ADVERTISEMENT

ಅನೂಪ್ ಕುಟುಂಬಕ್ಕೆ ಸ್ಪೀಕರ್‌ ಸಾಂತ್ವನ

ಯೋಧನ ಪತ್ನಿಗೆ ಸರ್ಕಾರಿ ಕೆಲಸ ನೀಡುವ ಕುರಿತು ಸಿ.ಎಂ. ಜೊತೆ ಮಾತನಾಡುವೆ: ಯು .ಟಿ.ಖಾದರ್

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2024, 16:45 IST
Last Updated 27 ಡಿಸೆಂಬರ್ 2024, 16:45 IST
ಕುಂದಾಪುರ ಸಮೀಪದ ಬೀಜಾಡಿಯ ಮೃತ ಯೋಧ ಅನೂಪ್ ಪೂಜಾರಿ ಅವರ ಮನೆಗೆ ಶುಕ್ರವಾರ ಸಂಜೆ ಭೇಟಿ ನೀಡಿದ ವಿಧಾನಸಭೆಯ ಸ್ವೀಕರ ಯು.ಟಿ. ಖಾದರ್ ಪತ್ನಿ ಮಂಜುಶ್ರೀ ಹಾಗೂ ಕುಟುಂಬಿಕರಿಗೆ ಸಾಂತ್ವನ ಹೇಳಿದರು. ಮಾಜಿ ಸಚಿವ ವಿನಯಕುಮಾರ ಸೊರಕೆ, ದಿನೇಶ್ ಹೆಗ್ಡೆ ಮೊಳಹಳ್ಳಿ, ಬಿ.ಹಿರಿಯಣ್ಣ, ಅಶೋಕ ಪೂಜಾರಿ ಬೀಜಾಡಿ, ಮಲ್ಯಾಡಿ ಶಿವರಾಮ್ ಶೆಟ್ಟಿ ಇದ್ದರು.
ಕುಂದಾಪುರ ಸಮೀಪದ ಬೀಜಾಡಿಯ ಮೃತ ಯೋಧ ಅನೂಪ್ ಪೂಜಾರಿ ಅವರ ಮನೆಗೆ ಶುಕ್ರವಾರ ಸಂಜೆ ಭೇಟಿ ನೀಡಿದ ವಿಧಾನಸಭೆಯ ಸ್ವೀಕರ ಯು.ಟಿ. ಖಾದರ್ ಪತ್ನಿ ಮಂಜುಶ್ರೀ ಹಾಗೂ ಕುಟುಂಬಿಕರಿಗೆ ಸಾಂತ್ವನ ಹೇಳಿದರು. ಮಾಜಿ ಸಚಿವ ವಿನಯಕುಮಾರ ಸೊರಕೆ, ದಿನೇಶ್ ಹೆಗ್ಡೆ ಮೊಳಹಳ್ಳಿ, ಬಿ.ಹಿರಿಯಣ್ಣ, ಅಶೋಕ ಪೂಜಾರಿ ಬೀಜಾಡಿ, ಮಲ್ಯಾಡಿ ಶಿವರಾಮ್ ಶೆಟ್ಟಿ ಇದ್ದರು.   

ಪ್ರಜಾವಾಣಿ ವಾರ್ತೆ

ಕುಂದಾಪುರ: ಕಾಶ್ಮೀರದಲ್ಲಿ ಹುತಾತ್ಮರಾದ ಬೀಜಾಡಿಯ ಯೋಧ ಅನೂಪ್ ಪೂಜಾರಿ ಅವರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಸ್ಥಳೀಯರು ಹಾಗೂ ಕುಟುಂಬದವರು ಮನವಿ ಮಾಡಿದ್ದು, ಮುಖ್ಯಮಂತ್ರಿಗಳೊಂದಿಗೆ ಈ ಕುರಿತು ಮಾತನಾಡುವುದಾಗಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.

ಇಲ್ಲಿಗೆ ಸಮೀಪದ ಬೀಜಾಡಿ ಕೆಳಮನೆಯ ಹುತಾತ್ಮ ಯೋಧ ಅನೂಪ್ ಪೂಜಾರಿ ಅವರ ಮನೆಗೆ ಶುಕ್ರವಾರ  ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಅವರು ಸಾಂತ್ವನ ಹೇಳಿದರು.

ADVERTISEMENT

ದೇಶ ಕಾಯುವ ನಮ್ಮೂರ ಯುವಕನ ಅಕಾಲಿಕ ನಿಧನ ರಾಜ್ಯದ ಜನರಿಗೆ ತೀವ್ರವಾದ ನೋವನ್ನು ಉಂಟು ಮಾಡಿದೆ. ದುರಂತದಲ್ಲಿ ಮೃತರಾದ ರಾಜ್ಯದ ಎಲ್ಲಾ ಸೈನಿಕರ ಕುಟುಂಬದವರಿಗೂ ರಾಜ್ಯ ಸರ್ಕಾರದಿಂದ ದೊರಕುವ ಎಲ್ಲ ಸವಲತ್ತುಗಳನ್ನು ನೀಡುವ ಬಗ್ಗೆ ಮುಖ್ಯಮಂತ್ರಿಗಳು ಹೇಳಿದ್ದು, ಅದನ್ನು ಶೀಘ್ರವಾಗಿ ಅನೂಪ್ ಕುಟುಂಬದವರಿಗೂ ಒದಗಿಸಲು, ಮಾಜಿ ಸಚಿವ ವಿನಯಕುಮಾರ ಸೊರಕೆ, ದಿನೇಶ್ ಹೆಗ್ಡೆ ಮೊಳಹಳ್ಳಿ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಒಟ್ಟಾಗಿ ಪ್ರಯತ್ನ ನಡೆಸುವುದಾಗಿ ಖಾದರ್ ತಿಳಿಸಿದರು.

ಹುತಾತ್ಮ ಯೋಧನ ಹೆಸರಿನಲ್ಲಿ ಸ್ಮಾರಕ ನಿರ್ಮಾಣವೂ ಸೇರಿದಂತೆ ಯಾವುದೇ ಕಾರ್ಯಕ್ರಮಗಳನ್ನು ರೂಪಿಸುವುದಿದ್ದರೂ, ಸ್ಥಳೀಯ ಆಡಳಿತ ತೀರ್ಮಾನ ಕೈಗೊಳ್ಳಲಿ, ಸರ್ಕಾರದಿಂದ ಬೇಕಾದ ಸಹಕಾರ ನೀಡಲು ಬದ್ಧರಿರುವುದಾಗಿ ತಿಳಿಸಿದರು.

ಮಾಜಿ ಸಚಿವ ವಿನಯಕುಮಾರ ಸೊರಕೆ ಮಾತನಾಡಿ, ಅನೂಪ್ ಅವರ ಪತ್ನಿ ಮಂಜುಶ್ರೀ ಅವರು ಬಿಸಿಎ ಪದವೀಧರೆಯಾಗಿದ್ದು, ಸರ್ಕಾರಿ ಉದ್ಯೋಗದ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಸ್ವೀಕರ್ ಅವರ ನೇತೃತ್ವದಲ್ಲಿ ನಾವೆಲ್ಲ ಒಟ್ಟಾಗಿ ಈ ಬಗ್ಗೆ ಪ್ರಯತ್ನಿಸುತ್ತೇವೆ. ಅನೂಪ್‌ ಅವರ ಕುಟುಂಬ ನೆಮ್ಮದಿಯಿಂದ ಜೀವನ ಸಾಗಿಸಲು ಅಗತ್ಯವಾಗಿರುವ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುವುದಾಗಿ ತಿಳಿಸಿದರು.

ಶಾಸಕ ಯಶಪಾಲ್ ಭೇಟಿ: ಹುತಾತ್ಮ ಯೋಧ ಅನೂಪ್ ಪೂಜಾರಿ ಅವರ ಪತ್ನಿ ಹಾಗೂ ಕುಟುಂಬದವರನ್ನು ಭೇಟಿ ಮಾಡಿದ ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು, ಅನೂಪ್ ಅವರ ನಿಧನ ಕರಾವಳಿಯ ಜನರಿಗೆ ಅತೀವ ದುಖಃವನ್ನು ತಂದಿದೆ. ಸೈನ್ಯಕ್ಕೆ ಸೇರುವ ಯುವಕರಿಗೆ ಮಾರ್ಗದರ್ಶನ ಹಾಗೂ ತರಬೇತಿ ನೀಡಲು ಅಕಾಡೆಮಿಯೊಂದನ್ನು ಹುಟ್ಟುಹಾಕಬೇಕು ಎನ್ನುವ ಕನಸು  ಅನೂಪ್ ಪೂಜಾರಿ ಅವರಿಗಿತ್ತು ಎನ್ನುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಅವರ ಕನಸನ್ನು ನನಸು ಮಾಡಲು ಯಾವುದೆ ಸಲಹೆ ಹಾಗೂ ಸಹಕಾರಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಪ್ರಮುಖರು ಒಟ್ಟಾಗಿ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಸ್ಥಳೀಯ ಪ್ರಮುಖರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಬಿ.ಹಿರಿಯಣ್ಣ ಚಾತ್ರಬೆಟ್ಟು, ಮಲ್ಯಾಡಿ ಶಿವರಾಮ್ ಶೆಟ್ಟಿ, ಅಶೋಕ ಪೂಜಾರಿ ಬೀಜಾಡಿ, ಪ್ರಕಾಶ್ ಪೂಜಾರಿ ಬೀಜಾಡಿ, ಅವಿನಾಶ್ ಉಳ್ತೂರು, ಶೇಖರ ಚಾತ್ರಬೆಟ್ಟು, ಸದಾನಂದ ಶೆಟ್ಟಿ ಕೆದೂರು, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಸುರೇಶ್ ಚಾತ್ರಬೆಟ್ಟು , ಸುರೇಂದ್ರ ಶೆಟ್ಟಿ ಸಹನಾ, ಯಾಸಿನ್ ಹೆಮ್ಮಾಡಿ, ಅನಿಲ್ ಚಾತ್ರಬೆಟ್ಟು, ಜಸಿಂತಾ ಡಿಮೆಲ್ಲೊ ಮುಂತಾದವರಿದ್ದರು.

Cut-off box - ₹1 ಲಕ್ಷದ ಚೆಕ್ ನೀಡಿದ ಶಾಸಕ ₹1 ಲಕ್ಷದ ಚೆಕ್ ನೀಡಿದ ಶಾಸಕ ಯಶಪಾಲ್ ಸುವರ್ಣ ಅವರು ಅನೂಪ್ ಅವರ ಪುತ್ರಿ ಇಶಾನಿ ಅವರ ಹೆಸರಿನಲ್ಲಿ ಠೇವಣೆ ಇಡುವಂತೆ ಹೇಳಿದರು.

Cut-off box - ಪೋನ್ ಬೈದಿಜ್ಜಿ... ಸ್ವೀಕರ್ ಯು.ಟಿ. ಖಾದರ್ ಅವರೊಂದಿಗೆ ತುಳುವಿನಲ್ಲಿ ಮಾತನಾಡಿದ ಅನೂಪ್ ಅವರ ಪತ್ನಿ ಮಂಜುಶ್ರೀ ಮದ್ಮೆ ಆಪುನ ದುಂಬುಡ್‍ಲಾ ದಿನಾಲಾ ಪೋನ್ ಮಲ್ತೊಂದಿತ್ತೆರ್ ಮಂಗಳವಾರ ರಾತ್ರಿ ಮುಟ್ಟ ಪೋನ್ ಬೈದಿಜ್ಜಿ ಎಂದಾನಗ ಪೋಡಿಗೆ ಆಂಡ್...(ಮದುವೆಯಾಗುವ ಮೊದಲಿನಿಂದಲೂ ಪ್ರತಿ ದಿನ ಪೋನ್ ಮಾಡುತ್ತಿದ್ದರು. ಮಂಗಳವಾರ ರಾತ್ರಿಯವರೆಗೂ ಪೋನ್ ಬಾರದೆ ಇದ್ದಾಗ ನನಗೆ ಹೆದರಿಕೆಯಾಗಿತ್ತು ) ಎಂದು ಕಣ್ಣೀರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.