ADVERTISEMENT

ಆದರ್ಶದ ಜೊತೆ ನೈಪುಣ್ಯವೂ ಅಗತ್ಯ: ನ್ಯಾ. ಸಿ.ಎಂ. ಜೋಶಿ ಅಭಿಮತ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 12:24 IST
Last Updated 10 ಮಾರ್ಚ್ 2025, 12:24 IST
ಉಡುಪಿ ವಕೀಲರ ಸಂಘದಲ್ಲಿ ದಿ.ವಿ.ಮೋಹನ್‌ದಾಸ್ ಶೆಟ್ಟಿ ಅವರ ಭಾವಚಿತ್ರ ಅನಾವರಣ ಕಾರ್ಯಕ್ರಮ ಸೋಮವಾರ ಜರುಗಿತು
ಉಡುಪಿ ವಕೀಲರ ಸಂಘದಲ್ಲಿ ದಿ.ವಿ.ಮೋಹನ್‌ದಾಸ್ ಶೆಟ್ಟಿ ಅವರ ಭಾವಚಿತ್ರ ಅನಾವರಣ ಕಾರ್ಯಕ್ರಮ ಸೋಮವಾರ ಜರುಗಿತು   

ಉಡುಪಿ: ವೃತ್ತಿಯಲ್ಲಿ ಆದರ್ಶ ಮಾತ್ರ ಇದ್ದರೇ ಸಾಲದು, ನೈಪುಣ್ಯವೂ ಅಗತ್ಯ. ಅದನ್ನು ಸಮಾಜದ ಒಳಿತಿಗಾಗಿ ಉಪಯೋಗಿಸಿಕೊಳ್ಳಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಂ. ಜೋಶಿ ಅಭಿಪ್ರಾಯಪಟ್ಟರು.

ಉಡುಪಿ ವಕೀಲರ ಸಂಘದ ವತಿಯಿಂದ ವಕೀಲರ ಸಂಘದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಕೀಲ ದಿ.ವಿ.ಮೋಹನ್‌ದಾಸ್ ಶೆಟ್ಟಿ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

50 ವರ್ಷದ ಹಿಂದಿನ ವಕೀಲ ವೃತ್ತಿಗೂ, ಪ್ರಸ್ತುತದ ವೃತ್ತಿಗೂ ಬಹಳಷ್ಟು ವ್ಯತ್ಯಾಸಗಳು ಇವೆ. ಗುರುವಿನ ಮೂಲಕ ಅನೇಕ ಸಂಗತಿಗಳನ್ನು ಕಲಿಯಬೇಕು. ಶಾಲಾ, ಕಾಲೇಜುಗಳಲ್ಲಿ ಕೌಶಲಗಳನ್ನು ಹೇಳಿಕೊಡಲು ಸಾಧ್ಯವಿಲ್ಲ. ಅದನ್ನು ಹಿರಿಯ ವಕೀಲರ ಮೂಲಕ ಕಲಿಯಬೇಕು ಎಂದು ಹೇಳಿದರು.

ADVERTISEMENT

ವ್ಯಕ್ತಿಯೊಬ್ಬರನ್ನು ಕಳೆದುಕೊಂಡಾಗ ಅವರ ಕುಟುಂಬಸ್ಥರಿಗೆ, ಆತ್ಮೀಯರಿಗೆ ನೋವಾಗುವುದು ಸಹಜ. ಆ ವ್ಯಕ್ತಿಯ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಮೂಲಕ ದುಃಖವನ್ನು ಮರೆಯಬೇಕು. ವ್ಯಕ್ತಿಯೊಬ್ಬರು ತಮ್ಮ ವೃತ್ತಿಯಲ್ಲಿ ಸಾಧನೆ ಮಾಡಿದರೆ ಮುಂದಿನ ಪೀಳಿಯು ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತದೆ ಎಂದು ಹೇಳಿದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಧೀಶ ಕಿರಣ್.ಎಸ್.ಗಂಗಣ್ಣನವರ್ ಮಾತನಾಡಿ, ವೃತ್ತಿಯ ಬಗ್ಗೆ ಪ್ರತಿಯೊಬ್ಬರಿಗೂ ಹಲವು ಕನಸುಗಳಿರುತ್ತವೆ. ವೃತ್ತಿಯಲ್ಲಿ ಪಳಗಿದಂತೆ ವಿವಿಧ ಸಾಧನೆಗಳು ಮಾಡಲು ಸಾಧ್ಯವಿದೆ. ಜೊತೆಗೆ ಉತ್ತಮ ಮೌಲ್ಯಗಳನ್ನೂ ಬದುಕಿನಲ್ಲಿ ಅಳವಡಿಸಿಕೊಂಡಾಗ ಸಾರ್ಥಕ ಬದುಕು ನಡೆಸಲು ಸಾಧ್ಯ ಎಂದರು.

ದಿ.ಮೋಹನ್‌ದಾಸ್ ಶೆಟ್ಟಿ ಅವರ ವೃತ್ತಿ ನ್ಯೆಪುಣ್ಯತೆ ಮತ್ತು ವ್ಯಕ್ತಿತ್ವದಿಂದ ಸಮಾಜ ಅವರನ್ನು ಗುರುತಿಸಿದೆ ಎಂದು ಹೇಳಿದರು.

ದಿ.ಮೋಹನ್‌ದಾಸ್ ಶೆಟ್ಟಿ ಅವರ ಪತ್ನಿ ರಶ್ಮಿ ಎಂ. ಶೆಟ್ಟಿ ಉಪಸ್ಥಿತರಿದ್ದರು. ವಕೀಲ ಆನಂದ್ ಮಡಿವಾಳ ಪ್ರಸ್ತಾವಿಕವಾಗಿ ಮಾತನಾಡಿದರು. ಇಂಚರಾ ಶಿವಪುರ ಪ್ರಾರ್ಥಿಸಿದರು. ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್.ಎ.ಆರ್. ವಂದಿಸಿದರು. ಸಹನಾ ಕುಂದರ್ ನಿರೂಪಿಸಿದರು.

ಹಿರಿಯ ವಕೀಲರು ಪಾಲಿಸಿರುವ ಆದರ್ಶಗಳು ಕಿರಿಯ ವಕೀಲರಿಗೆ ಪ್ರೇರಣಾದಾಯಕ. ಅವುಗಳನ್ನು ಅಳವಡಿಸಿಕೊಂಡು ವೃತ್ತಿಯನ್ನು ಮುಂದುವರಿದರೆ ಯಶಸ್ಸು ಸಾಧ್ಯ
ಸಿ.ಎಂ. ಜೋಶಿ ಹೈಕೋರ್ಟ್ ನ್ಯಾಯಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.