ADVERTISEMENT

ಬೈಂದೂರು: ಕುಸಿಯುತ್ತಿದೆ ಸೋಮೇಶ್ವರ ಗುಡ್ಡ

ಬೈಂದೂರು: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು

​ಪ್ರಜಾವಾಣಿ ವಾರ್ತೆ
Published 17 ಜುಲೈ 2024, 15:19 IST
Last Updated 17 ಜುಲೈ 2024, 15:19 IST
ಬೈಂದೂರು ಪಡುವರಿ ಗ್ರಾಮದ ಸೋಮೇಶ್ವರ ಬಳಿ ಗುಡ್ಡ ಕುಸಿತ ಉಂಟಾಗಿದೆ
ಬೈಂದೂರು ಪಡುವರಿ ಗ್ರಾಮದ ಸೋಮೇಶ್ವರ ಬಳಿ ಗುಡ್ಡ ಕುಸಿತ ಉಂಟಾಗಿದೆ   

ಬೈಂದೂರು: ಪಡುವರಿ ಗ್ರಾಮದ ಸೋಮೇಶ್ವರ ಗುಡ್ಡದಲ್ಲಿ ಖಾಸಗಿ ಕಟ್ಟಡಕ್ಕೆ ರಸ್ತೆ ನಿರ್ಮಿಸಿದ ಪರಿಣಾಮ ಗುಡ್ಡ ಕುಸಿದು ಮಣ್ಣು ರಸ್ತೆಗೆ ಬಿದ್ದಿದೆ. ನಿರಂತರ ಸುರಿಯುತ್ತಿರುವ ಮಳೆಯ ಅಬ್ಬರದ ಪರಿಣಾಮವಾಗಿ ಸೊಮೇಶ್ವರ-ದೊಂಬೆ ರಸ್ತೆಗೆ ಮಣ್ಣು ಕುಸಿಯುತ್ತಿದೆ ಎಂದು ಸಾರ್ವಜನಿಕರು ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.

ಗುಡ್ಡವು ಯಾವುದೇ ಕ್ಷಣದಲ್ಲೂ ಕುಸಿಯುವ ಸಾಧ್ಯತೆ ಇದ್ದು, ಒಂದೊಮ್ಮೆ ಕುಸಿದರೆ ರಸ್ತೆಯ ಇನ್ನೊಂದು ಪಾರ್ಶ್ವದ ಗುಡ್ಡವು ಸೋಮೇಶ್ವರ ದೇವಾಲಯದ ಆವರಣ, ಕೆರೆ ಹಾಗೂ ಸುತ್ತಮುತ್ತ ಜರಿದು ಬೀಳಲಿದೆ ಎಂದಿದ್ದಾರೆ.

ಪಟ್ಟಣ ಪಂಚಾಯತ್ ನಿರ್ಲಕ್ಷ್ಯ : ಶೇಡಿ ಮಣ್ಣಿನ ಈ ಗುಡ್ಡದಲ್ಲಿ ಹಲವಾರು ತಿಂಗಳುಗಳಿಂದ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಮಳೆಯಲ್ಲಿ ಗುಡ್ಡ ಜರಿದು ಮಣ್ಣು ಕುಸಿಯುತ್ತಿದೆ. ಮಳೆ ಮುಂದುವರಿದರೆ ಗುಡ್ಡದ ಒಂದು ಪಾರ್ಶ್ವ ಸಂಪೂರ್ಣ ಕುಸಿಯುವ ಸಾಧ್ಯತೆಯಿದೆ. ನಿತ್ಯ ಶಾಲಾ ವಾಹನ ಸೇರಿದಂತೆ ನೂರಾರು ವಾಹನ ಈ ರಸ್ತೆಯಲ್ಲಿ ಸಂಚರಿಸುತ್ತಿರುತ್ತದೆ. ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಪಟ್ಟಣ ಪಂಚಾಯಿತಿ ಗಮನಹರಿಸಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ADVERTISEMENT

ಗುಡ್ಡ ಕೊರೆದು ರಸ್ತೆ ನಿರ್ಮಿಸಲು ಅಧಿಕಾರಿಗಳು ಅನುಮತಿ ಹೇಗೆ ನೀಡಿದರು. ಈ ಕುರಿತು ಎರಡು ವರ್ಷದಿಂದ ದೂರು ನೀಡುತ್ತಿದ್ದೇವೆ ಆದರೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕ್ರಮಗೊಂಡಿಲ್ಲ. ಗುಡ್ಡ ಕುಸಿತಕ್ಕೆ ಪಟ್ಟಣ ಪಂಚಾಯಿತಿ ನೇರ ಹೊಣೆ ಎಂದೂ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳಿಗೆ ತರಾಟೆ: ಗುಡ್ಡ ಕುಸಿಯುತ್ತಿರುವ ಮಾಹಿತಿ ತಿಳಿದು ಕಂದಾಯ, ಪೊಲೀಸ್‌ ಹಾಗೂ ಇತರ ಅಧಿಕಾರಿಗಳು  ಬುಧವಾರ ಸ್ಥಳಕ್ಕಾಗಮಿಸಿದರು. ಕುಸಿಯುವ ಭೀತಿ ಇರುವುದರಿಂದ ದೊಂಬೆ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಲು ಮುಂದಾದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು, ನಿತ್ಯ ಸುತ್ತು ಬಳಸಿ ಬರಲು ಸಾಧ್ಯವಿಲ್ಲ. ಮೊದಲು ಗುಡ್ಡ ಕೊರೆದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಪಟ್ಟಣ ಪಂಚಾಯಿತಿ ಅಧಿಕಾರಿ ಅಜಯ್ ಭಂಡಾರ್‌ಕರ್, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಅನುಮತಿ ರದ್ದುಪಡಿಸುವುದಾಗಿ ತಿಳಿಸಿದರು.

ಅಧಿಕಾರಿಗಳೇ ಹೊಣೆ: ಬೈಂದೂರಿನ ಪಡುವರಿಯ ಸೋಮೇಶ್ವರ ದೊಂಬೆ ರಸ್ತೆಯಲ್ಲಿ ಗುಡ್ಡ ಕುಸಿಯುವ ಆತಂಕ ಎದುರಾಗಿದ್ದು, ಈ ಸಂಬಂಧ ಅಗತ್ಯ ಕಾಮಗಾರಿ ವ್ಯವಸ್ಥಿತ ರೀತಿಯಲ್ಲಿ ನಡೆಸುವಂತೆ ಈ ಹಿಂದೆಯೇ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು. ಆದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಈಗ ಮಳೆಗೆ ಗುಡ್ಡ ಕುಸಿದರೆ ಅಧಿಕಾರಿಗಳೇ ಅದಕ್ಕೆ ಜವಾಬ್ದಾರರು. ತಕ್ಷಣವೇ ತುರ್ತು ಕಾಮಗಾರಿ ನಡೆಸಬೇಕು ಎಂದು ಶಾಸಕ ಗುರುರಾಜ್ ಗಂಟಿಹೊಳೆ ಸೂಚಿಸಿದ್ದಾರೆ.

ಈ ಪ್ರದೇಶಕ್ಕೆ ಈ ಹಿಂದೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯರು ದೂರನ್ನು ಕೊಟ್ಟಿದ್ದರು. ಈ ಬಗ್ಗೆ ಗಂಭೀರವಾಗಿ ಯೋಚಿಸಿ ಕ್ರಮಕ್ಕೆ ಸೂಚನೆಯನ್ನು ನೀಡಲಾಗಿತ್ತು. ಆದರೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ ಫಲ ಹೀಗಾಗುತ್ತಿದೆ. ತಕ್ಷಣವೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಶಾಸಕಕರು ತಿಳಿಸಿದ್ದಾರೆ.

ಸ್ಥಳಕ್ಕೆ ಕಂದಾಯ ಇಲಾಖೆಯ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ದೀಪಕ್, ವಲಯ ಅರಣ್ಯಾಧಿಕಾರಿ ಸಂದೇಶ ಕುಮಾರ್, ಉಪವಲಯ ಅರಣ್ಯಾಧಿಕಾರಿ ಹರ್ಷ ವಿ., ವೃತ್ತ ನಿರೀಕ್ಷಕ ಸವಿತ್ರ ತೇಜ್, ಠಾಣಾಧಿಕಾರಿ ತಿಮ್ಮೇಶ್ ಬಿ. ಎನ್., ಕಿರಿಯ ಆರೋಗ್ಯ ನಿರೀಕ್ಷಕ ಸತೀಶ್ ಆರ್. ಚಂದನ್, ಗಸ್ತು ಅರಣ್ಯ ಪಾಲಕರಾದ ಶಂಕರ ಡಿ. ಎಲ್., ಮಂಜುನಾಥ ನಾಯ್ಕ ಮೊದಲಾದವರು ಭೇಟಿ ನೀಡಿದರು.

ಕ್ರಮ ಜರುಗಿಸಿ

ಗಂಟಿಹೊಳೆ ಗುಡ್ಡ ಜರಿದು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಡಕುಂಡಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಈ ಹಿಂದೆಯೇ ದೂರು ನೀಡಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ಹೀಗಾಗಿ ಕಾಮಗಾರಿಗೆ ಸಂಬಂಧಪಟ್ಟವರು ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು ಎಂದು ಶಾಸಕ ಗುರುರಾಜ್ ಗಂಟಿಹೊಳೆ ಎಚ್ಚರಿಸಿದ್ದಾರೆ. ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿದ್ದು ಹಲವೆಡೆ ಮಳೆ ಹಾನಿ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ ಸಾಗುವ ಒತ್ತಿನೆಣೆಯಲ್ಲಿ ಹೆದ್ದಾರಿ ಪ್ರಾಧಿಕಾರದಿಂದ ಕೆಲವು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. ದೊಂಬೆ ರಸ್ತೆಯನ್ನು ಅಧಿಕಾರಿಗಳು ಈ ಬಗೆಯಲ್ಲಿ ನಿರ್ಲಕ್ಷ್ಯ ಮಾಡಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.