ಕುಂದಾಪುರ: ಆಗಾಗ ಧೋ ಎಂದು ಸುರಿಯುವ ಪುನರ್ವಸು ಮಳೆ. ಮೊಣಕಾಲುವರೆಗೆ ಉಡುಪು ಕಟ್ಟಿಕೊಂಡು ಕೆಸರು ತುಂಬಿದ ಗದ್ದೆಗಳಿಗೆ ಇಳಿದ ಮಕ್ಕಳಲ್ಲಿ ನಾವೇನೂ ಈ ಕ್ಷೇತ್ರಕ್ಕೆ ಹೊಸಬರಲ್ಲ ಎನ್ನುವ ಭಾವ. ಸ್ಥಳೀಯ ಮಹಿಳೆಯರೊಂದಿಗೆ ಕೈಜೋಡಿಸಿ ಕ್ಷಣಾರ್ಧದಲ್ಲೇ ನೇಜಿಯನ್ನು ಸಾಲು ಸಾಲು ನಾಟಿ ಮಾಡುವ ಮಕ್ಕಳ ಕೈಚಳಕವನ್ನು ನೋಡುತ್ತಿದ್ದ ಸ್ಥಳೀಯ ಅನುಭವಿ ಕೃಷಿಕರನ್ನೂ ಪುಳಕಿತರನ್ನಾಗಿಸಿತು.
ಈ ದೃಶ್ಯಗಳಿಗೆ ಸಾಕ್ಷಿಯಾದದ್ದು ಬಾಂಡ್ಯ ಗ್ರಾಮದ ಕೆಳಬಾಂಡ್ಯದ ಕೃಷಿ ಗದ್ದೆಗಳು.
ಮಕ್ಕಳಲ್ಲಿ ಕೃಷಿ ಆಸಕ್ತಿ ಮೂಡಿಸಬೇಕು ಎನ್ನುವ ಉದ್ದೇಶದಿಂದ ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್‌ನ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ವರ್ಷದಂತೆ ಭತ್ತ ಬೆಳೆಯುವ ಸಮಗ್ರ ಮಾಹಿತಿ ನೀಡುವ, ನಾಟಿ ಮಾಡುವ ಕಾರ್ಯಕ್ರಮ, ಪ್ರಾತ್ಯಕ್ಷಿಕೆ ಭಾನುವಾರ ನಡೆಯಿತು. ಮಕ್ಕಳೊಂದಿಗೆ ಮಕ್ಕಳಾಗಿ ಕೃಷಿಕರೂ ಸಂಭ್ರಮಿಸಿದರು.
ವಿದ್ಯಾಸಂಸ್ಥೆಯ ಬಸ್‌ಗಳಲ್ಲಿ ಶಿಕ್ಷಕರ ಜೊತೆ ಬೆಳಿಗ್ಗೆ ಬಾಂಡ್ಯಕ್ಕೆ ಬಂದಿಳಿದಿದ್ದ 141 ವಿದ್ಯಾರ್ಥಿಗಳು ವಿಸ್ತಾರವಾದ ಗದ್ದೆಗಳಿಗೆ ಇಳಿದು ನಾಟಿ ಕಾರ್ಯಕ್ಕೆ ತಯಾರಿ ನಡೆಸಿದರು. ಬಾಂಡ್ಯ ಎಜುಕೇಷನಲ್ ಟ್ರಸ್ಟ್ ಜಂಟಿ ಕಾರ್ಯನಿರ್ವಾಹಕ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ಅನುಪಮ್ ಎಸ್.ಶೆಟ್ಟಿ ಅವರ 4 ಎಕರೆ ಗದ್ದೆಯಲ್ಲಿ ನೇಜಿಯನ್ನು ಹಸ್ತಾಂತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಉದ್ಯೋಗ, ತಂತ್ರಜ್ಞಾನ, ನಿರಾಸಕ್ತಿ ಮೊದಲಾದ ಕಾರಣಗಳಿಂದ ಕೃಷಿ ಕ್ಷೇತ್ರದಿಂದ ಯುವಜನರು ವಿಮುಖವಾಗುತ್ತಿರುವುದನ್ನು ಗಮನಿಸಿದ್ದ ಬಾಂಡ್ಯ ಎಜುಕೇಷನ್ ಟ್ರಸ್ಟ್ ಕೆಲ ವರ್ಷಗಳಿಂದ ತಮ್ಮದೇ ಶಾಲೆಯ ವಿದ್ಯಾರ್ಥಿಗಳಿಗೆ ಭತ್ತ ನಾಟಿ ಕಸುಬನ್ನು ಪರಿಚಯಿಸುವ ಪ್ರಯತ್ನ ಮಾಡುತ್ತಿದೆ.
ಪ್ರತಿವರ್ಷ ಆಟಿ ತಿಂಗಳು ಪ್ರಾರಂಭವಾಗುತ್ತಿದ್ದಂತೆ ಮಲೆನಾಡಿನ ಗ್ರಾಮೀಣ ಭಾಗವಾದ ಕೆಳ ಬಾಂಡ್ಯದಲ್ಲಿ ಗದ್ದೆಗಳನ್ನು ಹಸನು ಮಾಡಿ ನಾಟಿ ಮಾಡಿಸಲು ಸಿದ್ಧತೆ ನಡೆಸಲಾಗುತ್ತದೆ. ದಿನ ನಿಗದಿ ಮಾಡಿದ ಬಳಿಕ ಶಿಕ್ಷಕರು, ವಿದ್ಯಾರ್ಥಿಗಳನ್ನು ಕರೆತಂದು ಗದ್ದೆಗಳಲ್ಲಿ ಸ್ಥಳೀಯ ಕೃಷಿಕರೊಂದಿಗೆ ‘ಕೃಷಿ ಹಬ್ಬ’ ಆಚರಿಸಲಾಗುತ್ತದೆ. ಸ್ಥಳೀಯ ಅನುಭವಿ ಕೃಷಿಕರೇ ಇವರಿಗೆ ಕೃಷಿ ಪಾಠ ಮಾಡುವ ಮಾಸ್ತರರಾಗುತ್ತಾರೆ. ನೇಜಿ ಹೊತ್ತು ತರುವುದು, ಗದ್ದೆ ಹಸನು ಮಾಡುವುದು, ಅಂಚು ಕಡಿಯುವುದು, ನೇಜಿಯನ್ನು ಸಾಲಾಗಿ ನಾಟಿ ಮಾಡಲು ಮಾರ್ಗದರ್ಶನ ನೀಡಲಾಗುತ್ತದೆ.
ಕೆಸರು ಗದ್ದೆ ಆಟದ ಸಂಭ್ರಮ: ಮೊದಲ ಬಾರಿಗೆ ಕೃಷಿ ಗದ್ದೆಯಲ್ಲಿ ಭತ್ತ ನಾಟಿ ಮಾಡುವುದನ್ನು ಕಲಿತ ವಿದ್ಯಾರ್ಥಿಗಳಿಗೆ ಗದ್ದೆಗಳು ಜೀವನದ ಹೊಸ ಪಾಠಕ್ಕೆ ವೇದಿಕೆಯಾಗಿತ್ತು. ಗುರುಕುಲದಲ್ಲಿ ಕಲಿಯುತ್ತಿರುವ ಕೊಪ್ಪಳ, ಬೆಳಗಾವಿ, ಹಾವೇರಿ, ಬಾಗಲಕೋಟೆ, ಬೆಂಗಳೂರು, ಶಿರಸಿ, ಕಾರವಾರ ವಿವಿಧ ಭಾಗಗಳ ವಿದ್ಯಾರ್ಥಿಗಳು ನಾಟಿ ಕೆಲಸದ ಬಳಿಕ ಗದ್ದೆಯಲ್ಲಿ, ಹಗ್ಗಜಗ್ಗಾಟ, ಕಬಡ್ಡಿ, ನೀರಾಟ ಆಡಿ, ಪರಸ್ಪರ ಕೆಸರು ಎರಚಿಸಿಕೊಂಡು ಸಂಭ್ರಮಿಸಿದರು.
ಗುರುಕುಲ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಕೃಷಿ ಚಟುವಟಿಕೆ, ಜೀವನಾನುಭವ ಕಲಿಸುವ ಉದ್ದೇಶದಿಂದ ಭತ್ತ ಕೃಷಿಯನ್ನು ಪ್ರಾಯೋಗಿಕವಾಗಿ ಕಲಿಸಲಾಗುತ್ತದೆ. ಪ್ರತಿವರ್ಷ ಮಕ್ಕಳು ಈ ದಿನದ ನಿರೀಕ್ಷೆಯಲ್ಲೇ ಇರುತ್ತಾರೆ.
ಇಂದು ಗ್ರಾಮೀಣ ಭಾಗದ ಗದ್ದೆಗಳಲ್ಲಿ ಸಾಂಪ್ರದಾಯಿಕ ಭತ್ತ ಕೃಷಿ ಮರೆಯಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಭತ್ತ ಕೃಷಿ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ ಎಂದು ಬಾಂಡ್ಯ ಎಜುಕೇಷನ್ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಾಹಕ ಟ್ರಸ್ಟಿ ಅನುಪಮಾ ಎಸ್. ಶೆಟ್ಟಿ ತಿಳಿಸಿದರು.
‘ಅಕ್ಕಿಯಿಂದ ಅನ್ನವಾಗುತ್ತದೆ ಎನ್ನುವ ಸಾಮಾನ್ಯ ಅರಿವು ನಗರದ ಬಹುತೇಕ ಮಕ್ಕಳಿಗೆ ಇರುವುದಿಲ್ಲ. ಆಧುನಿಕತೆಯ ಹೊಸ್ತಿಲು ದಾಟಿರುವ ನಮ್ಮ ಮುಂದಿನ ಪೀಳಿಗೆಗೆ ಕೃಷಿ ಚಟುವಟಿಕೆ ಬಗ್ಗೆ ಪಠ್ಯ, ಪ್ರಾಯೋಗಿಕ, ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡುತ್ತೇವೆ. ಮಣ್ಣಿನಲ್ಲಿ ಆಡುವ ಆಟಗಳಿಗೆ ಉತ್ತೇಜನ ನೀಡಿ ಕ್ರೀಯಾಶೀಲತೆ ಬೆಳೆಸುತ್ತೇವೆ’ ಎಂದು ಪ್ರಾಂಶುಪಾಲೆ ರೂಪಾ ಶೆಣೈ ಹೇಳಿದರು.
ಬಾಂಡ್ಯ ಎಜುಕೇಷನ್ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಾಹಕ ಟ್ರಸ್ಟಿ ಸುಭಾಶ್ಚಂದ್ರ ಶೆಟ್ಟಿ, ತಾ.ಪಂ. ಮಾಜಿ ಸದಸ್ಯ ದೇವದಾಸ ಶೆಟ್ಟಿ ಆಜ್ರಿ, ಶಿಕ್ಷಕರು, ಸಿಬ್ಬಂದಿ ಪಾಲ್ಗೊಂಡಿದ್ದರು.
3 ವರ್ಷದಿಂದ ಈ ದಿನಕ್ಕಾಗಿ ಕಾಯುತ್ತಿದ್ದ ನಾವೆಲ್ಲ ತುಂಬಾ ಸಂಭ್ರಮ ಪಟ್ಟಿದ್ದೇವೆ. ಇಲ್ಲಿನ ಸಾಲು ಗದ್ದೆ ನಾಟಿ ಹೊಸ ಅನುಭವ ನೀಡಿದೆಶಶಾಂಕ್ ಶಿರಸಿ ವಿದ್ಯಾರ್ಥಿ ಮುಖಂಡ
ಉಣ್ಣುವ ಅನ್ನಕ್ಕಾಗಿ ಬೆಳೆಯುವ ಭತ್ತದ ಕೃಷಿಯ ಹಿಂದಿರುವ ಹಾಗೂ ರೈತರು ಪಡುವ ಕಷ್ಟದ ಬಗ್ಗೆ ಇಂದು ಅರಿವು ಮೂಡಿದೆಅವನಿ ಬೇಳೂರು ವಿದ್ಯಾರ್ಥಿನಿ ನಾಯಕಿ
ಆಧುನಿಕತೆಯ ಪರ್ವದಲ್ಲಿ ಹಿರಿಯರು ನಡೆಸಿಕೊಂಡು ಬರುತ್ತಿದ್ದ ಕೃಷಿ ಪರಂಪರೆ ಮುಂದಿನ ಪೀಳಿಗೆಗೆ ಉಳಿಯಬೇಕು ಎಂದು ಸಾವಯವ ಮಾದರಿಯ ಕೃಷಿ ಪದ್ಧತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಗುತ್ತಿದೆಸುಭಾಶ್ಚಂದ್ರ ಶೆಟ್ಟಿ ಬಾಂಡ್ಯ ಜಂಟಿ ಕಾರ್ಯ ನಿರ್ವಾಹಕ ಟ್ರಸ್ಟಿ ಬಾಂಡ್ಯ ಎಜ್ಯುಕೇಷನ್ ಟ್ರಸ್ಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.