ADVERTISEMENT

ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ

ಜನ ಸ್ಪಂದನ ಕಾರ್ಯಕ್ರಮದಲ್ಲಿ ಐವನ್‌ ಡಿಸೋಜ

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 15:50 IST
Last Updated 13 ಜುಲೈ 2019, 15:50 IST
ಉಡುಪಿ ಸ್ನೇಹಾಲಯದಲ್ಲಿ ಶನಿವಾರ ನಡೆದ ಜನ ಸ್ಪಂದನ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ಸಾರ್ವಜನಿಕರ ಅಹವಾಲು ಆಲಿಸಿದರು.ಪ್ರಜಾವಾಣಿ ಚಿತ್ರ
ಉಡುಪಿ ಸ್ನೇಹಾಲಯದಲ್ಲಿ ಶನಿವಾರ ನಡೆದ ಜನ ಸ್ಪಂದನ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ಸಾರ್ವಜನಿಕರ ಅಹವಾಲು ಆಲಿಸಿದರು.ಪ್ರಜಾವಾಣಿ ಚಿತ್ರ   

ಉಡುಪಿ: ಜನರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸಲು ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್‌ ಡಿಸೋಜ ಎಚ್ಚರಿಕೆ ನೀಡಿದರು.

ಇಂಡಿಯನ್‌ ಕ್ರಿಶ್ಚಿಯನ್‌ ಯೂನಿಯನ್‌ ಒಕ್ಕೂಟದ ವತಿಯಿಂದ ನಗರದ ಮಿಷನ್‌ ಕಂಪೌಂಡ್‌ನ ಸಿಎಸ್‌ಐ ಬಾಯ್ಸ್‌ ಬೋರ್ಡಿಂಗ್‌ ಹೋಮ್‌ (ಸ್ನೇಹಾಲಯ)ದಲ್ಲಿ ಶನಿವಾರ ನಡೆದ ಸಾರ್ವಜನಿಕ ಜನ ಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾನೂನು ಸರಳ ಮಾಡಿದರೆ ಜನರಿಗೆ ಸರ್ಕಾರದ ಸೌಲಭ್ಯಗಳು ಸುಲಭವಾಗಿ ತಲುಪುತ್ತದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ. ಸರ್ಕಾರ ಜನರ ಮನೆ ಬಾಗಿಲಿಗೆ ಹೋಗಬೇಕು. ಜನರ ನಿರೀಕ್ಷೆಗೆ ತಕ್ಕಂತೆ ಜನಪ್ರತಿನಿಧಿಗಳು ಕೆಲಸ ಮಾಡಬೇಕು. ಆ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಕಾರ್ಯ ಮಾಡಬೇಕು ಎಂದರು.

ADVERTISEMENT

ಕುಂದಾಪುರ ಉಪವಿಭಾಗಾಧಿಕಾರಿ ಎಸ್‌.ಎಸ್‌. ಮಧುಕೇಶ್ವರ್‌ ಮಾತನಾಡಿ, ಬ್ರಿಟಿಷರ ಕಾಲದಲ್ಲಿದ್ದ ಜನವಿರೋಧಿ ಆಡಳಿತ ಇಂದು ಜನ ಸ್ನೇಹಿ ಆಗಿದೆ. ಅಂದು ಅಧಿಕಾರಿಗಳಿಗೆ ಹೆದರುವ ಪರಿಸ್ಥಿತಿ ಇತ್ತು. ಆದರೆ ಈಗ ಅಂತಹ ಪರಿಸ್ಥಿತಿಯಿಲ್ಲ. ಅಧಿಕಾರಿಗಳು ಜನರಿಗೆ ಸೇವೆ ಒದಗಿಸುವ ಮನೋಭಾವ ಹೊಂದಿದ್ದಾರೆ. ಎಲ್ಲರಿಗೂ ಸಮಾನ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕಾನೂನು ರೂಪಿಸಲಾಗಿದೆ. ಈ ಕಾನೂನು ಚೌಕಟ್ಟಿನಡಿಯಲ್ಲಿ ಎಲ್ಲರೂ ಕೆಲಸ ಮಾಡಬೇಕಾಗಿದೆ ಎಂದರು.

ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಎಚ್‌.ಆರ್‌. ಲಮಾಣಿ, ಅಲ್ಪಸಂಖ್ಯಾರ ಅಭಿವೃದ್ಧಿ ನಿಗಮದ ಅಧಿಕಾರಿ ಕಿಶೋರ್‌ ಪುತ್ರನ್‌, ಆರೋಗ್ಯ ಇಲಾಖೆಯ ಡಾ. ಸುರೇಂದ್ರ ಬಾಳ್ಕರ್‌, ಉಡುಪಿ ತಹಶೀಲ್ದಾರ್‌ ಪ್ರದೀಪ್‌ ಕುರ್ಡೇಕರ್‌, ಉಡುಪಿ ಎಡಿಎಲ್‌ಆರ್‌ನ ಎ.ಎಸ್‌. ಮಂಜುನಾಥ್‌, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಕಿರಣ್‌, ಉಡುಪಿ ತಾಲ್ಲೂಕು ಪಂಚಾಯಿತಿ ಇಒ ಕೆ. ರಾಜು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್‌ ರಾಜ್‌, ಮಾಲಿನ್ಯ ನಿಯಂತ್ರಣ ಮಂಡಳಿಯ ಲಕ್ಷ್ಮೀಕಾಂತ್‌ ಮೊದಲಾದವರು ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಒಕ್ಕೂಟದ ಅಧ್ಯಕ್ಷ ಸುನೀಲ್‌ ಕಬ್ರಾಲ್‌ ಶಿರ್ವ, ರೊನಾಲ್ಡ್‌ ಮನೋಹರ್‌ ಕರ್ಕಡ, ತಾಪಂ ಸದಸ್ಯೆ ಡಾ. ಸುನೀತಾ ಶೆಟ್ಟಿ, ವೆರೋನಿಕಾ ಕರ್ನೇಲಿಯೊ ಉಪಸ್ಥಿತರಿದ್ದರು. ಜಂಟಿ ಕಾರ್ಯದರ್ಶಿ ಸ್ಟೀವನ್‌ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.