ADVERTISEMENT

‘ಜಂಟಿ ಸಭೆ ನಡೆಸಿ: ಸಮಸ್ಯೆ ಪರಿಹರಿಸಿ’

ಜಿಲ್ಲಾಧಿಕಾರಿ ಕಚೇರಿ ಮುಂದೆ ಬೀಡಿ ಕಾರ್ಮಿಕರ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಆರಂಭ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 4:59 IST
Last Updated 26 ನವೆಂಬರ್ 2025, 4:59 IST
ಧರಣಿಯಲ್ಲಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿದರು
ಧರಣಿಯಲ್ಲಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿದರು   

ಉಡುಪಿ: ಬೀಡಿ ಕಾರ್ಮಿಕರಿಗೆ ಸಾವಿರ ಬೀಡಿಗೆ ತುಟ್ಟಿ ಭತ್ಯೆ ಸೇರಿ ₹301.98 ನೀಡಬೇಕೆಂದು ರಾಜ್ಯ ಸರ್ಕಾರ ನಿಗದಿಪಡಿಸಿದರೂ ಮಾಲಕರು ನೀಡಿಲ್ಲ. ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಸಹಾಯಕ ಕಾರ್ಮಿಕ ಆಯುಕ್ತರು, ಕಾರ್ಮಿಕ ಸಂಘಟನೆ ಹಾಗೂ ಬೀಡಿ ಮಾಲೀಕರ ಜೊತೆ ಜಂಟಿ ಸಭೆ ನಡೆಸಿ ಸಮಸ್ಯೆ ಪರಿಹರಿಸಬೇಕು ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಆಗ್ರಹಿಸಿದರು.

ಬೀಡಿ ಕಾರ್ಮಿಕರಿಗೆ ಕನಿಷ್ಠ ಕೂಲಿ, ತುಟ್ಟಿ ಭತ್ಯೆ ನೀಡದಿರವುದನ್ನು ಖಂಡಿಸಿ ಜಿಲ್ಲೆಯ ಬೀಡಿ ಕಾರ್ಮಿಕರು ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಆರಂಭಿಸಿದ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೀಡಿ ಕಾರ್ಮಿಕರು ಹಲವು ಬಾರಿ ಹೋರಾಟಗಳನ್ನು ನಡೆಸಿ ಸರ್ಕಾರಕ್ಕೆ ಮನವಿ ನೀಡಿದರೂ ಸರ್ಕಾರ ಬೀಡಿ ಮಾಲೀಕರ ಮೇಲೆ ಕ್ರಮ ವಹಿಸಿಲ್ಲ. ಇದು ಮಾಲೀಕರು ಹಾಗೂ ಸರ್ಕಾರ ಜಂಟಿಯಾಗಿ ಕಾರ್ಮಿಕರಿಗೆ ಮಾಡಿದ ದ್ರೋಹ ಎಂದು ಹೇಳಿದರು.

ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಸುರೇಶ ಕಲ್ಲಾಗರ ಮಾತನಾಡಿ, ಬೀಡಿ ಮಾಲೀಕರು ಸರ್ಕಾರ ಮತ್ತು ಕಾನೂನಿಗಿಂತ ದೊಡ್ಡ ವ್ಯಕ್ತಿಗಳಾಗಿದ್ದರಿಂದಲೇ ಸರ್ಕಾರದ ಆದೇಶಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂದು ಆರೋಪಿಸಿದರು.

ADVERTISEMENT

ಕರಾವಳಿ ಜಿಲ್ಲೆಗಳ ಶಾಸಕರು, ಜಿಲ್ಲಾಡಳಿತ ಬಡ ಬೀಡಿ ಕಾರ್ಮಿಕರ ಪರವಾಗಿ ನಿಲ್ಲದೇ ಮಾಲೀಕರ ಜೊತೆ ನಿಂತಿರುವುದರಿಂದಲೇ ಕಾರ್ಮಿಕರು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ ಎಂದರು.

ಉಡುಪಿ ಜಿಲ್ಲಾ ಬೀಡಿ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್. ಕಾಂಚನ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಂಟಿ ಸಭೆ ಕರೆಯಲು ಆಗ್ರಹಿಸಿ ಇದೇ 28 ರಂದು ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಗೆ ಬೀಡಿ ಕಾರ್ಮಿಕರು ಮುತ್ತಿಗೆ ಹಾಕಲಿದ್ದಾರೆ ಎಂದು ಹೇಳಿದರು.

ಧರಣಿಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ವಿ., ಉಪಾಧ್ಯಕ್ಷ ಕೆ. ಶಂಕರ್, ಬೀಡಿ ಸಂಘಟನೆಯ ಮುಖಂಡರಾದ ಉಮೇಶ್ ಕುಂದರ್, ಬಲ್ಕೀಸ್, ನಳಿನಿ, ಸುನೀತಾ ಕಾರ್ಕಳ, ಮೋಹನ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆಯ ನಾಗರತ್ನ ನಾಡ, ಜನವಾದಿ ಮಹಿಳಾ ಸಂಘಟನೆಯ ಶೀಲಾವತಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.