ADVERTISEMENT

ಸಂಘಟನೆಯ ಸಂಸ್ಕಾರದಿಂದ ಸಚಿವ ಸ್ಥಾನ: ಅಂಗಾರ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 11:21 IST
Last Updated 26 ಜನವರಿ 2021, 11:21 IST
ಶಾಸಕ ಎಸ್.ಅಂಗಾರ
ಶಾಸಕ ಎಸ್.ಅಂಗಾರ   

ಉಡುಪಿ: ಮೀನುಗಾರಿಕೆ ಇಲಾಖೆಯಲ್ಲಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಬಳಿಕ ಮೀನುಗಾರಿಕಾ ಪ್ರದೇಶಗಳಿಗೆ ಖುದ್ದು ಭೇಟಿನೀಡಿ ವಾಸ್ತವ ಅರಿತು ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಅಂಗಾರ ಹೇಳಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಗಣ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡುವುದು ಸಂಘಟನೆ ಹಾಗೂ ಮುಖ್ಯಮಂತ್ರಿಗೆ ಬಿಟ್ಟಿದ್ದು. ಗಣ ರಾಜ್ಯೋತ್ಸವದಲ್ಲಿ ಭಾಗವಹಿಸುವಂತೆ ಬಂದ ಸೂಚನೆಯಂತೆ ನಡೆದುಕೊಂಡಿದ್ದೇನೆ ಎಂದರು.

ಖಾತೆ ಹಂಚಿಕೆ ಗೊಂದಲಗಳ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ. ಸಂಘಟನೆಯ ಸಂಸ್ಕಾರ ಪಡೆದು ಸಚಿವ ಸ್ಥಾನ ಪಡೆದಿದ್ದೇನೆ. ಸರ್ಕಾರಕ್ಕೆ ಅಗತ್ಯ ಸಹಕಾರ ನೀಡುತ್ತೇನೆ. ಕ್ಷೇತ್ರದ ಜನರು ಆರು ಅವಧಿಗೆ ಶಾಸಕನನ್ನಾಗಿ ಆಯ್ಕೆ ಮಾಡಿದ್ದು, ಎಂದೂ ಅಧಿಕಾರದ ಹಿಂದೆ ಹೋಗಿಲ್ಲ. ಈಗ ಅಧಿಕಾರವೇ ಹಿಂದೆ ಬಂದಿದೆ. ಖಾತೆ ಹಂಚಿಕೆ ಗೊಂದಲಗಳನ್ನು ಪಕ್ಷದ ನಾಯಕರು ಬಗೆಹರಿಸಲಿದ್ದಾರೆ. ಕುಟುಂಬದಲ್ಲಿ ಎಲ್ಲರ ಆಲೋಚನೆಗಳು ಒಂದೇ ತೆರನಾಗಿದ್ದರೆ ಸಮಸ್ಯೆಗಳು ಉದ್ಭವಿಸುವುದಿಲ್ಲ ಎಂದರು.

ADVERTISEMENT

ಪಡುಕೆರೆಯಲ್ಲಿ ಮರೀನಾ ನಿರ್ಮಾಣ ಪ್ರಸ್ತಾವ ಸಂಬಂಧ ಶಾಸಕರು, ಅಧಿಕಾರಿಗಳು ಹಾಗೂ ಸ್ಥಳೀಯ ಮೀನುಗಾರರ ಭಾವನೆಗಳನ್ನು ಗಣನೆಗೆ ತೆಗೆದುಕೊಂದು ಮುಂದುವರಿಯಲಾಗುವುದು ಎಂದು ಸಚಿವ ಎಸ್‌.ಅಂಗಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.