ADVERTISEMENT

ಉಡುಪಿ | ಎಲ್ಲ ಕುಟುಂಬಗಳ ಸಮೀಕ್ಷೆ ನಡೆಸಿ: ಸ್ವರೂಪಾ ಟಿ.ಕೆ.

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 4:59 IST
Last Updated 5 ಸೆಪ್ಟೆಂಬರ್ 2025, 4:59 IST
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಾತನಾಡಿದರು
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಾತನಾಡಿದರು   

ಉಡುಪಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯಾದ್ಯಂತ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳಲಿದ್ದು, ಅದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ವ್ಯವಸ್ಥಿತ ರೀತಿಯಲ್ಲಿ ಮಾಡಿಕೊಳ್ಳುವುದರೊಂದಿಗೆ ಸಮಿಕ್ಷಾ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಸಂಕೀರ್ಣದ ವೀಡಿಯೊ ಕಾನ್ಫರೆನ್ಸ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಎಲ್ಲ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಿದೆ. ಜಿಲ್ಲೆಯಲ್ಲಿ ನಗರ ವ್ಯಾಪ್ತಿಯಲ್ಲಿ 1.05 ಲಕ್ಷ ಹಾಗೂ ಗ್ರಾಮೀಣ ಭಾಗದಲ್ಲಿ 2.14 ಲಕ್ಷ ಸೇರಿದಂತೆ ಒಟ್ಟು ಸುಮಾರು 3.19 ಲಕ್ಷ ಕುಟುಂಬಗಳಿದ್ದು, ಎಲ್ಲ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆಗಬೇಕು. ಯಾವುದೇ ಕುಟುಂಬಗಳು ಸಮೀಕ್ಷೆಯಿಂದ ಹೊರಗುಳಿಯದಂತೆ ಎಚ್ಚರ ವಹಿಸಿ ಸಮೀಕ್ಷೆ ನಡೆಸಬೇಕು ಎಂದರು.

ಸಾಮಾನ್ಯವಾಗಿ ಎಲ್ಲ ವಾಸದ ಮನೆಗಳಿಗೆ ವಿದ್ಯುತ್ ಸಂಪರ್ಕ ಇರುವುದರಿಂದ ವಾಸದ ಮನೆಗಳ ಆರ್.ಆರ್. ಮೀಟರ್ ಆಧಾರದ ಮೇಲೆ ಮನೆಗಳನ್ನು ಗುರುತಿಸಿ, ಅಲ್ಲಿರುವ ಜನರ ಸಮೀಕ್ಷೆ ಮಾಡುವುದರಿಂದ ಯಾವುದೇ ಮನೆಗಳು ಸಮೀಕ್ಷಾ ವ್ಯಾಪ್ತಿಯಿಂದ ತಪ್ಪಿ ಹೋಗುವುದಿಲ್ಲ ಎಂದು ಹೇಳಿದರು.

ADVERTISEMENT

ಮೊದಲ ಹಂತದಲ್ಲಿ ಜಿಲ್ಲೆಯಲ್ಲಿರುವ ಎಲ್ಲ ಮನೆಗಳ ವಿದ್ಯುತ್ ಮೀಟರ್ ರೀಡರ್‌ಗಳಿಂದ ಕುಟುಂಬಗಳ ಪಟ್ಟಿ ಮಾಡಿ, ಮನೆಗಳಿಗೆ ಜಿಯೋ ಟ್ಯಾಗಿಂಗ್‌ಗಾಗಿ ಸ್ಟಿಕ್ಕರ್‌ಗಳನ್ನು ಅಳವಡಿಸುವ ಕಾರ್ಯ ಆರಂಭಿಸಲಾಗಿದ್ದು, ಇದೇ 10 ರೊಳಗಾಗಿ ಜಿಯೋ ಟ್ಯಾಗಿಂಗ್ ಮಾಡುವ ಕಾರ್ಯವನ್ನು ಮೆಸ್ಕಾಂ ಇಲಾಖೆಯವರು ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

ಅನಧಿಕೃತ ಕಟ್ಟಡಗಳು, ಮತ್ತಿತರ ಪ್ರದೇಶಗಳಲ್ಲಿ ಆರ್. ಆರ್ ನಂಬರ್ ಹೊಂದದೇ ಇರುವ ಕುಟುಂಬಗಳು ಜಿಲ್ಲೆಯಲ್ಲಿವೆ. ಅಂತಹ ಕುಟುಂಬಗಳೂ ಕೂಡ ಸಮೀಕ್ಷೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಹೀಗಾಗಿ ಅಂತಹ ಕುಟುಂಬಗಳ ಪ್ರತ್ಯೇಕ ಪಟ್ಟಿಯನ್ನು ತಯಾರಿಸಿ, ಆ ಮನೆಗಳಿಗೂ ಸಹ ಗ್ರಾಮ ಲೆಕ್ಕಧಿಕಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ಜಿಯೋ ಟ್ಯಾಗ್ ಮಾಡಲು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.

ಸಮೀಕ್ಷಾ ಕಾರ್ಯವನ್ನು ಶಾಲಾ ಶಿಕ್ಷಕರು ಕೈಗೊಳ್ಳಲಿದ್ದು, ಸಮೀಕ್ಷೆಗಾಗಿಯೇ ವಿಶೇಷವಾದ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್ ಮೂಲಕವೇ ಸಮೀಕ್ಷೆ ನಡೆಸಲಾಗುವುದು ಎಂದರು.

ಸಮೀಕ್ಷೆ ಕಾರ್ಯವನ್ನು ಜಿಲ್ಲೆಯಲ್ಲಿ ಕೈಗೊಂಡಿರುವ ಬಗ್ಗೆ ಎನ್.ಎಸ್.ಎಸ್ ವಿದ್ಯಾರ್ಥಿಗಳನ್ನು ಬಳಸಿಕೊಂಡು ವ್ಯಾಪಕ ಪ್ರಚಾರ ನೀಡಬೇಕು. ಸಮೀಕ್ಷೆ ಕಾರ್ಯಗಳ ಮೇಲುಸ್ತುವಾರಿ ಮಾಡಲು ಪ್ರತಿ ತಾಲ್ಲೂಕಿಗೆ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ವಿವರಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಸಹಾಯಕ ಆಯುಕ್ತೆ ರಶ್ಮಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಹಾಕಪ್ಪ ಆರ್. ಲಮಾಣಿ ಉಪಸ್ಥಿತರಿದ್ದರು.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯವನ್ನು ಇದೇ 22 ರಿಂದ ಆರಂಭಿಸಿ ಅಕ್ಟೋಬರ್ 7 ರೊಳಗೆ ಪೂರ್ಣಗೊಳಿಸುವ ಗುರಿಯನ್ನು ನಿಗದಿಪಡಿಸಲಾಗಿದೆ
ಸ್ವರೂಪಾ ಟಿ.ಕೆ. ಜಿಲ್ಲಾಧಿಕಾರಿ
‘80 ರಿಂದ 100 ಮನೆಗಳಿಗೆ ಭೇಟಿ’
ಜಿಲ್ಲೆಯಲ್ಲಿನ ಒಟ್ಟು ಕುಟುಂಬಗಳ ಸಂಖ್ಯೆಗೆ ಅನುಗುಣವಾಗಿ ಪ್ರತಿ ಸಮೀಕ್ಷೆದಾರರು ಕನಿಷ್ಠ 80 ರಿಂದ 100 ಮನೆಗಳಿಗೆ ಖುದ್ದು ಭೇಟಿ ನೀಡಿ ಸಮೀಕ್ಷೆ ಮಾಡಬೇಕಾಗುತ್ತದೆ. ರಾಜ್ಯ ಮಟ್ಟದಲ್ಲಿ ಮಾಸ್ಟರ್ ಟ್ರೈನರ್ಸ್‌ಗಳ ತರಬೇತಿಯು ಇದೇ 8 ರಂದು ನಡೆಯಲಿದ್ದು ಜಿಲ್ಲಾ ಮಟ್ಟದಲ್ಲಿ 9ರಿಂದ 11 ರ ವರೆಗೆ ತರಬೇತಿ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲೆಯಲ್ಲಿ ನಡೆಯುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೆ ಸಂಬಂಧಿಸಿ ಸರ್ಕಾರದಿಂದ ನೀಡಲಾಗುವ ಸೂಚನೆ ಮಾರ್ಗಸೂಚಿಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಸಿಬ್ಬಂದಿ ತಪ್ಪದೆ ಪಾಲಿಸಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.