ಕುಂದಾಪುರ: ‘ಶ್ವೇತಯಾನ–108ರಲ್ಲಿ ಭಾಗವಹಿಸುವ ಅವಕಾಶ ದೊರೆತದ್ದು ನನ್ನ ಪುಣ್ಯ. ಶಾಸ್ತ್ರೀಯವಾಗಿ ಕಲಿತ ಪಂಡಿತರ, ಟೀಕೆ ಟಿಪ್ಪಣಿಗಳಿಂದ ಹೊರತಾದವರು ನಾವು. ಯಕ್ಷ ಕಲೆಯೊಳಗೆ ಬೆರೆಯುವ ಅವಕಾಶಕ್ಕೆ ಖುಷಿ ಪಟ್ಟು ಬಂದವಳು ನಾನು. ಈ ಕಲೆಯನ್ನು ಗೌರವಿಸುತ್ತಾ ಒಪ್ಪಿದ್ದೇನೆ’ ಎಂದು ನಟಿ ಉಮಾಶ್ರೀ ಹೇಳಿದರು.
ಸಮೀಪದ ತೆಕ್ಕಟ್ಟೆಯ ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆಯ ‘ಸಿನ್ಸ್ 1999 ಶ್ವೇತಯಾನ-108’ರ ಪ್ರಯುಕ್ತ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಯಕ್ಷೋಲ್ಲಾಸ 108 ಕಾರ್ಯಕ್ರಮವನ್ನು ಕಿರೀಟಕ್ಕೆ ನವಿಲುಗರಿ ಇಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಶುಭಾಶಂಸನೆ ಮಾಡಿದ ಪ್ರಸಂಗಕರ್ತ ಪ್ರೊ.ಪವನ್ ಕಿರಣ್‍ಕೆರೆ ಮಾತನಾಡಿ, ‘ಮಕ್ಕಳಿಗೆ ಕಲಿಸುತ್ತಾ, ಕಲೆಯನ್ನು ಕೈ ದಾಟಿಸುವ ಕೆಲಸ ಯಶಸ್ವಿ ಸಂಸ್ಥೆ ಮಾಡುತ್ತಿದೆ. ಕಲಾ ವಲಯದಲ್ಲಿ ಕಲಾವಿದ ವಿಜೃಂಭಿಸಬೇಕಾದರೆ ಸಂಘಟಕ ಮತ್ತು ಪ್ರೇಕ್ಷಕ ಎರಡು ದೊಡ್ಡ ಆಸ್ತಿ. ಮೂರನೇ ದೊಡ್ಡ ಶಕ್ತಿಯಾಗಿ ಪೋಷಕ ನಿಂತರೆ, ನಾಲ್ಕನೆಯವರಾಗಿ ಕಲಾವಿದರಾದ ನಾವು ಕಲೆಯನ್ನು ವಿಸ್ತರಿಸುತ್ತಾ, ಪೋಷಿಸುತ್ತಾ ಸಾಗುತ್ತೇವೆ. ಯಕ್ಷ ಕಲಾವಲಯದ ಆಚೆ ಇರುವವರು ಯಕ್ಷಗಾನಕ್ಕೆ ಬರುವಂತೆ ಆಗಬೇಕು. ಈ ಸಾಧನೆಯನ್ನು ನಟಿ ಉಮಾಶ್ರೀಯ ಪಾಲ್ಗೊಳ್ಳುವಿಕೆಯಿಂದ ಸಾಧಿಸಿದ್ದಾರೆ. ಶ್ವೇತಯಾನ ನೂರೆಂಟಕ್ಕೆ ನಿಲ್ಲದೇ ಸಾವಿರದ ಕಾರ್ಯಕ್ರಮವಾಗಲಿ’ ಎಂದು ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕ ಸುಜಯೀಂದ್ರ ಹಂದೆ, ‘ತಾಲ್ಲೂಕಿನ ಕುಗ್ರಾಮವಾದ ಕೊಮೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವುದಕ್ಕೆ ಕಾರಣ ಯಶಸ್ವೀ ಕಲಾವೃಂದ. ಪ್ರತಿ ಹಳ್ಳಿ ಸಾಂಸ್ಕೃತಿಕವಾಗಿ ಹೆಚ್ಚು ಹೆಚ್ಚು ತೊಡಗಿಸಿಕೊಂಡರೆ ಅದು ದೇಶದ ಸಂಪತ್ತಾಗಿ ರೂಪಗೊಳ್ಳುತ್ತದೆ. ಆ ನಿಟ್ಟಿನಲ್ಲಿ ಯಶಸ್ವೀ ಕಲಾವೃಂದ ರಾಷ್ಟ್ರದ ಸಂಪತ್ತನ್ನು ಹೆಚ್ಚಿಸುವಲ್ಲಿ ದೊಡ್ಡ ಕೊಡುಗೆ ಕೊಟ್ಟಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಲ್ಯಾಡಿ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಾ.ಕೆ.ಸಿ. ಬಲ್ಲಾಳ್ ಇದ್ದರು. ಹೆರಿಯ ಮಾಸ್ಟರ್ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಹೂವಿನ ಕೋಲು, ಒಡ್ಡೋಲಗಗಳು, ಗಾನ ವೈಭವ ಹಾಗೂ ವಾಗ್ವಿಲಾಸದ ಯಕ್ಷ ವಿಶೇಷ ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ ‘ನವನೀತ’ ರಂಗ ಪ್ರಸ್ತುತಿಗೊಂಡಿತು.
ಯಕ್ಷಗಾನಕ್ಕೂ ಸೈ ತಾಳಮದ್ದಳೆಗೂ ಜೈ ಎಂದಿರುವ ಹಿರಿಯ ನಟಿ ಉಮಾಶ್ರೀ ಅವರು ತಾಳಮದ್ದಳೆಯಲ್ಲಿ ಬಹಳ ಮನೋಜ್ಞವಾಗಿ ಅಭಿನಯಿಸಿದ್ದಾರೆಡಾ.ದೀಪಕ್‌ಕುಮಾರ ಶೆಟ್ಟಿ ಬಾರ್ಕೂರು ಅಧ್ಯಕ್ಷ ಕುಂದಾಪ್ರ ಪ್ರತಿಷ್ಠಾನ ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.