ADVERTISEMENT

ತಾಲ್ಲೂಕುಗಳಲ್ಲಿ ಬಾಲಭವನ ನಿರ್ಮಾಣಕ್ಕೆ ಅನುದಾನ

ರಾಜ್ಯ ಬಾಲಭವನ ಸೊಸೈಟಿ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜ್

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 14:53 IST
Last Updated 18 ಫೆಬ್ರುವರಿ 2021, 14:53 IST
ಜಿಲ್ಲಾ ಬಾಲಭವನದಲ್ಲಿ ಗುರುವಾರ ರಾಜ್ಯ ಬಾಲಭವನ ಸೊಸೈಟಿ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜ್ ಮಾತನಾಡಿದರು.
ಜಿಲ್ಲಾ ಬಾಲಭವನದಲ್ಲಿ ಗುರುವಾರ ರಾಜ್ಯ ಬಾಲಭವನ ಸೊಸೈಟಿ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜ್ ಮಾತನಾಡಿದರು.   

ಉಡುಪಿ: ತಾಲ್ಲೂಕುಗಳಲ್ಲಿ ಬಾಲಭವನಗಳನ್ನು ನಿರ್ಮಿಸಲು ಜಮೀನು ಗುರುತಿಸಿ, ಜಾಗ ಮಂಜೂರಾತಿ ಪಡೆದು ಪ್ರಸ್ತಾವ ಸಲ್ಲಿಸಿದರೆ ಬಾಲಭವನ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ರಾಜ್ಯ ಬಾಲಭವನ ಸೊಸೈಟಿ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜ್ ಹೇಳಿದರು.

ಗುರುವಾರ ಬ್ರಹ್ಮಗಿರಿ ಬಾಲಭವನಕ್ಕೆ ಭೇಟಿನೀಡಿದ ಬಳಿಕ ಮಾತನಾಡಿದ ಅವರು, 30 ಜಿಲ್ಲೆಗಳಲ್ಲಿರುವ ಬಾಲಭವನಗಳಲ್ಲಿ 18 ಮಾತ್ರ ಸ್ವಂತ ಕಟ್ಟಡಗಳಲ್ಲಿ ನಡೆಯುತ್ತಿವೆ. ಪ್ರಸಕ್ತ ವರ್ಷದಲ್ಲಿ ಬಾಲಭವನ ಸೊಸೈಟಿಗೆ ₹ 10 ಕೋಟಿ ಅನುದಾನವನ್ನು ಸರ್ಕಾರ ನೀಡಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ₹ 17 ಕೋಟಿ ನೀಡುವಂತೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಬಾಲಭವನಗಳ ಬೇಡಿಕೆಗೆ ಅನುಸಾರವಾಗಿ ಅನುದಾನ ಒದಗಿಸಲಾಗುತ್ತದೆ. ಬಾಲಭವನಗಳಲ್ಲಿ ವಾರಾಂತ್ಯದ ಕಾರ್ಯಕ್ರಮ ಆಯೋಜಿಸಲು ಸರ್ಕಾರದಿಂದ ಅನುಮತಿ ಪಡೆಯಲಾಗುವುದು. ಬಾಲಭವನಕ್ಕೆ ಹೆಚ್ಚಿನ ಮಕ್ಕಳು ಭೇಟಿನೀಡುವಂತೆ ಕ್ರಮ ಕೈಗೊಳ್ಳಲಾಗುವುದು.

ADVERTISEMENT

ಬಾಲಭವನದ ಚಟುವಟಿಕೆಗಳ ಬಗ್ಗೆ ಶಾಲಾ ಮಕ್ಕಳಿಗೆ ಮಾಹಿತಿ ನೀಡುವುದು ಹಾಗೂ ಮಕ್ಕಳನ್ನು ಆಕರ್ಷಿಸುವಂತಹ ಆಟಿಕೆ ಮತ್ತು ಚಟುವಟಿಕೆಗಳನ್ನು ಬಾಲಭವನ ಆವರಣದಲ್ಲಿ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಂಗವಿಕಲ ಮಕ್ಕಳನ್ನೂ ಬಾಲಭವನದ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮಾಡಲು ನಿರ್ದೇಶನ ನೀಡಲಾಗಿದೆ ಎಂದು ಚಿಕ್ಕಮ್ಮ ಬಸವರಾಜ್ ತಿಳಿಸಿದರು.

ಜಿಲ್ಲಾ ಬಾಲಭವನದಲ್ಲಿ ಗ್ರಂಥಾಲಯ ಹಾಗೂ ಆಡಳಿತ ಕಚೇರಿ ಕಟ್ಟಡ ಕಾಮಗಾರಿಗಳಿಗೆ ಈಗಾಗಲೇ ಕೇಂದ್ರ ಬಾಲಭವನದಿಂದ ₹ 56.75 ಲಕ್ಷ ವೆಚ್ಚವಾಗಿದೆ. ಪ್ರಸಕ್ತ ವರ್ಷ ಬಾಲಭವನ ಚಟುವಟಿಕೆಗಳಿಗೆ ನೀಡಲಾಗಿದ್ದ ಅನುದಾನದಲ್ಲಿ ಕೋವಿಡ್‌ನಿಂದ ₹ 8 ಲಕ್ಷ ಉಳಿದಿದ್ದು, ಅದನ್ನು ಬಾಲಭವನದ ಅಭಿವೃದ್ಧಿಗೆ ಹಾಗೂ ಮಕ್ಕಳ ಕಾರ್ಯ ಚಟುವಟಿಕೆಗಳಿಗೆ ಬಳಸಲಾಗುವುದು ಎಂದರು.‌

ಸುದ್ದಿಗೋಷ್ಠಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಆರ್. ಶೇಷಪ್ಪ, ಸಿಡಿಪಿಒ ವೀಣಾ ವಿವೇಕಾನಂದ, ಬಾಲಭವನದ ಸಂಯೋಜಕಿ ರಮ್ಯಾ, ಉಸ್ತುವಾರಿ ಚಂದ್ರಿಕಾ, ನಗರಸಭೆ ವ್ಯವಸ್ಥಾಪಕ ವೆಂಕಟರಮಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.