ADVERTISEMENT

ಸರಳ, ಸಂಭ್ರಮದ ಬಕ್ರೀದ್ ಆಚರಣೆ

ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ: ಬೀಡಿನಗುಡ್ಡೆಯಲ್ಲಿ ಕುರಿ ಆಡುಗಳ ಮಾರಾಟ

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 13:06 IST
Last Updated 21 ಜುಲೈ 2021, 13:06 IST
ಬಕ್ರೀದ್ ಹಬ್ಬದ ದಿನವಾದ ಬುಧವಾರ ಮುಸ್ಲಿಮರು ಸಾಮೂಹಿಕ ನಮಾಜ್ ಮಾಡಿದರು.
ಬಕ್ರೀದ್ ಹಬ್ಬದ ದಿನವಾದ ಬುಧವಾರ ಮುಸ್ಲಿಮರು ಸಾಮೂಹಿಕ ನಮಾಜ್ ಮಾಡಿದರು.   

ಉಡುಪಿ: ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ಜಿಲ್ಲೆಯ ಮಸೀದಿಗಳಲ್ಲಿ ಬುಧವಾರ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಬಕ್ರೀದ್ ಆಚರಿಸಲಾಯಿತು.

ಉಡುಪಿಯ ಜಾಮೀಯ ಮಸೀದಿಯಲ್ಲಿ ಖತೀಬ್ ವೌಲಾನ ರಶೀದ್ ಅಹ್ಮದ್ ನದ್ವಿ ಉಮ್ರಿ ಹಾಗೂ ಮೂಳೂರು ಜುಮಾ ಮಸೀದಿಯಲ್ಲಿ ಖತೀಬ್ ಅಲ್‌ಹಾಜ್ ಅಬ್ದುರ್‌ ರೆಹಮಾನ್ ಮದನಿ ನೇತೃತ್ವದಲ್ಲಿ ಈದ್ ನಮಾಝ್ ಹಾಗೂ ಖುತ್ಬಾ ಪಾರಾಯಣ ನಡೆಯಿತು.

ಕುಂದಾಪುರ, ಕಾರ್ಕಳ, ಬ್ರಹ್ಮಾವರ, ಹೆಬ್ರಿ, ಕಾಪು, ಬೈಂದೂರು ತಾಲ್ಲೂಕುಗಳಲ್ಲಿ 180ಕ್ಕೂ ಹೆಚ್ಚು ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ಮಾಡಲಾಯಿತು. ಮಸೀದಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ಶೇ 50ರಷ್ಟು ಮಂದಿ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಎಲ್ಲರೂ ಮಾಸ್ಕ್ ಧರಿಸಿ ಸುರಕ್ಷಿತ ಅಂತರ ಕಾಪಾಡಿಕೊಂಡು ನಮಾಜ್‌ ನಿರ್ವಹಿಸಿದರು.

ADVERTISEMENT

ಉಡುಪಿಯ ಹಾಶಿಮಿ ಮಸೀದಿಯಲ್ಲಿ ನಮಾಜ್ ಬಳಿಕ ಮೌಲಾನಾ ಹಾಶಿಮ್ ಉಮ್ರಿ ಈದ್ ಅಲ್ ಅಝಾದ ಮಹತ್ವ ಹೇಳಿದರು. ಬಳಿಕ ಮುಸ್ಲಿಮರು ಈದ್ ಶುಭಾಶಯ ವಿನಿಮಯ ಮಾಡಿಕೊಂಡರು.

ಸರ್ಕಾರದ ಕೋವಿಡ್ ಮಾರ್ಗಸೂಚಿಯಂತೆ 10 ವರ್ಷಕ್ಕಿಂತ ಕೆಳಗಿನ ಹಾಗೂ 65 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಸೀದಿಗೆ ಪ್ರವೇಶ ನೀಡಲಾಗಿರಲಿಲ್ಲ. ಹಬ್ಬದ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಕುರಿ, ಆಡುಗಳ ಮಾರಾಟ:

ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಉಡುಪಿಯ ಬೀಡಿನಗುಡ್ಡೆ ಮೈದಾನದಲ್ಲಿ ಕುರಿ ಹಾಗೂ ಆಡುಗಳ ವ್ಯಾಪಾರ ನಡೆಯಿತು. ಹಬ್ಬಕ್ಕೆ ವಾರ ಮುನ್ನವೇ ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ವ್ಯಾಪಾರಿಗಳು ಕುರಿ ಹಾಗೂ ಆಡುಗಳನ್ನು ಮಾರಾಟ ಮಾಡಲು ತಂದಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ವ್ಯಾಪಾರ ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಮಾರಾಟ ಕಡಿಮೆ ಎಂದು ವ್ಯಾಪಾರಿಗಳು ಹೇಳಿದರು. ಕುರಿ ಹಾಗೂ ಆಡಿನ ಬೆಲೆ ಹೆಚ್ಚಳವಾಗಿದೆ. ಆದರೂ ಹಬ್ಬಕ್ಕೆ ಮಾಂಸ ಅಗತ್ಯವಿರುವುದರಿಂದ ಖರೀದಿ ಅನಿವಾರ್ಯ ಎಂದು ಗ್ರಾಹಕರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.