ADVERTISEMENT

ಪಡುಬಿದ್ರಿ: ಯೋಧ ದೇವದಾಸ್‌ಗೆ ಹುಟ್ಟೂರಿನಲ್ಲಿ ಸ್ವಾಗತ

ಭೂಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ, ನಾಯಕ್ ಸುಭೇದಾರ್ ಪದವಿಯೊಂದಿಗೆ ನಿವೃತ್ತಿ ಹೊಂದಿ ತಾಯ್ನಾಡಿಗೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 5:21 IST
Last Updated 5 ಆಗಸ್ಟ್ 2025, 5:21 IST
ಭಾರತೀಯ ಭೂಸೇನೆಯಲ್ಲಿ ೨೪ ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿ ತಾಯ್ನಾಡಿಗೆ ಮರಳಿದ ಕಾಪು ಪಡು ಗ್ರಾಮದ ದೇವದಾಸ್ ಮೆಂಡನ್ ಅವರನ್ನು ಹುಟ್ಟೂರು ಕಾಪುವಿನಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಭಾರತೀಯ ಭೂಸೇನೆಯಲ್ಲಿ ೨೪ ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿ ತಾಯ್ನಾಡಿಗೆ ಮರಳಿದ ಕಾಪು ಪಡು ಗ್ರಾಮದ ದೇವದಾಸ್ ಮೆಂಡನ್ ಅವರನ್ನು ಹುಟ್ಟೂರು ಕಾಪುವಿನಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.   

ಕಾಪು (ಪಡುಬಿದ್ರಿ): ಭಾರತೀಯ ಭೂಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ, ನಾಯಕ್ ಸುಭೇದಾರ್ ಪದವಿಯೊಂದಿಗೆ ನಿವೃತ್ತಿ ಹೊಂದಿ ತಾಯ್ನಾಡಿಗೆ ಮರಳಿದ ತಾಲ್ಲೂಕಿನ ಪಡು ಗ್ರಾಮದ ದೇವದಾಸ್ ಮೆಂಡನ್ ಅವರನ್ನು ಹುಟ್ಟೂರು ಕಾಪುವಿನಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ತಹಶೀಲ್ದಾರ್ ಪ್ರತಿಭಾ ಆರ್, ಮುಖಂಡ ಲಾಲಾಜಿ ಆರ್. ಮೆಂಡನ್, ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ ನೇತೃತ್ವದಲ್ಲಿ ಊರಿನ ಪ್ರಮುಖರು ಸ್ವಾಗತಿಸಿದರು. ಬಳಿಕ ದೇವದಾಸ್ ಮೆಂಡನ್‌ ಅವರನ್ನು ಅಭಿನಂದಿಸಿ ಅವರ ನಿವಾಸದವರೆಗೆ ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ ಮೂಲಕ ಕರೆ ತರಲಾಯಿತು.

ದೇವದಾಸ್ ಮೆಂಡನ್ ಮಾತನಾಡಿ, ಊರಿನವರು ಇಷ್ಟೊಂದು ಅದ್ದೂರಿಯಾಗಿ ಸ್ವಾಗತಿಸಿರುವುದು ಖುಷಿ ತಂದಿದೆ. ಯುವಜನರು ಮಿಲಿಟರಿ ಸೇವೆಗಾಗಿ ದೈಹಿಕ, ಮಾನಸಿಕ ಸಿದ್ಧತೆ ನಡೆಸಬೇಕು. ದೇಶಕ್ಕಾಗಿ ಸೇವೆ ಸಲ್ಲಿಸುವುದು ಹೆಮ್ಮೆಯ ವಿಚಾರ. ಯುವಕರು ಮುಂದೆ ಬಂದಲ್ಲಿ ಅವರಿಗೆ ಸೂಕ್ತ ತರಬೇತಿ ನೀಡಿ ಮುನ್ನಡೆಸಲು ಬದ್ಧನಿದ್ದೇನೆ ಎಂದರು.

ADVERTISEMENT

ಮುಖಂಡ ಲಾಲಾಜಿ ಮೆಂಡನ್ ಮಾತನಾಡಿ, ನಮ್ಮ ಊರಿನ ಯೋಧ ದೇವದಾಸ್ ಮೆಂಡನ್ ದೇಶದ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಮರಳುವಾಗ ಅವರನ್ನು ಸ್ವಾಗತಿಸಿ ಬರಮಾಡಿಕೊಳ್ಳುವ ಮೂಲಕ ಸೇನೆಗೆ ಸೇರಬಯಸುವ ಯುವಜನರಿಗೆ ಸ್ಫೂರ್ತಿಯಾಗುವ ಪ್ರಯತ್ನ ಮಾಡಿದ್ದೇವೆ ಎಂದರು.

ಪಡು ಗ್ರಾಮದ ರಾಮನಗರ ನಿವಾಸಿಯಾಗಿರುವ ದೇವದಾಸ್ ಮೆಂಡನ್ ಅವರು 2002ರಿಂದ ಭೂಸೇನೆಯ ಆರ್ಟಿಲರಿ ವಿಭಾಗದಲ್ಲಿ ಕರ್ತವ್ಯ ಆರಂಭಿಸಿದ್ದು, 24 ವರ್ಷ ಸೇವೆ ಸಲ್ಲಿಸಿದ್ದರು. ಮಹಾರಾಷ್ಟ್ರದ ನಾಸಿಕ್, ಉತ್ತರ ಪ್ರದೇಶದ ಅಲಹಾಬಾದ್, ಜಮ್ಮು ಕಾಶ್ಮೀರದ ತಂಗಾಧರ್, ಅನಂತ್‌ನಾಗ್, ತಂಗ್ಸೆ, ಉತ್ತರಾಖಂಡ್‌ನ ಡೆಹರಾಡೂನ್, ತ್ರಿಪುರಾದ ಅಗರ್ತಲ, ರಾಜಸ್ಥಾನದ ನಾಸಿರಾಬಾದ್, ಉತ್ತರ ಪ್ರದೇಶದ ಪ್ರಯಾಗ್‌ರಾಜ್, ಅಸ್ಸಾಂನ ಹಟ್ಟಿಗೋರ್ ಸಹಿತ ವಿವಿಧೆಡೆ ಕರ್ತವ್ಯ ನಿರ್ವಹಿಸಿದ್ದಾರೆ. ಈಚೆಗೆ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿಯೂ ಭಾಗವಹಿಸಿದ್ದರು.

ನಿವೃತ್ತ ಯೋಧರಾದ ಕುಶ ಸಾಲ್ಯಾನ್, ಶ್ರೀಕಾಂತ್ ಕರ್ಕೇರ, ರಾಮನಗರ ನಗರ ಫ್ರೆಂಡ್ಸ್ ಅಧ್ಯಕ್ಷ ಸಚಿನ್ ಪುತ್ರನ್, ಪುರಸಭೆ ಸದಸ್ಯ ನಿತಿನ್ ಕುಮಾರ್, ಪ್ರಮುಖರಾದ ನವೀನ್ ಅಮೀನ್, ಲಾಲಾಜಿ ಪುತ್ರನ್, ಅನಿಲ್ ಶೆಟ್ಟಿ, ಉಮೇಶ್ ಪೂಜಾರಿ, ಉದ್ಯಾವರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್ ಬೊಳ್ಜೆ, ಕಾಪು ಮೊಗವೀರ ಮಹಾಸಭಾ, ರಾಮನಗರ ಫ್ರೆಂಡ್ಸ್, ಲಾಲ್ ಬಹದ್ದೂರ್ ಶಾಸ್ತ್ರಿ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್, ಮೊಗವೀರ ಮಹಿಳಾ ಸಭಾ, ವಾಸುದೇವ ಸ್ವಾಮಿ ಭಜನಾ ಮಂಡಳಿ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.