
ಉಡುಪಿ: ‘ಇಂದು ನಮ್ಮ ಜಗತ್ತು ತಲ್ಲಣದಲ್ಲಿದೆ. ಈ ತಲ್ಲಣಕ್ಕೆ ಭಗವದ್ಗೀತೆಯೇ ಔಷಧಿ. ಶ್ರೀಕೃಷ್ಣ ವಿಶ್ವಕ್ಕೆ ನೀಡಿರುವ ದೊಡ್ಡ ಕೊಡುಗೆಯೇ ಗೀತೆ’ ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಶ್ರೀಪಾದರು ಅಭಿಪ್ರಾಯಪಟ್ಟರು.
ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಬೃಹತ್ ಗೀತೋತ್ಸವದ ಅಂಗವಾಗಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂತ ಸಂದೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬದುಕಿನಲ್ಲಿ ಅಶಾಂತಿ ಇರುತ್ತದೆ, ಅಶಾಂತಿ ಬರುವುದೇ ಶಾಂತಿಯ ಮೂಲವನ್ನು ತಿಳಿಸಲು. ಇಡೀ ವಿಶ್ವಕ್ಕೆ ಶಾಂತಿಯನ್ನು ಬೋಧಿಸಬೇಕೆಂಬ ಉದ್ದೇಶದಿಂದ ಪುತ್ತಿಗೆ ಶ್ರೀಗಳು ಜಗತ್ತನ್ನು ಸುತ್ತಿ ಭಗವದ್ಗೀತೆಯ ಸಂದೇಶವನ್ನು ಸಾರುವ ಕೆಲಸವನ್ನು ಮಾಡುತ್ತಿದ್ದಾರೆ’ ಎಂದರು.
‘ಭಗವದ್ಗೀತೆಯು ಹಿಂದೂ ಧರ್ಮದ ಶ್ರೇಷ್ಠ ಗ್ರಂಥ. ಗೀತೆಯ ಶ್ಲೋಕಗಳನ್ನು ಕಂಠಪಾಠ ಮಾಡುವುದು, ಬರೆಯುವುದು ಅತ್ಯಂತ ಕಷ್ಟದ ಕೆಲಸ, ಆದರೂ ಪುತ್ತಿಗೆ ಶ್ರೀಗಳು ಎಲ್ಲರಲ್ಲೂ ಭಗವದ್ಗೀತೆಯ ಶ್ಲೋಕಗಳನ್ನು ಬರೆಸುವ ಮೂಲಕ ಮಹತ್ಕಾರ್ಯ ಮಾಡಿದ್ದಾರೆ’ ಎಂದು ಹೇಳಿದರು.
ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ‘ಭಗವಂತನ ಪ್ರೀತಿಗಾಗಿ ಅವನಿಗೆ ಇಷ್ಟವಾದುದನ್ನು ಸಮರ್ಪಿಸಬೇಕು. ಶ್ರೀಕೃಷ್ಣನಿಗೆ ಇಷ್ಟವಾದುದು ಭಗವದ್ಗೀತೆ. ಆದ್ದರಿಂದ ಎಲ್ಲರೂ ಗೀತೆಯನ್ನು ಅನುಸರಿಸಬೇಕು’ ಎಂದು ಪ್ರತಿಪಾದಿಸಿದರು.
‘ಗೀತೆಯ ಪ್ರಚಾರದ ಮೂಲಕ ಭಗವಂತನ ಆರಾಧನೆ ಮಾಡಬೇಕೆಂಬ ಉದ್ದೇಶದಿಂದ ನಾವು ಬೃಹತ್ ಗೀತೋತ್ಸವವನ್ನು ಹಮ್ಮಿಕೊಂಡಿದ್ದೇವೆ. ಕೃಷ್ಣ ಗೀತೆಯಲ್ಲಿ ಏನು ಹೇಳಿದ್ದಾನೆ ಎಂಬುದನ್ನು ನಾವು ತಿಳಿದುಕೊಂಡರೆ ನಾವು ಉದ್ಧಾರವಾಗುತ್ತೇವೆ’ ಎಂದು ಹೇಳಿದರು.
‘ಆಸೆಗಳು ಮನಸ್ಸಿನಲ್ಲಿ ಅಶಾಂತಿ ಉಂಟು ಮಾಡುತ್ತದೆ. ಆಸೆ ಹೆಚ್ಚಾದಂತೆ ಬದುಕು ದುರ್ಬರವಾಗುತ್ತದೆ. ಆದ್ದರಿಂದ ನಾವು ಮನಸ್ಸಿನ ಮೇಲೆ ಆಸೆಯ ಹೊರೆಯನ್ನು ಹಾಕಬಾರದು’ ಎಂದರು.
ಪರ್ಯಾಯ ಪುತ್ತಿಗೆ ಮಠದ ಕಿರಿಯ ಶ್ರೀಸುಶ್ರೀಂದ್ರ ಶ್ರೀ, ಉದ್ಯಮಿ ಶಿವರಾಮ ಶೆಟ್ಟಿ, ಸಮಾಜ ಸೇವಕ ಥಾಮಸ್ ಡಿಸೋಜ ಇದ್ದರು.
ಕೃಷ್ಣ ಇಡೀ ಜಗತ್ತಿಗೆ ತಂದೆಯಾಗಿ ಭಗವದ್ಗೀತೆಯ ಮೂಲಕ ಸಂದೇಶವನ್ನು ನೀಡಿದ್ದಾನೆ. ಅದರಂತೆ ನಾವು ಸನ್ಮಾರ್ಗದಲ್ಲಿ ನಡೆದರೆ ದೇವರ ಪ್ರೀತಿಗೆ ಪಾತ್ರರಾಗುತ್ತೇವೆಸುಗುಣೇಂದ್ರ ತೀರ್ಥ ಸ್ವಾಮೀಜಿ ಪರ್ಯಾಯ ಪುತ್ತಿಗೆ ಮಠಾಧೀಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.