ADVERTISEMENT

ಬಿಜೆಪಿ ತಲೆ ತಗ್ಗಿಸುವ ಕೆಲಸ ಮಾಡಿಲ್ಲ

ಬಿಜೆಪಿ ರಾಷ್ಟ್ರೀಯ ಸಹ ಕಾರ್ಯದರ್ಶಿ ಬಿ.ಎಲ್‌.ಸಂತೋಷ್

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 17:23 IST
Last Updated 11 ಏಪ್ರಿಲ್ 2019, 17:23 IST
ಮಣಿಪಾಲದ ಕಂಟ್ರಿ ಇನ್ ಹೋಟೆಲ್‌ನಲ್ಲಿ ಗುರವಾರ ಬಿಜೆಪಿ ಹಮ್ಮಿಕೊಂಡಿದ್ದ ‘ಮಹಿಳೆಯರೊಂದಿಗೆ ಸಂವಾದ’ ಕಾರ್ಯಕ್ರಮವನ್ನು ವೈದ್ಯೆ ಪುಷ್ಪಾ ಕಿಣಿ ಉದ್ಘಾಟಿಸಿದರು.
ಮಣಿಪಾಲದ ಕಂಟ್ರಿ ಇನ್ ಹೋಟೆಲ್‌ನಲ್ಲಿ ಗುರವಾರ ಬಿಜೆಪಿ ಹಮ್ಮಿಕೊಂಡಿದ್ದ ‘ಮಹಿಳೆಯರೊಂದಿಗೆ ಸಂವಾದ’ ಕಾರ್ಯಕ್ರಮವನ್ನು ವೈದ್ಯೆ ಪುಷ್ಪಾ ಕಿಣಿ ಉದ್ಘಾಟಿಸಿದರು.   

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ಜನರ ಮುಂದೆ ಕ್ಷಮೆ ಕೇಳುವಂತಹ, ತಲೆ ತಗ್ಗಿಸುವಂತಹ ಯಾವ ಕೆಲಸವನ್ನೂ ಮಾಡಿಲ್ಲ. ಕಾರ್ಯಕರ್ತರು ಮತ್ತೊಮ್ಮೆ ಬಿಜೆಪಿಗೆ ಮತ ಕೊಡಿ ಎಂದು ಸ್ವಾಭಿಮಾನದಿಂದ ಕೇಳುವಂತಹ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಸಹ ಕಾರ್ಯದರ್ಶಿ ಬಿ.ಎಲ್‌.ಸಂತೋಷ್ ಹೇಳಿದರು.

ಮಣಿಪಾಲದ ಕಂಟ್ರಿ ಇನ್ ಹೋಟೆಲ್‌ನಲ್ಲಿ ಗುರವಾರ ಬಿಜೆಪಿ ಹಮ್ಮಿಕೊಂಡಿದ್ದ ‘ಪ್ರಬುದ್ಧ ಮಹಿಳೆಯರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಿಜೆಪಿ ದೀನದಯಾಳ್ ಉಪಾಧ್ಯಾಯ ಅವರ ಮೂಸೆಯಲ್ಲಿ ಬೆಳೆದ ಪಕ್ಷ. ಕಟ್ಟಕಡೆಯ ವ್ಯಕ್ತಿಯ ಮುಖದಲ್ಲಿ ಮಂದಹಾಸ ಮೂಡಬೇಕು ಎಂಬುದು ಪಕ್ಷದ ಉದ್ದೇಶ. ಅದರಂತೆ, ಪ್ರಧಾನಿ ನರೇಂದ್ರ ಮೋದಿ ಅವರು ನಡೆದುಕೊಳ್ಳುತ್ತಿದ್ದಾರೆ ಎಂದರು.

ADVERTISEMENT

ಕಾಂಗ್ರೆಸ್‌ ವ್ಯವಸ್ಥೆಯ ಕಣಕಣದಲ್ಲೂ ಜಾತಿಯನ್ನು ತುಂಬಿದೆ. ಎಲ್ಲ ಹಂತಗಳಲ್ಲೂ ಜಾತಿ ತಾಂಡವವಾಡುತ್ತಿದೆ. ಕಳೆದ 30 ವರ್ಷಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿತ್ತು. ಅದರ ಪರಿಣಾಮ, ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಬೆಲೆ ಇರಲಿಲ್ಲ. ಪ್ರಸ್ತುತ ದೇಶದ ರೂಪಾಯಿಗೆ ಬೆಲೆ ಬಂದಿದೆ. ಶೆಲ್‌ ಕಂಪೆನಿಗಳ ನಿರ್ದೇಶಕರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಭ್ರಷ್ಟಾಚಾರಕ್ಕೆ ಇದ್ದ ದಾರಿಗಳನ್ನೆಲ್ಲ ಮುಚ್ಚಿಹಾಕಲಾಗಿದೆ ಎಂದರು.‌

6.7 ಲಕ್ಷ ಕೋಟಿ ಹಣ ವಿವಿಧ ಸಾಮಾಜಿಕ ಯೋಜನೆಗಳಡಿ ಜನರ ಬ್ಯಾಂಕ್‌ ಖಾತೆಗೆ ನೇರವಾಗಿ ಜಮೆಯಾಗಿದೆ. ಉತ್ತರ ಪ್ರದೇಶದಲ್ಲಿ ಮಧ್ಯಾಹ್ನದ ಊಟಕ್ಕೆ ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಜೋಡಣೆಯಿಂದ 4.5 ಲಕ್ಷ ಮಕ್ಕಳ ಸಂಖ್ಯೆ ಕಡಿಮೆಯಾಯಿತು. ಶಿಕ್ಷಕರ ವೇತನ ಖಾತೆಯನ್ನು ಆಧಾರ್ ಜತೆ ಜೋಡಣೆ ಮಾಡಿದ ಮೇಲೆ 12 ಸಾವಿರ ಶಿಕ್ಷಕರ ಸಂಖ್ಯೆ ಕಡಿಮೆಯಾಯಿತು. ಹೀಗೆ ಹಲವು ಹಂತಗಳಲ್ಲಿ ಸೋರಿಕೆಯಾಗುತ್ತಿದ್ದ ಹಣವನ್ನು ಬಿಜೆಪಿ ಸರ್ಕಾರ ತಡೆಯುವ ಕೆಲಸ ಮಾಡಿದೆ ಎಂದರು.

ಜನರ ಸಹಭಾಗಿತ್ವದಿಂದ ಮಾತ್ರ ದೇಶವನ್ನು ಬದಲಿಸಬಹುದು ಎಂಬುದನ್ನು ಅರಿತ ಮೋದಿ ಅವರುಸ್ವಚ್ಛಭಾರತಕ್ಕೆ ಕರೆ ನೀಡಿ ಜನರನ್ನು ಭಾಗೀಧಾರರನ್ನಾಗಿ ಮಾಡಿದರು. ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಈ ವಾತಾವರಣ ಮುಂದುವರಿಯುವ ಅವಶ್ಯಕತೆ ಇದೆ. ದೇಶ ಸುರಕ್ಷಿತವಾದ ಕೈಗಳಲ್ಲಿದೆ. ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದರೆ ಸಾಲುವುದಿಲ್ಲ, ಮತ್ತೆ ಅಧಿಕಾರಕ್ಕೆ ತರಬೇಕು ಎಂದರು.

ಚುನಾವಣೆಯಲ್ಲಿ ಮತಹಾಕಿ ಬಂದರೆ ಹೋಟೆಲ್‌ನಲ್ಲಿ ಉಚಿತವಾಗಿ ತಿಂಡಿ ಕೊಡುವ ಮಟ್ಟಕ್ಕೆ ವ್ಯವಸ್ಥೆ ಬದಲಾಗಿದೆ. ಅದಕ್ಕೆ ಕಾರಣ ಮೋದಿ ಅವರ ಬದುಕು ಹಾಗೂ ನೀತಿಗಳು ಎಂದರು.

ಕಾರ್ಯಕ್ರಮದಲ್ಲಿ ಕೆಎಂಸಿ ವೈದ್ಯರಾದ ಪುಷ್ಪಾ ಕಿಣಿ, ಮಟ್ಟಾರು ರತ್ನಾಕರ ಹೆಗಡೆ, ರಘುಪತಿ ಭಟ್‌, ಉದಯಕುಮಾರ್ ಶೆಟ್ಟಿ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.