ADVERTISEMENT

ಹಳ್ಳಿಹೊಳೆ: ಭೀಮಶಕ್ತಿ ಐಕ್ಯತಾ ಸಮಾವೇಶ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 8:06 IST
Last Updated 19 ಡಿಸೆಂಬರ್ 2025, 8:06 IST
ಕುಂದಾಪುರ ತಾಲ್ಲೂಕಿನ ಹಳ್ಳಿಹೊಳೆಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಭೀಮ ಶಕ್ತಿ ಐಕ್ಯತಾ ಸಮಾವೇಶ ನಡೆಯಿತು
ಕುಂದಾಪುರ ತಾಲ್ಲೂಕಿನ ಹಳ್ಳಿಹೊಳೆಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಭೀಮ ಶಕ್ತಿ ಐಕ್ಯತಾ ಸಮಾವೇಶ ನಡೆಯಿತು   

ಕುಂದಾಪುರ: ಮಹಿಳೆಯರು ಮತ್ತು ಯುವಜನರು ಆಚಾರ ವಿಚಾರಗಳ ಹೆಸರಿನಲ್ಲಿ ಮೌಢ್ಯದ ಕುರುಡು ಕೂಪಕ್ಕೆ ಬಲಿಯಾಗುತ್ತಿರುವ ಕಾಲಘಟ್ಟದಲ್ಲಿ ಸಂವಿಧಾನದ ಮೂಲ ಆಶಯಗಳನ್ನು ಎತ್ತಿ ಹಿಡಿಯಬೇಕು ಎಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು ಹೇಳಿದರು.

ತಾಲ್ಲೂಕಿನ ಹಳ್ಳಿಹೊಳೆಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಭೀಮಶಕ್ತಿ ಐಕ್ಯತಾ ಸಮಾವೇಶ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ ಅವರು ಮಾತನಾಡಿದರು.

ಸಮಾಜದ ಮುಖ್ಯವಾಹಿನಿಗೆ ಬಂದು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರ ಧಾರೆಗಳನ್ನು ಮೈಗೂಡಿಸಿ ಕೊಳ್ಳಬೇಕು. ಕಟ್ಟಿ ಬೆಳೆಸಿದ ಸಂಘಟನೆಯನ್ನು ಒಡೆದು ಆಳುವ ಹಿತಶತ್ರುಗಳು ಜೊತೆಯಲ್ಲಿ ಇದ್ದು ಅವಕಾಶವಾದಿಗಳಾದರೆ ಸಮುದಾಯದ ಹಿತ ಸವಾಲಾಗಿ ಪರಿಣಮಿಸುತ್ತದೆ. ನಮ್ಮನ್ನು ಆಳುವ ಸರ್ಕಾರ ಎಷ್ಟೇ ಜನಪರ ಯೋಜನೆಯ ಭಾಗ್ಯಗಳನ್ನು ಜಾರಿಗೆ ತಂದರೂ ಕೂಡ, ಹಕ್ಕುಗಳನ್ನು ಹೋರಾಟದ ಮೂಲಕವೇ ಪಡೆದುಕೊಳ್ಳುವ ಅನಿವಾರ್ಯತೆ ನಮ್ಮ ಮುಂದಿದೆ. ಗ್ರಾಮೀಣ ಭಾಗದ ಜನರಲ್ಲಿ‌ ಸಾಮಾಜಿಕ ಜಾಗೃತಿ ಮೂಡಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಸಂಘಟನೆಯ ಕಾರ್ಯ ನಿರಂತರವಾಗಿರಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜನಪರ ಹೋರಾಟಗಾರ‌ ಜಯನ್‌ ಮಲ್ಪೆ ಅವರು, ವಿವಿಧತೆಯಲ್ಲಿ ಏಕತೆ ಸಾರಿದ ಅಂಬೇಡ್ಕರ್ ಅವರು, ಹೋರಾಟದ ಮೂಲಕ ನಮಗೆ ಎಲ್ಲ ಹಕ್ಕುಗಳನ್ನು ಒದಗಿಸಿದ್ದರು. ದಲಿತರು ವಿಧಾನಸಭೆ ಹಾಗೂ ಲೋಕಸಭೆಯ ಪ್ರತಿನಿಧಿಗಳಾಗಿ ರಾಜಕೀಯ ಶಕ್ತಿಯಾಗಬೇಕು ಎಂದರು.

ADVERTISEMENT

ಸಂಘಟನೆಯ ತಾಲ್ಲೂಕು ಸಂಘಟನಾ ಸಂಚಾಲಕ ರಾಮ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಹಳ್ಳಿಹೊಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಶೆಟ್ಟಿ ಅವರು, ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ರಮೇಶ್ ಕುಲಾಲ್, ಶಂಕರನಾರಾಯಣ ಎಸ್‌ಐ ಯೂನುಸ್ ಗಡ್ಡೆಕರ, ಉಡುಪಿ ಜಿಲ್ಲಾ ಎಸ್‌ಸಿ,ಎಸ್‌ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಪರಮೇಶ್ವರ ಉಪ್ಪೂರು, ಉಡುಪಿ ಜಿಲ್ಲಾ ಅಂಬೇಡ್ಕರ್ ಯುವ ಸೇನೆ ಅಧ್ಯಕ್ಷ ಗಣೇಶ್ ನೆರ್ಗಿ, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಚಂದ್ರ ಹಳಗೇರಿ, ಬೈಂದೂರು ತಾಲ್ಲೂಕು ಸಂಚಾಲಕ ಲಕ್ಷಣ, ಹಳ್ಳಿಹೊಳೆ ಗ್ರಾ.ಪಂ ಉಪಾಧ್ಯಕ್ಷೆ ಗಿರಿಜಾ, ಸದಸ್ಯ ಪ್ರಭಾಕರ ಉಳಾಲುಮಠ, ಅಂಬೇಡ್ಕರ್ ಯವ ಸೇನೆಯ ಹರೀಶ್ ಸಾಲಿಯಾನ್, ಭಾಸ್ಕರ ನಾಯ್ಕ ಯಡಮೊಗೆ, ಸುಂದರ ಹೊಸಕೋಟೆ, ಸುರೇಶ್ ಮೂಡುಬಗೆ, ನಾರಾಯಣ ಪರ್ಕಳ, ಕಮಲಾಕ್ಷ ಚೇರ್ಕಾಡಿ, ಶಿವಕುಮಾರ್ ಪರ್ಕಳ ಇದ್ದರು.

ವರ್ತ ನಾಯ್ಕ ಬಾಳಿಕೆರೆ ಸ್ವಾಗತಿಸಿದರು. ಉದಯ ನಾಯ್ಕ ರಾಂಪೈಜಡ್ಡು ನಿರೂಪಿಸಿದರು. ಗ್ರಾ.ಪಂ ಮಾಜಿ ಅಧ್ಯಕ್ಷ ಪ್ರದೀಪ್ ಕೊಠಾರಿ ವಂದಿಸಿದರು.

Highlights - ಗ್ರಾಮೀಣರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿ ಹಕ್ಕುಗಳನ್ನು ಹೋರಾಟದ ಮೂಲಕ ಪಡೆಯುವ ಅನಿವಾರ್ಯತೆ ಡಾ. ಅಂಬೇಡ್ಕರ್ ವಿಚಾರಧಾರೆ ಮೈಗೂಡಿಸಿಕೊಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.