ADVERTISEMENT

ಉಡುಪಿ: ಕೊರ್ಗಿ ಸುಲಿಗೆ ಪ್ರಕರಣದ ಆರೋಪಿಯ ಬಂಧನ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 5:56 IST
Last Updated 12 ಆಗಸ್ಟ್ 2022, 5:56 IST

ಉಡುಪಿ: ಆ.5ರಂದು ಕುಂದಾಪುರ ತಾಲ್ಲೂಕು ಕೊರ್ಗಿ ಗ್ರಾಮದ ಕಾಡಿನಬೆಟ್ಟು ಕಡೆಗೆ ಹೋಗುವ ರಸ್ತೆಯಲ್ಲಿ ದೇವಕಿ ಪೂಜಾರ್ತಿ ಎಂಬುವರಿಗೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ ಚಿನ್ನಾಭರಣ ಸುಲಿಗೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೈಂದೂರು ತಾಲ್ಲೂಕಿನ ಹೊಸಾಡು ಗ್ರಾಮದ ಪ್ರವೀನ್ ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ಗಂಗೊಳ್ಳಿಯ ತ್ರಾಸಿ ಬಳಿ ಆತನನ್ನು ಬಂಧಿಸಲಾಗಿದೆ. ಆರೋಪಿಯು ಮಹಿಳೆಗೆ ಹಲ್ಲೆ ನಡೆಸಿದ ಕುತ್ತಿಗೆಯಲ್ಲಿದ್ದ 2 ಪವನ್‌ ಚಿನ್ನದ ಕರಿಮಣಿ ಸರ, 2 ಪವನ್ ಬಳೆ, ಉಂಗುರ ಸೇರಿ ₹ 1,60 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದ.

ಎಸ್‌ಪಿ ಎನ್.ವಿಷ್ಣುವರ್ಧನ್‌ ನಿರ್ದೇಶನದಲ್ಲಿ ಎಎಸ್‌ಪಿ ಎಸ್.ಟಿ.ಸಿದ್ದಲಿಂಗಪ್ಪ ಮಾರ್ಗದರ್ಶನದಲ್ಲಿ ಕುಂದಾಪುರ ಡಿವೈಎಸ್‌ಪಿ ಕೆ.ಶ್ರೀಕಾಂತ್, ಇನ್‌ಸ್ಪೆಕ್ಟರ್ ಕೆ.ಆರ್.ಗೋಪಿಕೃಷ್ಣ ನೇತೃತ್ವದಲ್ಲಿ ಕುಂದಾಪುರ ಗ್ರಾಮಾಂತರ ಠಾಣೆ ಪಿಎಸ್‌ಐ ಬಿ.ನಿರಂಜನ್ ಗೌಡ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡ ರಚಿಸಲಾಗಿತ್ತು.

ADVERTISEMENT

ಹಾಲಾಡಿ ರಸ್ತೆ ಹಾಗೂ ಕುಂದಾಪುರ ಮುಖ್ಯ ರಸ್ತೆಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಗಂಗೊಳ್ಳಿಯ ತ್ರಾಸಿಯಲ್ಲಿ ಆರೋಪಿ ಪ್ರವೀಣ್‌ನನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ ಬೈಕ್‌, ಚಿನ್ನದ ಉಂಗುರ, ಚಿನ್ನವನ್ನು ಅಡವಿಟ್ಟು ಪಡೆದುಕೊಂಡಿದ್ದ 41,000ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಕುಂದಾಪುರ ಗ್ರಾಮಾಂತರ ಠಾಣೆಯ ಸಿಬ್ಬಂದಿ ಬಿ.ರಾಜು, ಅನಿಲ್ ಕುಮಾರ್, ಚಿದಾನಂದ, ಚಾಲಕ ಆನಂದ, ಅಪರಾಧ ಪತ್ತೆ ದಳದ ರಾಮು ಹೆಗಡೆ ಮತ್ತು ರಾಘವೇಂದ್ರ ಉಪ್ಪುಂದ, ತಾಂತ್ರಿಕ ವಿಭಾಗದ ಸಿಬ್ಬಂದಿ ದಿನೇಶ್ ತನಿಖೆಗೆ ಸಹಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.