ಕಾರ್ಕಳ: ‘ವಿದ್ಯಾರ್ಥಿಗಳು ಅಂಕ ಗಳಿಕೆ ಹಿಂದೆ ಹೋಗದೆ ಜ್ಞಾನ, ಕೌಶಲ ಪಡೆಯಬೇಕು’ ಎಂದು ಕೇಮಾರು ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ಸಲಹೆ ನೀಡಿದರು.
ತಾಲ್ಲೂಕಿನ ಬಜೆಗೋಳಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅಮ್ಮನ ನೆರವು ಫೌಂಡೇಷನ್ ಮೂಲಕ ಕೊಡಮಾಡಿದ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಶಿಕ್ಷಣವು ಉತ್ತಮ ಬಂಡವಾಳವಾಗಿದ್ದು, ಉದ್ಯೋಗ ಪಡೆಯಲು ಮಾತ್ರ ಶಕ್ತಿ ಎಂಬ ನಂಬಿಕೆ ಹಿಂದೆ ಇತ್ತು. ಆದರೆ ಈಗ ಜ್ಞಾನ, ಕೌಶಲಕ್ಕಾಗಿ ಓದು ಎಂಬ ಗ್ರಹಿಕೆ ಆರಂಭವಾಗಿದೆ. ಸಂಸ್ಕೃತಿಯನ್ನು ಮರೆತರೆ ಒಂದು ಜನಾಂಗವೇ ಅವನತಿ ಹೊಂದುತ್ತದೆ ಎಂದರು.
ದಿ.ಶಿವಣ್ಣ ಶೆಟ್ಟಿ ದೇಜುಬೆಟ್ಟು ರೆಂಜಾಳ ಅವರ ಹೆಸರಿನಲ್ಲಿ ಅವರ ಮಕ್ಕಳು ಮತ್ತು ಕುಟುಂಬಸ್ಥರ ಪ್ರಾಯೋಜಕತ್ವದ ವಿದ್ಯಾರ್ಥಿವೇತನವನ್ನು ಎಸ್ಎಸ್ಎಲ್‌ಸಿ, ಪಿಯುಸಿಯಲ್ಲಿ ಶೇ 90ಕ್ಕಿಂತ ಅಧಿಕ ಅಂಕ ಪಡೆದ ತಾಲ್ಲೂಕಿನ ವಿವಿಧ ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಬಜೆಗೋಳಿಯ ಅಹಿಂಸಾ ಎನಿಮಲ್ ಕೇರ್ ಟ್ರಸ್ಟಿಗೆ ಅಮ್ಮನ ನೆರವು ಫೌಂಡೇಷನ್ ಮೂಲಕ ಸಹಾಯಧನ ವಿತರಿಸಲಾಯಿತು. ಅಮ್ಮನ ನೆರವು ಫೌಂಡೇಷನ್ ಮಾರ್ಗದರ್ಶಕ ಶಿಕ್ಷಕ ರಾಜೇಂದ್ರ ಭಟ್ ಕೆ, ವಸಂತ್ ಎಂ. ಅವರನ್ನು ಸನ್ಮಾನಿಸಲಾಯಿತು. ಬಜಗೋಳಿ ಶಾಲೆಯ ಹಿರಿಯ ವಿದ್ಯಾರ್ಥಿ ರಮಾಕಾಂತ್ ಶೆಟ್ಟಿ ಅವರು ಸ್ವಾಮೀಜಿಯನ್ನು ಗೌರವಿಸಿದರು.
ತಹಶೀಲ್ದಾರ್ ಪ್ರದೀಪ್ ಆರ್, ಕ್ರಿಯೇಟಿವ್ ಕಾಲೇಜಿನ ಗಣನಾಥ ಶೆಟ್ಟಿ, ಬಿಲ್ಲವರ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್, ಗೇರುಬೀಜ ಉದ್ಯಮಿ ಬೋಳ ಪ್ರಸಾದ್ ಕಾಮತ್, ಕಂಬಳ ಕೋಣಗಳ ಮಾಲಕ ಹೊಸಮಾರು ಸುರೇಶ್ ಶೆಟ್ಟಿ ವಿದ್ಯಾರ್ಥಿವೇತನ ವಿತರಿಸಿದರು. ಕಾಲೇಜಿನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹಾವೀರ್ ಜೈನ್ ಅಧ್ಯಕ್ಷತೆ ವಹಿಸಿದ್ದರು.
ಪ್ರಾಂಶುಪಾಲ ಕೆ.ಪಿ. ಲಕ್ಷ್ಮೀನಾರಾಯಣ್, ಸಾಹಿತಿ ರೇಷ್ಮಾ ಶೆಟ್ಟಿ ಗೋರೂರು ಅಭಿನಂದನಾ ಭಾಷಣ ಮಾಡಿದರು. ಪ್ರೌಢಶಾಲೆ ಮುಖ್ಯಶಿಕ್ಷಕ ಗಣೇಶ್, ಎಸ್‌ಡಿಎಂಸಿ ಅಧ್ಯಕ್ಷ ಭಾಸ್ಕರ್ ಪೂಜಾರಿ ಭಾಗವಹಿಸಿದ್ದರು. ಅಮ್ಮನ ನೆರವು ಫೌಂಡೇಷನ್ ಅಧ್ಯಕ್ಷ ಅವಿನಾಶ್ ಜಿ. ಶೆಟ್ಟಿ ದಾನಿಗಳನ್ನು ಸ್ಮರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.