ADVERTISEMENT

ಕಾರ್ಕಳ: ಅತ್ತೂರು ‘ಸಾಂತಮಾರಿ’ ಜಾತ್ರೆ ಇಂದಿನಿಂದ

ಸರ್ವಧರ್ಮ ಸಮನ್ವಯ ಕ್ಷೇತ್ರ ಸೇಂಟ್ ಲಾರೆನ್ಸ್ ಬಸಿಲಿಕಾದ ವಾರ್ಷಿಕೋತ್ಸವ

ಸಿದ್ಧಾಪುರ ವಾಸುದೇವ ಭಟ್ಟ
Published 26 ಜನವರಿ 2025, 5:41 IST
Last Updated 26 ಜನವರಿ 2025, 5:41 IST
ಕಾರ್ಕಳ ತಾಲ್ಲೂಕಿನ ಅತ್ತೂರು ಸೇಂಟ್ ಲಾರೆನ್ಸ್ ಬಸಿಲಿಕಾದ ಹೊರನೋಟ
ಕಾರ್ಕಳ ತಾಲ್ಲೂಕಿನ ಅತ್ತೂರು ಸೇಂಟ್ ಲಾರೆನ್ಸ್ ಬಸಿಲಿಕಾದ ಹೊರನೋಟ   

ಕಾರ್ಕಳ: ತಾಲ್ಲೂಕಿನ ಅತ್ತೂರು ಸೇಂಟ್ ಲಾರೆನ್ಸ್ ಬಸಿಲಿಕಾ ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಇಲ್ಲಿ 26ರಿಂದ 30ರ ತನಕ 5 ದಿನ ಸಾಂತಮಾರಿ ಜಾತ್ರೆ ನಡೆಯಲಿದೆ.

ಪ್ರತಿವರ್ಷ ದೇಶವಿದೇಶಗಳಿಂದ ಲಕ್ಷಾಂತರ ಮಂದಿ ಈ ಉತ್ಸವದಲ್ಲಿ ಭಾಗವಹಿಸುತ್ತಾರೆ. ಹಿಂದಿನಿಂದಲೂ ಇದು ‘ಸರ್ವಧರ್ಮ ಸಮನ್ವಯ ಕ್ಷೇತ್ರ’ ಎಂಬ ಖ್ಯಾತಿ ಪಡೆದಿದೆ. ಈ ಸಾಂತಮಾರಿ ಜಾತ್ರೆಯಲ್ಲಿ ದಕ್ಷಿಣ ಭಾರತದ ಕ್ರೈಸ್ತರು ಮಾತ್ರವಲ್ಲದೆ ಇತರ ಮತದವರೂ ಹರಕೆ ಸಲ್ಲಿಸುತ್ತಾರೆ, ಪೂಜೆಯಲ್ಲಿ ಭಾಗವಹಿಸುತ್ತಾರೆ.

ಕ್ರೈಸ್ತಧರ್ಮ ಪ್ರಚಾರಕ್ಕಾಗಿ ರೋಮ್‌ನಿಂದ ಬಂದ ಸೇಂಟ್ ಲಾರೆನ್ಸ್‌ ಹೆಸರಿನಲ್ಲಿ ಈ ಚರ್ಚ್ ಇದೆ. ಇಲ್ಲಿ ಒಂದು ಅಡಿ ಎತ್ತರದ ಸಂತಲಾರೆನ್ಸ್‌ರ ಮರದ ಮೂರ್ತಿಯಿದ್ದು, ‘ಪವಾಡ ಮೂರ್ತಿ’ ಎಂದು ನಂಬಲಾಗಿದೆ.

ADVERTISEMENT

ಮೈಸೂರು ಹುಲಿ ಟಿಪ್ಪು ಸುಲ್ತಾನ್‌ ಮೃತಪಟ್ಟ ನಂತರ ಶ್ರೀರಂಗಪಟ್ಟಣದ ಕಾರಾಗೃಹದಲ್ಲಿದ್ದ ಕರಾವಳಿಯ ಕ್ರೈಸ್ತರು ಅತ್ತೂರು ಸಮೀಪದ ನಕ್ರೆಯ ಎಂಬಲ್ಲಿ ಮುಳಿಹುಲ್ಲಿನ ಚರ್ಚ್‌ ಕಟ್ಟಿಕೊಂಡಿರುತ್ತಾರೆ. ನಂತರ ತಮ್ಮಲ್ಲಿರುವ ಪವಾಡ ಮೂರ್ತಿಯೊಂದಿಗೆ ಸೂಕ್ತ ನಿವೇಶನ ಹುಡುಕುತ್ತಿರುವಾಗ ಅವರಿಗೆ ಈಗಿನ ಪರ್ಪಲೆಗುಡ್ಡ ಸೂಕ್ತವೆಂಬ ನಿದರ್ಶನಗಳು ದೊರಕುತ್ತವೆ. ಅದೇ ಪ್ರದೇಶದಲ್ಲಿ 1839ರಲ್ಲಿ ಈ ಹೊಸ ಚರ್ಚ್‌ ನಿರ್ಮಿಸಲಾಗುತ್ತದೆ.

ಈಚಿನ ವರ್ಷಗಳಲ್ಲಿ ಕ್ಷೇತ್ರದ ಎರಡೂ ಕಡೆ ನಗರ ಪ್ರವೇಶವಾಗುವಲ್ಲಿ 90 ಅಡಿ ಎತ್ತರದ ಗೋಪುರ ನಿರ್ಮಿಸಲಾಗಿದ್ದು, ಇದು ಕ್ರೈಸ್ತ, ಮುಸ್ಲಿಂ ಮತ್ತು ಹಿಂದೂ ವಾಸ್ತುಶೈಲಿಯಲ್ಲಿದೆ. ಕ್ಷೇತ್ರದ ಸರ್ವಧರ್ಮ ಸಮನ್ವಯವನ್ನು ಇದು ಸಂಕೇತಿಸುತ್ತದೆ. ಮುಂದೆ ಅದು ‘ಪುಣ್ಯಕ್ಷೇತ್ರ’ವೆಂದು ಹೆಸರು ಪಡೆಯುತ್ತದೆ. ಈಗ ಕ್ಷೇತ್ರ ಬಸಿಲಕಾ ಎಂದು ಪರಿಗಣಿಸಲ್ಪಟ್ಟಿದೆ. ಏಕಶಿಲೆಯಿಂದ ನಿರ್ಮಿಸಲಾದ ಅತಿ ಎತ್ತರದ ಸೇಂಟ್ ಲಾರೆನ್ಸ್‌ ಪ್ರತಿಮೆಯನ್ನು ಬಸಿಲಿಕಾದ ಬಲಗಡೆ ಪ್ರತಿಷ್ಠಾಪಿಸಲಾಗಿದ್ದು, ಇಂತಹ ಪ್ರತಿಮೆ ಇಟಲಿಯ ರೋಮ್‌ನಲ್ಲಿ ಹಾಗೂ ಅತ್ತೂರಿನಲ್ಲಿ ಬಿಟ್ಟರೆ ಬೇರೆಲ್ಲೂ ಕಾಣಸಿಗುವುದಿಲ್ಲ. ಇದು ಇಲ್ಲಿಯ ವೈಶಿಷ್ಟ್ಯ.

ಇಲ್ಲಿ ಹರಕೆ ರೂಪದಲ್ಲಿ ಮೇಣದ ಬತ್ತಿಗಳನ್ನು ಉರಿಸಲಾಗುತ್ತದೆ. ಎಣ್ಣೆ ತುಪ್ಪ ಅರ್ಪಿಸಲಾಗುತ್ತದೆ. ಬಸಿಲಕಾದ ವೇದಿಕೆ ಮೇಲೆ ಎಳೆ ಮಕ್ಕಳನ್ನು ಮಲಗಿಸಿ ಹಿರಿಯರು ಮೊಣಕಾಲೂರಿ ಸೇಂಟ್ ಲಾರೆನ್ಸರ ದಯೆಗಾಗಿ ಬೇಡುತ್ತಾರೆ. ಜಾತ್ರೆಗೆ ಬಾರದವರಿಗೆ ಪವಿತ್ರ ಕಕ್ಷೆಯ ನೂಲನ್ನು ಪೂಜಿಸಿ ನೀಡಲಾಗುತ್ತದೆ.‌

ಜಾತ್ರೆಯ ಸಂದರ್ಭದಲ್ಲಿ ಪ್ರತಿವರ್ಷವೂ ಒಂದೊಂದು ಸಂದೇಶಗಳನ್ನು ನೀಡಲಾಗುತ್ತಿದ್ದು ಈ ಬಾರಿಯ ಸಂದೇಶ ‘ಭರವಸೆ ನಮ್ಮನ್ನು ನಿರಾಸೆ ಮಾಡುವುದಿಲ್ಲ’ ಎಂಬುದಾಗಿದೆ. ಪವಾಡ ಮೂರ್ತಿಯ ಎದರು ಪ್ರಾರ್ಥಿಸಿದ್ದೆಲ್ಲ ಕೈಗೂಡುತ್ತದೆ ಎಂಬ ನಂಬಿಕೆಯಿಂದಾಗಿ ಕ್ಷೇತ್ರಕ್ಕೆ ಬಂದವರು ಸೇಂಟ್ ಲಾರೆನ್ಸರ ಪವಾಡ ಮೂರ್ತಿಯ ದರ್ಶನ ಪಡೆಯದೇ ಮರಳುವುದಿಲ್ಲ. ದಕ್ಷಿಣ ಭಾರತದಲ್ಲಿ ಪುಷ್ಕರಿಣಿ ಹೊಂದಿರುವ ಕೈಸ್ತ ಕ್ಷೇತ್ರವೆಂದರೆ ಅತ್ತೂರು ಮಾತ್ರ. ಇಲ್ಲಿಗೆ ಬರುವ ಯಾತ್ರಿಕರು ಇದರ ನೀರನ್ನು ತಲೆ ಮೇಲೆ ಪ್ರೋಕ್ಷಿಸಿಕೊಳ್ಳುತ್ತಾರೆ, ಜಾನುವಾರುಗಳಿಗಾಗಿ ಬಾಟಲಿಗಳಲ್ಲಿ ತುಂಬಿಸಿ ಕೊಂಡೊಯ್ಯುತ್ತಾರೆ.

ಉಡುಪಿ ಧರ್ಮಪ್ರಾತ್ಯದ ಆಡಳಿತಕ್ಕೊಳಪಟ್ಟ ಈ ಕ್ಷೇತ್ರದ ಸಮಗ್ರ ನಿರ್ವಹಣೆಯನ್ನು ಪ್ರಸ್ತುತ ಧರ್ಮಗುರು ರೆ.ಫಾ. ಅಲ್ಬನ್ ಡಿಸೋಜ ನೋಡಿಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.