂದುಳಿದ, ಬಡಜನರಿಗೆ ಕಾಂಗ್ರೆಸ್ ಮಾಡಿರುವ ಕೆಲಸಗಳಿಂದಾಗಿ ಜನರಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಇದನ್ನು ಧನಾತ್ಮಕವಾಗಿ ಬಳಸಿಕೊಂಡು ಪಕ್ಷದ ಅಭ್ಯರ್ಥಿ ಪರವಾಗಿ ಹೆಚ್ಚು ಮತಗಳ ಕ್ರೋಢಿಕರಣಕ್ಕೆ ಕೆಲಸ ಮಾಡಬೇಕು ಎಂದರು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಇಲ್ಲದಿರುವುರಿಂದ, ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಗೆದ್ದು ಬಂದಲ್ಲಿ ಜಿಲ್ಲೆಯ ಪ್ರಗತಿಗೆ ಹೆಚ್ಚು ಅನುಕೂಲವಾಗಲಿದೆ. ಬಿಜೆಪಿಯು ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಲ್ಲಿ ಯಾವುದೇ ಹೇಳಿಕೊಳ್ಳುವ ಕೆಲಸ ಮಾಡದ ವ್ಯಕ್ತಿಯೊಬ್ಬರನ್ನು ಅಭ್ಯರ್ಥಿಯನ್ನಾಗಿಸಿದೆ. ಗ್ರಾಮ ಪಂಚಾಯಿತಿಯಿಂದ, ಜಿಲ್ಲಾ ಪಂಚಾಯಿತಿವರೆಗೆ ಸುದೀರ್ಘ ಅವಧಿಯಲ್ಲಿ ಕೆಲಸ ಮಾಡಿರುವ ರಾಜು ಪೂಜಾರಿ ಅವರ ಪರವಾಗಿ ಚುನಾವಣೆಯ ಫಲಿತಾಂಶ ಬರುವಂತೆ ಈ ಚುನಾವಣೆಯನ್ನು ಸವಾಲಾಗಿ ತೆಗೆದುಕೊಳ್ಳಬೇಕು ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಅವಿಭಜಿತ ದ.ಕ. ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ 6 ಸಾವಿರ ಮತದಾರರಿದ್ದಾರೆ. ಕಾಂಗ್ರೆಸ್‌ಗೆ ಗೆಲ್ಲಲು ಕನಿಷ್ಠ 3 ಸಾವಿರ ಮತ ಬೇಕು. ಬೈಂದೂರು ಕ್ಷೇತ್ರದಲ್ಲಿ 570 ಗ್ರಾ.ಪಂ. ಸದಸ್ಯರಿದ್ದು, ಕಾಂಗ್ರೆಸ್ ಬೆಂಬಲಿತ ಮತದಾರರಲ್ಲದೆ, ಇತರ ಮತಗಳನ್ನು ಪಡೆಯಲು ಪ್ರಯತ್ನಿಸಬೇಕು ಎಂದರು.
ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ವಿಧಾನ ಪರಿಷತ್ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಎಸ್. ರಾಜು ಪೂಜಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿದರು. ಚುನಾವಣೆ ಉಸ್ತುವಾರಿ ಎಂ.ಎಸ್. ಮಹಮ್ಮದ್, ಕಾಂಗ್ರೆಸ್ ಮುಖಂಡರಾದ ದಿನೇಶ್ ಹೆಗ್ಡೆ ಮೊಳ್ಳಹಳ್ಳಿ, ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಸಂಪಿಗೇಡಿ ಸಂಜೀವ ಶೆಟ್ಟಿ, ಮದನ್ ಕುಮಾರ್ ಉಪ್ಪುಂದ, ವಾಸುದೇವ ಯಡಿಯಾಳ, ಶರ್ಫುದ್ದೀನ್ ಶೇಖ್, ಜಯರಾಮ ನಾಯ್ಕ್, ದೇವಾನಂದ ಶೆಟ್ಟಿ ಹಳ್ನಾಡು, ಅನಂತ್ ಮೊವಾಡಿ, ಶಂಕರ ಪೂಜಾರಿ ಯಡ್ತರೆ, ಸಂತೋಷ ಕುಮಾರ್ ಶೆಟ್ಟಿ ಹಕ್ಲಾಡಿ, ಸೂರ್ಯಕಾಂತಿ, ರಘುರಾಮ ಶೆಟ್ಟಿ ಇದ್ದರು. ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಸ್ವಾಗತಿಸಿದರು. ಜಿಲ್ಲಾ ಕೆಡಿಪಿ ಸದಸ್ಯ ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ ನಿರೂಪಿಸಿದರು. ಬೈಂದೂರು ಬ್ಲಾಕ್ ಅಧ್ಯಕ್ಷ ಅರವಿಂದ ಪೂಜಾರಿ ಪಡುಕೋಣೆ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.