ADVERTISEMENT

ಉಡುಪಿ | 20 ಸಾವಿರ ಹೆಕ್ಟೇರ್‌ನಲ್ಲಿ ಯಾಂತ್ರೀಕೃತ ಭತ್ತ ಬೇಸಾಯ

ಯಂತ್ರಶ್ರೀ, ಹಡಿಲು ಭೂಮಿ ಪುನಶ್ಚೇತನ ಯೋಜನೆಗೆ 28ರಂದು ಚಾಲನೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 4:32 IST
Last Updated 26 ಜೂನ್ 2022, 4:32 IST
ವಸಂತ ಸಾಲ್ಯಾನ್‌
ವಸಂತ ಸಾಲ್ಯಾನ್‌   

ಉಡುಪಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ 2022-23ನೇ ಸಾಲಿನಲ್ಲಿ ರಾಜ್ಯದ 20,000 ಹೆಕ್ಟೇರ್‌ನಲ್ಲಿ ಯಾಂತ್ರೀಕೃತ ಭತ್ತ ಬೇಸಾಯ, ಯಂತ್ರಶ್ರೀ ಹಾಗೂ ಹಡಿಲು ಭೂಮಿ ಪುನಶ್ಚೇತನ ಕಾರ್ಯಕ್ರಮ ರೂಪಿಸಲಾಗಿದ್ದು ಜೂನ್ 28ರಂದು ಬೆಳಿಗ್ಗೆ 11 ಗಂಟೆಗೆ ಬ್ರಹ್ಮಾವರ ತಾಲ್ಲೂಕಿನ ಬಾರ್ಕೂರಿನ ಶ್ರೀನಿವಾಸ ಉಡುಪರ ಕೃಷಿ ಭೂಮಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಎಸ್‍ಕೆಡಿಆರ್‌ಡಿ ಉಡುಪಿ ಪ್ರಾದೇಶಿಕ ನಿರ್ದೇಶಕ ವಸಂತ್ ಸಾಲ್ಯಾನ್ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಧರ್ಮಸ್ಥಳದ ಧರ್ಮಾಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ದೂರದರ್ಶಿತ್ವದ ಗ್ರಾಮಾಭಿವೃದ್ಧಿ ಯೋಜನೆಯು ನಾಲ್ಕು ದಶಕಗಳಿಂದ ರಾಜ್ಯದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೆ. ರಘುಪತಿ ಭಟ್, ವಿನಯ ಕುಮಾರ್ ಸೊರಕೆ ಉಪಸ್ಥಿತರಿರಲಿದ್ದಾರೆ.

ADVERTISEMENT

ರೈತರಿಗೆ ಭತ್ತ ಯಾಂತ್ರೀಕರಣದ ಕೌಶಲ ತಿಳಿಸಲು ಉಳುಮೆಯಿಂದ ಒಕ್ಕಣೆಯವರೆಗೆ ಬಳಕೆ ಮಾಡುವ ಯಂತ್ರಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ತಜ್ಞರು, ಯಂತ್ರೋಪಕರಣಗಳ ಬಳಕೆಯ ಕುರಿತು ಪ್ರಾತ್ಯಕ್ಷಿಕೆ ನೀಡಲಿದ್ದಾರೆ.

ಹಸಿರೆಲೆ ಗೊಬ್ಬರ ತಯಾರಿ, ನರ್ಸರಿ ನಿರ್ಮಾಣದ ಬಗ್ಗೆ ಮಾಹಿತಿ ನೀಡಲಾಗುವುದು‌. ಭತ್ತ ನಾಟಿ ಯಂತ್ರದ ಪ್ರಾತ್ಯಕ್ಷಿಕೆ ಇರಲಿದೆ. ಯಂತ್ರಶ್ರೀ ಯೋಜನೆಯಲ್ಲಿ ಸಾಧನೆ ಮಾಡಿದವರಿಗೆ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರ ವಿತರಿಸಲಾಗುವುದು ಎಂದರು.

ರಾಜ್ಯದ 20,000 ಹೆಕ್ಟೇರ್ ಪ್ರದೇಶದಲ್ಲಿ ಅನುಷ್ಠಾನಗೊಳ್ಳಲಿರುವ ಯಾಂತ್ರೀಕೃತ ಭತ್ತ ಬೇಸಾಯ ಯಂತ್ರಶ್ರೀ ಮತ್ತು ಹಡಿಲು ಭೂಮಿ ಪುನಶ್ಚೇತನ ಯೋಜನೆ ಪೈಕಿ ಉಡುಪಿ ಜಿಲ್ಲೆಯಲ್ಲಿ 6 ಹೆಕ್ಟೇರ್ ಗುರಿ ಇದೆ. 150ಕ್ಕೂ ಹೆಚ್ಚು ಯಾಂತ್ರೀಕೃತ ನಾಟಿ ಯಂತ್ರಗಳಿದ್ದು ಜಿಲ್ಲೆಯಲ್ಲಿ 56 ಯಂತ್ರಗಳಿವೆ ಎಂದು ಮಾಹಿತಿ ನೀಡಿದರು.

ಸಣ್ಣ ಹಾಗೂ ಅತಿ ಸಣ್ಣ ರೈತರ ಅಭಿವೃದ್ಧಿಗೆ ನೆರವು ನೀಡಲಾಗುತ್ತಿದೆ ಕೃಷಿ ಪ್ರದೇಶ ವಿಸ್ತರಣೆ ಮತ್ತು ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. 2010-14ರ ಅವಧಿಯಲ್ಲಿ ನಬಾರ್ಡ್ ಸಹಕಾರದಲ್ಲಿ 5 ಸಾವಿರ ರೈತರಿಗೆ ಶ್ರೀಪದ್ಧತಿಯಡಿ ಭತ್ತ ಬೆಳೆಯಲು ಪ್ರೇರೇಪಿಸಲಾಗಿದೆ. 2014ರಿಂದ 20ರ ಅವಧಿಯಲ್ಲಿ ಕರ್ನಾಟಕ‌ ಸರ್ಕಾರದ ಸಹಯೋಗದಲ್ಲಿ ಕೃಷಿ ಯಂತ್ರಧಾರೆ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು. ಭತ್ತ ಬೇಸಾಯದಲ್ಲಿ ಯಾಂತ್ರೀಕರಣ ಅಳವಡಿಕೆಗೆ ಪ್ರೇರೇಪಿಸಲಿ ಯಂತ್ರಶ್ರೀ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ರಿಯಾಯಿತಿ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ನೀಡಲಾಗುತ್ತಿದ್ದು, 2 ವರ್ಷಗಳಿಂದ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಯಂತ್ರಶ್ರೀ ಯೋಜನೆ ಕರಾವಳಿಯ ರೈತರಿಗೆ ಉಪಯೋಗವಾಗಿದ್ದು ಯೋಜನೆಯನ್ನು ರಾಜ್ಯಮಟ್ಟಕ್ಕೆ ವಿಸ್ತರಿಸಲಾಗುತ್ತಿದೆ. 20,000 ಹೆಕ್ಟೇರ್ ಪ್ರದೇಶದಲ್ಲಿ ಯಂತ್ರಶ್ರೀ ಕಾರ್ಯಕ್ರಮ ಅನುಷ್ಠಾನ ಗುರಿ ಇದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೃಷಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೇಜಸ್, ಯಂತ್ರಶ್ರೀ ವಿಭಾಗದ ಯೋಜನಾಕಾರಿ ಸುರ್ ಜೈನ್, ಉಡುಪಿ ಪ್ರಾದೇಶಿಕ ಕಚೇರಿ ಆಡಳಿತ ಯೋಜನಾಧಿಕಾರಿ ಪುರಂದರ ಪೂಜಾರಿ, ತರಬೇತಿಸಂಸ್ಥೆಯ ಪ್ರಾಂಶುಪಾಲ ಉಲ್ಲಾಸ್ ಮೇಸ್ತ, ತಾಲ್ಲೂಕು ಯೋಜನಾಕಾರಿ ಕೆ. ರಾಮ, ಜನಜಾಗೃತಿ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್, ಪ್ರಾದೇಶಿಕ ಯೋಜನಾಧಿಕಾರಿ ಶಶಿರೇಖಾ ಹಾಗೂ ಶ್ರೀನಿವಾಸ್ ಉಡುಪ ಇದ್ದರು.

ಯಂತ್ರಶ್ರೀ ಯೋಧರು
ಗ್ರಾಮೀಣ ಮಟ್ಟದಲ್ಲಿ ಯಂತ್ರಶ್ರೀ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ರೈತರನ್ನು ಗುರುತಿಸಿ ತರಬೇತಿ ನೀಡಿ, ಯಂತ್ರಶ್ರೀ ಅನುಷ್ಠಾನಗೊಳಿಸಲು ಯಂತ್ರಶ್ರೀ ಯೋಧರ ಪಡೆ ನಿಯೋಜಿಸಲಾಗಿದೆ. ಓರ್ವ ಯೋಧನು ಒಂದು ಹಂಗಾಮಿನಲ್ಲಿ 100 ಎಕರೆ ಪ್ರದೇಶದಲ್ಲಿ ಯೋಜನೆ ಅನುಷ್ಠಾನಗೊಳಿಸಲಿದ್ದು ಪ್ರಸ್ತುತ 408 ಯಂತ್ರಶ್ರೀ ಯೋಧರ ಪಡೆ ಇದೆ ಎಂದರು.

ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಯಂತ್ರಗಳು ಲಭ್ಯವಿದ್ದು, ಜಮೀನಿನ ಆರ್‌ಟಿಸಿ ಜೆರಾಕ್ಸ್ ಪ್ರತಿ, ಆಧಾರ್ ಅಥವಾ ಗುರುತಿನ ಚೀಟಿ ನೀಡಿ ಹೆಸರು ನೋಂದಾಯಿಸಿಕೊಂಡರೆ ಯಂತ್ರಗಳನ್ನು ಬಾಡಿಗೆಗೆ ನೀಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.