ADVERTISEMENT

ಬಾಗೀರಥಿಗೆ ಆರತಿ ಬೆಳಗಿ ವಿಶೇಷ ಪೂಜೆ

ಗರ್ಭಗುಡಿ ಸೇರಿದ ಬಲಿದೇವರ ಮೂರ್ತಿ; ಉತ್ಥಾನ ದ್ವಾದಶಿಯಂದು ರಥೋತ್ಸವ ಆರಂಭ

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 16:32 IST
Last Updated 13 ಜೂನ್ 2019, 16:32 IST
ಮಧ್ವ ಸರೋವರದಲ್ಲಿರುವ ಬಾಗೀರಥಿ ಗುಡಿಯಲ್ಲಿ ಗಂಗೆಗೆ ಆರತಿ ಎತ್ತಿ ವಿಶೇಷ ಪೂಜೆ ಸಲ್ಲಿಸಲಾಯಿತು
ಮಧ್ವ ಸರೋವರದಲ್ಲಿರುವ ಬಾಗೀರಥಿ ಗುಡಿಯಲ್ಲಿ ಗಂಗೆಗೆ ಆರತಿ ಎತ್ತಿ ವಿಶೇಷ ಪೂಜೆ ಸಲ್ಲಿಸಲಾಯಿತು   

ಉಡುಪಿ: ಶ್ರೀಕೃಷ್ಣಮಠದಲ್ಲಿ ಬುಧವಾರ ಶ್ರದ್ಧಾ ಭಕ್ತಿ ಹಾಗೂ ಸಂಭ್ರಮದ ಬಾಗೀರಥಿ ಜಯಂತಿ ನೆರವೇರಿತು. ಮಧ್ವ ಸರೋವರದಲ್ಲಿರುವ ಬಾಗೀರಥಿ ಗುಡಿಯಲ್ಲಿ ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳು ಗಂಗೆಗೆ ಆರತಿ ಎತ್ತಿ ವಿಶೇಷ ಪೂಜೆ ಸಲ್ಲಿಸಿದರು.

ಬೆಳಿಗ್ಗೆ ಬಾಗೀರಥಿ ಗುಡಿಯಲ್ಲಿ ಗಂಗೆಗೆ ಪಂಚಾಮೃತ ಅಭಿಷೇಕ ಮಾಡಲಾಯಿತು. ಸಂಜೆ ರಥಬೀದಿಯಲ್ಲಿ ಪ್ರಸಕ್ತ ವರ್ಷದ ಸರಣಿಯ ಕೊನೆಯ ಬ್ರಹ್ಮರಥೋತ್ಸವ ನಡೆಸಲಾಯಿತು. ಬಳಿಕ ಬಲಿದೇವರ ಮೂರ್ತಿಯನ್ನು ಬಾಗೀರಥಿ ಗುಡಿಗೆ ತಂದು ತೊಟ್ಟಿಲು ಸೇವೆ ನಡೆಸಿ ಅಷ್ಠಾವಧಾನ ಸೇವೆ ನೆರವೇರಿಸಲಾಯಿತು.

ಪಲಿಮಾರು ಶ್ರೀಗಳು ಮಳೆಗಾಗಿ ಬಾಗೀರಥಿ ದೇವಿಯನ್ನು ಪ್ರಾರ್ಥಿಸಿದ್ದರು. ಪೂಜೆಯ ವೇಳೆಯಲ್ಲಿ ಜೋರು ಮಳೆ ಸುರಿದಿದ್ದು ಭಕ್ತರಲ್ಲಿ ಸಂತಸವನ್ನು ಹೆಚ್ಚಿಸಿತು. ಪೂಜೆಯ ಬಳಿಕ ಉತ್ಸವ ಮೂರ್ತಿಯನ್ನು ಗರ್ಭಗುಡಿಯಲ್ಲಿ ಇರಿಸಲಾಯಿತು.

ADVERTISEMENT

ಮಳೆಗಾಲದಲ್ಲಿ ಕೃಷ್ಣನ ಉತ್ಸವ ಮೂರ್ತಿಯ ರಥೋತ್ಸವ ನಡೆಯುವುದಿಲ್ಲ. 5 ತಿಂಗಳ ಬಳಿಕ ಉತ್ಥಾನ ದ್ವಾದಶಿಯಂದು ಗರ್ಭಗುಡಿಯಿಂದ ಉತ್ಸವ ಮೂರ್ತಿಯನ್ನು ಹೊರತಂದು ಮತ್ತೆ ನಿತ್ಯ ರಥೋತ್ಸವ ಆರಂಭಿಸಲಾಗುತ್ತದೆ.

ಮಠಾಧೀಶರ ಉಪಸ್ಥಿತಿ:ಅದಮಾರು ಮಠದ ಈಶಪ್ರಿಯ ಸ್ವಾಮೀಜಿ, ಪಲಿಮಾರು ಮಠದ ಕಿರಿಯ ಯತಿ ವಿದ್ಯಾರಾಜೇಶ್ವರ ಸ್ವಾಮೀಜಿ ಉಪಸ್ಥಿತರಿದ್ದರು.

ಮಧ್ವ ಸರೋವರಕ್ಕೆ ನೀರು:ಬೇಸಗೆಯಲ್ಲಿ ಮಧ್ವ ಸರೋವರದ ಹೂಳು ತೆಗೆದಿದ್ದರಿಂದ ನೀರಿಲ್ಲದ ಸರೋವರ ಬರಿದಾಗಿತ್ತು. ಬುಧವಾರ ಸುರಿದ ಮಳೆಗೆ ಸರೋವರಕ್ಕೆ ಮತ್ತೆ ಜೀವಕಳೆ ಬಂದಿದೆ. ಮಳೆಯ ನೀರು ಜಿನುಗುತ್ತಿದ್ದು, ಕೆಲವೇ ದಿನಗಳಲ್ಲಿ ಭರ್ತಿಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.