ADVERTISEMENT

ಜನವಿರೋಧಿ ಸರ್ಕಾರಕ್ಕೆ ತಕ್ಕ ಉತ್ತರ: ಗೆಲುವಿನ ಬಳಿಕ ಸಂಸದೆ ಶೋಭಾ ಕರಂದ್ಲಾಜೆ

​ಪ್ರಜಾವಾಣಿ ವಾರ್ತೆ
Published 23 ಮೇ 2019, 16:16 IST
Last Updated 23 ಮೇ 2019, 16:16 IST
ಮಲ್ಪೆಯಲ್ಲಿ ತೆರೆದ ವಾಹನದಲ್ಲಿ ಬಿಜೆಪಿ ನಾಯಕರು ಸಂಭ್ರಮಾಚರಣೆ ನಡೆಸಿದರು.
ಮಲ್ಪೆಯಲ್ಲಿ ತೆರೆದ ವಾಹನದಲ್ಲಿ ಬಿಜೆಪಿ ನಾಯಕರು ಸಂಭ್ರಮಾಚರಣೆ ನಡೆಸಿದರು.   

ಉಡುಪಿ: ಮೈತ್ರಿ ಸರ್ಕಾರ ಜನವಿರೋಧಿ ಎಂಬುದು ಲೋಕಸಭೆ ಚುನಾವಣೆಯ ಫಲಿತಾಂಶದಿಂದ ಸಾಬೀತಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.

ಗುರುವಾರ ಮತ ಎಣಿಕೆ ಕೇಂದ್ರಕ್ಕೆ ಬಂದ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ರಾಜ್ಯದ ಜನ ಸರ್ಕಾರದ ಜತೆಗೆ ಇಲ್ಲ. ಮೈತ್ರಿ ಸರ್ಕಾರಕ್ಕೆ ಚುನಾವಣೆಯ ಮೂಲಕ ತಕ್ಕ ಪಾಠ ಕಲಿಸಿದ್ದಾರೆ’ ಎಂದರು.

ಪ್ರಧಾನಿ ನರೇಂದ್ರ ಮೋದಿ ಅಲೆಗೆ ಕಾಂಗ್ರೆಸ್‌ನ ಘಟಾನುಘಟಿ ನಾಯಕರು ಕೊಚ್ಚಿ ಹೋಗಿದ್ದಾರೆ. ತುಮಕೂರಿನಲ್ಲಿ ದೇವೇಗೌಡರು, ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಬಳ್ಳಾರಿಯಲ್ಲಿ ಉಗ್ರಪ್ಪ ಹಾಗೂ ಚಿಕ್ಕಬಳ್ಳಾಪುರದಲ್ಲಿ ಮೊಯ್ಲಿ ಹೀನಾಯವಾಗಿ ಸೋಲುಂಡಿದ್ದಾರೆ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಗೆಲ್ಲಿಸುವ ಮೂಲಕ ಕುಟುಂಬ ರಾಜಕಾರಣಕ್ಕೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ ಎಂದು ಟೀಕಿಸಿದರು.

ADVERTISEMENT

ಚುನಾವಣೋತ್ತರ ಸಮೀಕ್ಷೆ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಸಿದ್ದರಾಮಯ್ಯ ವ್ಯಂಗ್ಯವಾಡಿದ್ದರು. ಸಮೀಕ್ಷೆಯನ್ನು ಮೀರಿ ಬಿಜೆಪಿ ಸಾಧನೆ ಮಾಡಿದೆ. ರಾಜ್ಯದಲ್ಲಿ 22ಕ್ಕಿಂತಲೂ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ, ಉಡುಪಿ–ಚಿಕ್ಕಮಗಳೂರು ಕ್ಷೇತ್ರದಲ್ಲಿ 2 ಲಕ್ಷ ಮುನ್ನಡೆ ಸಿಗುತ್ತದೆ ಎಂದು ಹಿಂದೆ ಹೇಳಿದಂತೆಯೇ ಆಗಿದೆ. ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಉಡುಪಿ–ಚಿಕ್ಕಮಗಳೂರು ಬಿಜೆಪಿ ನೆಲೆಯ ಕ್ಷೇತ್ರ. ಕೆಲವರು ಸ್ವಾರ್ಥಕ್ಕೆ ‘ಗೋ ಬ್ಯಾಕ್‌ ಶೋಭಾ’ ಎಂದರು. ಅವರಿಗೆ ಕ್ಷೇತ್ರದ ಮತದಾರರು ತಕ್ಕ ಉತ್ತರ ಕೊಟ್ಟಿದ್ದಾರೆ. ದ್ವೇಷದ ರಾಜಕಾರಣ ಮಾಡಲ್ಲ. ಯಾರ ಮೇಲೂ ಶಿಸ್ತು ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಹಿರಿಯ ಮುಖಂಡ ಜಯಪ್ರಕಾಶ್ ಹೆಗ್ಡೆ ಅವರಿಗೆ ಪರೋಕ್ಷ ಟಾಂಗ್ ನೀಡಿದರು.

‘ಜನಾದೇಶವನ್ನು ಗೌರವಿಸುವುದಾದರೆ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ಕೊಡಲಿ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯಿಸಿದರು.

₹ 150 ಕೋಟಿ, ಮೂವರು ಸಚಿವರು, 8 ಜನ ಶಾಸಕರು ಮಂಡ್ಯದಲ್ಲಿ ನಿಖಿಲ್‌ ಗೆಲುವಿಗೆ ಸೆಣೆಸಿದರೂ ಮಂಡ್ಯದ ಸ್ವಾಭಿಮಾನಿ ಮತದಾರರು ಸುಮಲತಾ ಅವರನ್ನು ಗೆಲ್ಲಿಸಿದ್ದಾರೆ. ಸುಮಲತಾ ಗೆಲುವು ಸರ್ಕಾರಕ್ಕೆ ಕಪಾಳ ಮೋಕ್ಷ ಮಾಡಿದಂತಿದೆ ಎಂದರು.

ಚುನಾವಣೆಗೂ ಮುನ್ನವೇ ಸುಮಲತಾ ಅವರಿಗೆ ಬಿಜೆಪಿ ಬೇಷರತ್ ಬೆಂಬಲ ನೀಡಿದೆ. ಈಗ ಅವರು ಎನ್‌ಡಿಎ ಮೈತ್ರಿಕೂಟವನ್ನು ಬೆಂಬಲಿಸಿದರೆ ಗೌರವ ಹೆಚ್ಚಾಗುತ್ತದೆ ಎಂದರು.

ಡ್ಯಾನ್ಸ್ ಮಾಡಿದ ಶೋಭಾ

ಬಿಜೆಪಿ ಸಂಭ್ರಮಾಚರಣೆ ವೇಳೆ ಕಾರ್ಯಕರ್ತರ ಒತ್ತಡಕ್ಕೆ ಮಣಿದ ಶೋಭಾ ಕರಂದ್ಲಾಜೆ ನೃತ್ಯ ಮಾಡಿ ಗಮನ ಸೆಳೆದರು. ಕಾರ್ಯಕರ್ತರು ಕೂಗಿದ ಮೋದಿ ಮೋದಿ ಘೋಷಣೆಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.