ADVERTISEMENT

ನಕಲಿ ಟಿವಿ ಚಾನೆಲ್‍ಗಳ ವಿರುದ್ಧ ಕ್ರಮ

ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 15:30 IST
Last Updated 10 ಡಿಸೆಂಬರ್ 2019, 15:30 IST
ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೇಬಲ್ ಟೆಲಿವಿಷನ್ ನೆಟ್‍ವರ್ಕ್ ಕಾಯ್ದೆಯ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆ ನಡೆಯಿತು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೇಬಲ್ ಟೆಲಿವಿಷನ್ ನೆಟ್‍ವರ್ಕ್ ಕಾಯ್ದೆಯ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆ ನಡೆಯಿತು.   

ಉಡುಪಿ: ಜಿಲ್ಲೆಯಲ್ಲಿ ಪರವಾನಗಿ ಇಲ್ಲದೆ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಹಾಗೂ ನಕಲಿ ಟಿವಿ ಚಾನೆಲ್‍ಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೇಬಲ್ ಟೆಲಿವಿಷನ್ ನೆಟ್‍ವರ್ಕ್ ಕಾಯ್ದೆಯ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಅಡಿ ಚಾನೆಲ್‍ಗಳು ನೋಂದಣಿಯಾಗಿರಬೇಕು. ಆದರೆ, ಈಚೆಗೆ ಟಿವಿ ಚಾನೆಲ್‍ಗಳ ಹೆಸರಿನಲ್ಲಿ ಸರ್ಕಾರಿ ಕಚೇರಿಯ ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಬ್ಲಾಕ್‍ಮೇಲ್ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ.

ADVERTISEMENT

ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿರುವ ಸ್ಥಳೀಯ ಚಾನೆಲ್‍ಗಳ ದಾಖಲೆಗಳನ್ನು ಪರಿಶೀಲನೆ ನಡೆಸಿ, ನಕಲಿ ಚಾನೆಲ್‍ಗಳನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಲಾಗುವುದು. ಈ ಕುರಿತು ವರದಿ ನೀಡಿ ಎಂದು ವಾರ್ತಾ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.‌

ಕೇಬಲ್ ಆಪರೇಟರ್‌ಗಳ ನೋಂದಣಿ ಕಡ್ಡಾಯ:

ಕೇಬಲ್ ಆಪರೇಟರ್‌ಗಳು ನಿಯಮಾನುಸಾರ ಪ್ರಧಾನ ಅಂಚೆ ಕಚೇರಿಯಲ್ಲಿ ಕಡ್ಡಾಯ ನೋಂದಣಿ ಮಾಡಿಸಿರಬೇಕು. ನೋಂದಣಿ ವಿವರಗಳನ್ನು ಅಂಚೆ ಇಲಾಖೆಯಿಂದ ಪಡೆದು ಪರಿಶೀಲನೆ ನಡೆಸಿ. ನೋಂದಣಿಯಾಗದ ಕೇಬಲ್ ಆಪರೇಟರ್‌ಗಳು ಕೂಡಲೇ ವ್ಯವಹಾರ ಸ್ಥಗಿತಗೊಳಿಸಬೇಕು ಎಂದು ಸೂಚಿಸಿದರು.

ಕೇಬಲ್ ಟೆಲಿವಿಷನ್ ನೆಟ್‍ವರ್ಕ್ ಕಾಯ್ದೆ ಉಲ್ಲಂಘಿಸಿದಲ್ಲಿ ಕೇಬಲ್ ಆಪರೇಟರ್‌ಗಳ ಉಪಕರಣಗಳನ್ನು ವಶಪಡಿಸಿಕೊಳ್ಳುವ ಹಾಗೂ ಮುಟ್ಟುಗೋಲು ಹಾಕುವ ಅಧಿಕಾರ ಅಧಿಕಾರಿಗಳಿಗೆ ಇದೆ ಎಂದರು.

ಕೇಬಲ್ ಆಪರೇಟರ್‌ಗಳು ಗ್ರಾಹಕರಿಂದ ನಿಗದಿತ ದರ ಪಡೆಯಬೇಕು. ಹೆಚ್ಚು ವಸೂಲಿ ಮಾಡಿದರೆ ದೂರು ನೀಡಬಹುದು. ಇದಕ್ಕಾಗಿ ಜಿಲ್ಲಾಮಟ್ಟದಲ್ಲಿ ದೂರು ಕೋಶ ತೆರೆಯಲಾಗಿದ್ದು, ವಾರ್ತಾ ಇಲಾಖೆ ಕಚೇರಿಗೆ ಲಿಖಿತವಾಗಿ ದೂರು ನೀಡಬಹುದು. ಇಮೇಲ್ ಮೂಲಕವೂ varthabhavanaudupi@gmail.com ದೂರು ನೀಡಬಹುದು. ಆಪರೇಟರ್‌ಗಳು ಸಾರ್ವಜನಿಕರಿಂದ ಪಡೆದ ಶುಲ್ಕಕ್ಕೆ ರಶೀದಿ ನೀಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಟಿವಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ಸಮಾಜದ ಶಾಂತಿ ಭಂಗ ಅಥವಾ ಸಮುದಾಯಗಳ ಮಧ್ಯೆ ವೈರತ್ವ ಉಂಟುಮಾಡಿದರೆ, ಆಕ್ಷೇಪಾರ್ಹ ದೃಶ್ಯಪ್ರಸಾರ ಮಾಡಿದರೆ ಕ್ರಮ ತೆಗೆದುಕೊಳ್ಳಲಾಗುವ ಅಧಿಕಾರ ಸಮಿತಿಗೆ ಇದೆ ಎಂದು ಡಿಸಿ ಹೇಳಿದರು.

ಸಮಿತಿಯ ಕಾರ್ಯದರ್ಶಿ ಹಾಗೂ ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಶಾ ಮಾತನಾಡಿ, ಸ್ಥಳೀಯ ಕೇಬಲ್ ಟಿವಿ ಚಾನೆಲ್‍ಗಳ ಕಾರ್ಯಕ್ರಮದ ಮೇಲೆ ನಿಗಾ ಇಡಲು, ಅನಪೇಕ್ಷಿತ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ, ಕೇಬಲ್ ಆಪರೇಟರ್‌ಗಳ ಸೇವೆ ಬಗ್ಗೆ ಸಾರ್ವಜನಿಕರಿಂದ ದೂರು ಸ್ವೀಕರಿಸಲು ಇಲಾಖೆಯಲ್ಲಿ ದೂರು ಕೋಶ ಇದೆ. ಜಿಲ್ಲೆಯಲ್ಲಿ ನೋಂದಾಯಿತ ಕೇಬಲ್ ಆಪರೇಟರ್‌ಗಳ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ಮಟ್ಟದ ಕೇಬಲ್ ನಿರ್ವಹಣಾ ಸಮಿತಿ ಸದಸ್ಯ ಡಾ.ವಿರೂಪಾಕ್ಷ ದೇವರಮನೆ, ಶ್ರುತಿ ಶೆಣೈ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.