ADVERTISEMENT

ಪಲಿಮಾರು ಗ್ರಾಮ ಪಂಚಾಯಿತಿ: ₹16 ಲಕ್ಷ ವೆಚ್ಚದ ರಸ್ತೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 5:11 IST
Last Updated 22 ಆಗಸ್ಟ್ 2025, 5:11 IST
ಪಲಿಮಾರು ಗ್ರಾಮದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯನ್ನು ಗುರುವಾರ ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಅಧ್ಯಕ್ಷ ಕಿಶೋರ್ ಆಳ್ವ ಉದ್ಘಾಟಿಸಿದರು
ಪಲಿಮಾರು ಗ್ರಾಮದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯನ್ನು ಗುರುವಾರ ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಅಧ್ಯಕ್ಷ ಕಿಶೋರ್ ಆಳ್ವ ಉದ್ಘಾಟಿಸಿದರು   

ಪಡುಬಿದ್ರಿ: ಅದಾನಿ ಪವರ್ ಲಿಮಿಟೆಡ್- ಉಡುಪಿ ಟಿಪಿಪಿ ಇದರ ಸಿಎಸ್‌ಆರ್ ಚಟುವಟಿಕೆಯಡಿ ಪಲಿಮಾರು ಗ್ರಾಮದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯನ್ನು ಗುರುವಾರ ಉದ್ಘಾಟಿಸಲಾಯಿತು.

ಪಲಿಮಾರು ಗ್ರಾಮದ ಶಾಂಭವಿ ನದಿ ದಡದ ಹೊಯಿಗೆ ಪರಿಸರದಲ್ಲಿ ₹16 ಲಕ್ಷ ವೆಚ್ಚದ 417 ಮೀ. ಉದ್ದದ ರಸ್ತೆ ನಿರ್ಮಿಸಲಾಗಿತ್ತು. ಈ ರಸ್ತೆಯನ್ನು ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಅಧ್ಯಕ್ಷ ಕಿಶೋರ್ ಆಳ್ವ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ‘ಈ ಹಿಂದೆ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಎಲ್ಲೂರು, ಮುದರಂಗಡಿ, ತೆಂಕ, ಬಡಾ ಗ್ರಾಮ ಪಂಚಾಯಿತಿಗಳಿಗೆ ಸಿಎಸ್‌ಆರ್ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಂತೆ ಅದಾನಿ ಸಂಸ್ಥೆಗೆ ಸಲಹೆ ನೀಡಿದ್ದರು. ಆದರೆ, ಪಂಚಾಯಿತಿಗಳ ಬೇಡಿಕೆ ಮೇರೆಗೆ ಪಲಿಮಾರು, ಬೆಳಪು ಮತ್ತು ಪಡುಬಿದ್ರಿ ಗ್ರಾಮ ಪಂಚಾಯಿತಿಗಳನ್ನು ಇದರಲ್ಲಿ ಸೇರಿಸಲಾಯಿತು. ಈ ಮೂಲಕ ಅದಾನಿ ಫೌಂಡೇಷನ್ ಹಂತ ಹಂತವಾಗಿ ₹22.73 ಕೋಟಿ ಮೌಲ್ಯದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಬದ್ಧವಾಗಿದೆ. ಈಗಾಗಲೇ ₹14 ಕೋಟಿ ಮೌಲ್ಯದ ಕಾಮಗಾರಿಗಳು ಪೂರ್ಣಗೊಂಡಿವೆ. ಈ ವರ್ಷವೂ 7 ಗ್ರಾಮ ಪಂಚಾಯಿತಿಗಳಿಗೆ ತಲಾ ₹20 ಲಕ್ಷ ಮೂಲಸೌಕರ್ಯ ಅಭಿವೃದ್ಧಿಗಾಗಿ ಮೀಸಲಿರಿಸಲಾಗಿದೆ’ ಎಂದರು.

ADVERTISEMENT

ಪಲಿಮಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ ಮಾತನಾಡಿ, ‘ಶಾಂಭವಿ ನದಿ ದಡದಲ್ಲಿರುವ ಹೊಯಿಗೆ ರಸ್ತೆ ಅಭಿವೃದ್ಧಿ ಗ್ರಾಮಸ್ಥರ ದೀರ್ಘಕಾಲದ ಬೇಡಿಕೆಯಾಗಿತ್ತು. ಅದಾನಿ ಸಿಎಸ್‌ಆರ್ ನೆರವಿನಿಂದ ಈ ಅಗತ್ಯತೆ ಈಡೇರಿಸಲಾಗಿದೆ. ಅದಾನಿ ಫೌಂಡೇಷನ್ ಕೈಗೊಂಡಿರುವ ಸಿಎಸ್‌ಆರ್ ಯೋಜನೆಗಳು ಗ್ರಾಮ ಪಂಚಾಯಿತಿಗೆ ವರದಾನವಾಗಿದೆ’ ಎಂದು ತಿಳಿಸಿದರು.

ಪಂಚಾಯಿತಿ ಉಪಾಧ್ಯಕ್ಷ ರಾಜೇಶ್ವರ ಪೈ, ಸದಸ್ಯರಾದ ಸತೀಶ್ ದೇವಾಡಿಗ, ಯೋಗಾನಂದ ಕುಕ್ಯಾನ್, ಜಯಂತಿ ಕೋಟಿಯಾನ್, ಗಾಯತ್ರಿ ಪ್ರಭು, ಸುಜಾತಾ, ಜಯಶ್ರೀ ಆಚಾರ್ಯ, ಶಿವರಾಮ ಪೂಜಾರಿ, ಗಿರಿಯಪ್ಪ ಪೂಜಾರಿ, ಮಾಜಿ ಅಧ್ಯಕ್ಷ ಜಿತೇಂದ್ರ ಪುಟ್ರಾಡೋ, ಅದಾನಿ ಪವರ್ ಲಿಮಿಟೆಡ್‌ನ ಅಸೋಸಿಯೇಟ್ ಜನರಲ್ ಮ್ಯಾನೇಜರ್ ರವಿ ಆರ್. ಜೇರೆ, ಅದಾನಿ ಫೌಂಡೇಷನ್‌ನ ಅನುದೀಪ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.