ADVERTISEMENT

ಬ್ರಹ್ಮಾವರ | ಬಾರ್ಕೂರು ಅಭಿವೃದ್ಧಿ: ಮನವಿ ನೀಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 5:53 IST
Last Updated 18 ಅಕ್ಟೋಬರ್ 2025, 5:53 IST
ತುಳುನಾಡು ಹಂಪೆ ಎಂದೇ ಪ್ರಸಿದ್ಧಿ ಪಡೆದಿದ್ದ ತುಳುನಾಡ ರಾಜಧಾನಿ ಬಾರ್ಕೂರಿನ ಸಮಗ್ರ ಅಭಿವೃದ್ಧಿಯ ಹಿತದೃಷ್ಟಿಯಿಂದ ಬಾರ್ಕೂರಿನ ಪ್ರಮುಖ ದೇವಾಲಯ, ಬಸದಿ, ಕೋಟೆ ಪ್ರದೇಶಗಳನ್ನು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಬುಧವಾರ ವೀಕ್ಷಿಸಿದರು.
ತುಳುನಾಡು ಹಂಪೆ ಎಂದೇ ಪ್ರಸಿದ್ಧಿ ಪಡೆದಿದ್ದ ತುಳುನಾಡ ರಾಜಧಾನಿ ಬಾರ್ಕೂರಿನ ಸಮಗ್ರ ಅಭಿವೃದ್ಧಿಯ ಹಿತದೃಷ್ಟಿಯಿಂದ ಬಾರ್ಕೂರಿನ ಪ್ರಮುಖ ದೇವಾಲಯ, ಬಸದಿ, ಕೋಟೆ ಪ್ರದೇಶಗಳನ್ನು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಬುಧವಾರ ವೀಕ್ಷಿಸಿದರು.   

ಬ್ರಹ್ಮಾವರ: ‘ತುಳುನಾಡಿನ ಹಂಪೆ’ ಎಂದು ಪ್ರಸಿದ್ಧಿ ಪಡೆದಿದ್ದ ತುಳುನಾಡ ರಾಜಧಾನಿ ಬಾರ್ಕೂರಿನ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಪ್ರಮುಖ ದೇವಾಲಯ, ಬಸದಿ, ಕೋಟೆ ಪ್ರದೇಶಗಳನ್ನು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಬುಧವಾರ ವೀಕ್ಷಿಸಿದರು.

ಜೀರ್ಣೋದ್ಧಾರಗೊಳ್ಳುತ್ತಿರುವ ಪಂಚಲಿಂಗೇಶ್ವರ, ಬಟ್ಟೆ ವಿನಾಯಕ ದೇವಸ್ಥಾನ, ಬನ್ನಿ ಮಹಾಕಾಳಿ, ವೀರಭದ್ರ, ಮೂಡುಕೇರಿಯ ಸೋಮೇಶ್ವರ, ಚೌಳಿಕೆರೆ ಗಣಪತಿ ದೇವಸ್ಥಾನಗಳು, ಕಲ್ಲು ಚಪ್ಪರ, ಕತ್ತಲೆ ಬಸದಿ, ಆಳುಪೋತ್ಸವ ನಡೆದು ಪಾಳುಬಿದ್ದ ಬಾರ್ಕೂರು ಕೋಟೆ ಪ್ರದೇಶಗಳನ್ನು ವೀಕ್ಷಿಸಿದರು.

‘ಬಾರ್ಕೂರಿನ ಜನರು ಒಂದುಗೂಡಿ ರಾಜಕೀಯೇತರ ಸಮಿತಿ ರಚನೆ ಮಾಡಿ ಸಮಗ್ರ ಅಭಿವೃದ್ಧಿಗೆ ಮನವಿ ನೀಡಿದಲ್ಲಿ ಸರ್ಕಾರದ ಮೂಲಕ ಅಭಿವೃದ್ಧಿ ನಡೆಸಲು ಪ್ರಯತ್ನ ಮಾಡುತ್ತೇನೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ADVERTISEMENT

ಕೆರೆ ಹೂಳೆತ್ತಲು ಆಗ್ರಹ: ಬಾರ್ಕೂರಿನ ಚೌಳಿಕೆರೆಯಲ್ಲಿ ಅಂತರಗಂಗೆ ಬೆಳೆದು ನೀರಿನ ಗುಣಮಟ್ಟ ಹಾಳಾಗುತ್ತಿದೆಯಲ್ಲದೆ ಕೆರೆ ಪಾಳು ಬೀಳುತ್ತಿದೆ. ಕೆರೆಯ ಹೂಳು ತೆಗೆದು ಸ್ವಚ್ಛ ಮಾಡಿಕೊಡುವಂತೆ ಸ್ಥಳೀಯರು ಜಿಲ್ಲಾಧಿಕಾರಿ ಅವರಲ್ಲಿ ಆಗ್ರಹಿಸಿದರು.

ಕಂದಾಯ ಅಧಿಕಾರಿ ಕೋಟದ ಮಂಜು ಬಿಲ್ಲವ, ಗ್ರಾಮ ಆಡಳಿತಾಧಿಕಾರಿ ವಿಶ್ವಾಸ್‌ ಆರ್‌. ಬಂಗೇರ, ಸ್ಥಳೀಯರಾದ ಮಂಜುನಾಥ ರಾವ್‌, ಡಾ.ಆಕಾಶರಾಜ್‌ ಜೈನ್‌, ರಾಘವ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಮಂಜಯ್ಯ ಹೆಗ್ಡೆ, ರಾಮಚಂದ್ರ ಕಾಮತ್‌, ಮತ್ತಿತರರು ಭಾಗವಹಿಸಿದ್ದರು.

ಅಭಿವೃದ್ಧಿಗೆ ಮೀನ ಮೇಷ ಏಕೆ?: ಬಾರ್ಕೂರಿನ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಬ್ಯಾಂಕ್‌ ನಿವೃತ್ತ ಅಧಿಕಾರಿ, ಸ್ಥಳೀಯ ರಾಮಚಂದ್ರ ಕಾಮತ್‌, ‘ಸಾವಿರಾರು ವರ್ಷಗಳ ಇತಿಹಾಸವಿರುವ ತುಳುನಾಡಿನ ರಾಜಧಾನಿಯೆಂದು ಹೆಸರು ಪಡೆದಿದ್ದ ಬಾರ್ಕೂರು ಇಂದು ಪಾಳು ಬಿದ್ದಿದೆ. ರಾಜರ ಆಳ್ವಿಕೆ ಕಾಲದಲ್ಲಿ ಮೆರೆದಿದ್ದ ಬಾರ್ಕೂರು ಇಂದು ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಬೇಕಿತ್ತು. ಆದರೆ ಸರ್ಕಾರ, ಪ್ರವಾಸೋದ್ಯಮ ಇಲಾಖೆಯ ಇಚ್ಛಾಶಕ್ತಿ ಕೊರತೆಯಿಂದ ನಿರ್ಲಕ್ಷಕ್ಕೆ ಒಳಗಾಗಿದೆ’ ಎಂದು ಹೇಳಿದರು.

ಬಾರ್ಕೂರಿನಲ್ಲಿರುವ ಶಾಸನಗಳ ಅಧ್ಯಯನಕ್ಕೆ ನೂರಾರು ಸಂಶೋಧನಾರ್ಥಿಗಳು ಬರುತ್ತಾರೆ. ಆದರೆ ಶಾಸನಗಳೇ ಸಿಗುತ್ತಿಲ್ಲ. ಇರುವ ಶಾಸನಗಳ ಸಂರಕ್ಷಣೆ ಆಗಬೇಕು. ಮ್ಯೂಸಿಯಂ ಆರಂಭಿಸಬೇಕು. ಬಾರ್ಕೂರಿನ ಸಮಗ್ರ ಅಭಿವೃದ್ಧಿಗೆ ಮೂಲಸೌಕರ್ಯಗಳನ್ನು ಒದಗಿಸಬೇಕು. ಪ್ರವಾಸೋದ್ಯಮ ಇಲಾಖೆಯಿಂದ ಬಾರ್ಕೂರಿನ ಸಂಪೂರ್ಣ ಮಾಹಿತಿ ನೀಡುವ ನಕ್ಷೆ, ಗೈಡ್‌ಗಳ ವ್ಯವಸ್ಥೆಯಾಗಬೇಕು. ಅಧ್ಯಯನಕ್ಕೆ ಅವಕಾಶ ಕಲ್ಪಿಸಬೇಕು. ಸಂಪರ್ಕ ವ್ಯವಸ್ಥೆ ಬಲಗೊಳ್ಳಬೇಕು. ಪ್ರವಾಸೋದ್ಯಮ ಬೆಳೆದಲ್ಲಿ ಸರ್ಕಾರದ ಬೊಕ್ಕಸಕ್ಕೆ ಆದಾಯವೂ ಬರುತ್ತದೆ. ಬಾರ್ಕೂರಿನ ಗತವೈಭವ ಮರುಕಳಿಸಲು ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಮುಂದಾಗಲಿ ಎಂದು ಆಗ್ರಹಿಸಿದರು.

ಅಭಿವೃದ್ಧಿಗೆ ಮನವಿ ನೀಡಲು ಜಿರ್ಲಾಧಿಕಾರಿ ಸೂಚನೆ ಸಮಿತಿ ರಚನೆಗೆ ಸಲಹೆ ಪ್ರವಾಸೋದ್ಯಮ ಬೆಳೆದಲ್ಲಿ ಆರ್ಥಿಕ ಸ್ಥಿತಿಯೂ ಉತ್ತಮ