ಉಡುಪಿ: ವ್ಯಸನಗಳು ಚಕ್ರವ್ಯೂಹದಂತೆ. ಒಮ್ಮೆ ಮಾದಕ ವಸ್ತುಗಳ ವ್ಯಸನಕ್ಕೆ ಸಿಲುಕಿಕೊಂಡರೆ ಅದರಿಂದ ಹೊರಬರಲು ಸಾಧ್ಯವಿಲ್ಲ ಎಂದು ಡಾ.ಎ.ವಿ. ಬಾಳಿಗಾ ಆಸ್ಪತ್ರೆಯ ಮನೋವೈದ್ಯ ಡಾ.ಪಿ.ವಿ. ಭಂಡಾರಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮಹಾಂತ ಶಿವಯೋಗಿ ಸ್ವಾಮೀಜಿ ಜನ್ಮ ದಿನದ ಅಂಗವಾಗಿ ನಗರದ ಐಎಂಎ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಒಂದು ಹನಿ ಮದ್ಯ ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ವಿದ್ಯಾರ್ಥಿಗಳು ಯಾರದ್ದೋ ಮಾತು ಕೇಳಿ ಯಾವುದೇ ದುಶ್ಚಟಗಳಿಗೆ ಬಲಿಯಾಗಬೇಡಿ. ಅನಕ್ಷರತೆ, ಮೂಢನಂಬಿಕೆ, ಭ್ರಷ್ಟಾಚಾರ ಇವೆಲ್ಲವೂ ಜನರನ್ನು ಹಾಳು ಮಾಡುತ್ತಿದೆ. ಇವೆಲ್ಲದಕ್ಕೂ ಮೂಲ ಮದ್ಯಪಾನ ಎಂದರು.
ಇಂದು ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಅದನ್ನು ಮನಗಂಡು ಯುವ ಪೀಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ಜನ ಸಾಮಾನ್ಯಲ್ಲಿರುವ ತಪ್ಪು ಕಲ್ಪನೆಗಳನ್ನೂ ದೂರವಾಗಿಸಬೇಕು ಎಂದು ಹೇಳಿದರು.
ಹಿರಿಯರು ಹಾಕಿಕೊಟ್ಟ ದಾರಿಯನ್ನು ಮತ್ತು ಸಮಾಜದ ಬದಲಾವಣೆಗಾಗಿ ಅವರು ಪಟ್ಟ ಪ್ರಯತ್ನವನ್ನು ನಾವು ಸ್ಮರಿಸಬೇಕು. ಮಹಾಂತ ಶಿವಯೋಗಿ ಸ್ವಾಮೀಜಿ ಜನ್ಮ ದಿನವನ್ನು ವ್ಯಸನ ಮುಕ್ತ ದಿನವನ್ನಾಗಿ ಆಚರಿಸುತ್ತಿರುವುದು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು.
ಭಾರತೀಯ ವೈದ್ಯಕೀಯ ಸಂಘ (ಐಎಂಎ) ಉಡುಪಿ ಕರಾವಳಿ ಅಧ್ಯಕ್ಷ ಡಾ. ಕೆ. ಸುರೇಶ್ ಶೆಣೈ ಮಾತನಾಡಿ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಮಹಾಂತ ಶಿವಯೋಗಿ ಸ್ವಾಮೀಜಿ ನೀಡಿರುವ ಕೊಡುಗೆ ಅಪಾರವಾದುದು. ಆದರೆ ಅವರ ಜೋಳಿಗೆ ಅಭಿಯಾನವು ಎಲ್ಲಕ್ಕಿಂತ ಮಹತ್ವದ್ದು ಎಂದರು.
ಜನರನ್ನು ದುಷ್ಚಟಗಳಿಂದ ದೂರವಿರಿಸಲು ಮಹಾಂತ ಶಿವಯೋಗಿ ಸ್ವಾಮೀಜಿ ಜೋಳಿಗೆ ಅಭಿಯಾನವನ್ನು ಆರಂಭಿಸಿದ್ದರು. ಹಳ್ಳಿ ಹಳ್ಳಿಗಳಿಗೆ ತೆರಳಿ ಜನರ ದುಷ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕುವ ಮೂಲಕ ಅದಕ್ಕೆ ಕಡಿವಾಣ ಹಾಕುವ ಪ್ರಯತ್ನ ಮಾಡಿದ್ದರು ಎಂದು ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಬಿ. ಸ್ವಾಗತಿಸಿದರು. ವಿದ್ಯಾರತ್ನ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ. ಅನಿತಾ ಸಿ. ರಾವ್, ಉಡುಪಿ ಸಿಟಿ ಎಜುಕೇಷನ್ ಟ್ರಸ್ಟ್ ಆಡಳಿತ ಅಧಿಕಾರಿ ರವಿಪಾಲನ್, ವಿದ್ಯಾರತ್ನ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಎಂ.ಕೆ ರಮೇಶ್ ಉಪಸ್ಥಿತರಿದ್ದರು. ಸಹಾಯಕ ಉಪನ್ಯಾಸಕಿ ಶ್ರೀಲತಾ ನಿರೂಪಿಸಿದರು. ರಂಜಿತಾ ವಂದಿಸಿದರು.
ವ್ಯಸನ ಮುಕ್ತ ಸಮಾಜದತ್ತ ನಾವೆಲ್ಲರೂ ಹೆಜ್ಜೆ ಇಡಬೇಕು. ಅದರಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯಡಾ. ಕೆ. ಸುರೇಶ್ ಶೆಣೈ ಐಎಂಎ ಉಡುಪಿ ಕರಾವಳಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.