ADVERTISEMENT

ಜಿ.ಪಂ, ತಾ.ಪಂ, ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸ

ಜಿಲ್ಲಾ ಬಿಜೆಪಿ ವಿಶೇಷ ಕಾರ್ಯಕಾರಿಣಿಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್‌ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 16:03 IST
Last Updated 12 ಜುಲೈ 2021, 16:03 IST
ಸೋಮವಾರ ಅಜ್ಜರಕಾಡು ಪುರಭವನದಲ್ಲಿ ನಡೆದ ಜಿಲ್ಲಾ ಬಿಜೆಪಿ ವಿಶೇಷ ಕಾರ್ಯಕಾರಿಣಿ ನಡೆಯಿತು.
ಸೋಮವಾರ ಅಜ್ಜರಕಾಡು ಪುರಭವನದಲ್ಲಿ ನಡೆದ ಜಿಲ್ಲಾ ಬಿಜೆಪಿ ವಿಶೇಷ ಕಾರ್ಯಕಾರಿಣಿ ನಡೆಯಿತು.   

ಉಡುಪಿ: ಬಿಜೆಪಿ ಜನಪರ ಕಾರ್ಯಗಳಿಂದ ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಇದಕ್ಕೆ ಪೂರಕವಾಗಿ ಸಂಘಟನಾತ್ಮಕ ಕೆಲಸಗಳು ನಡೆಯುತ್ತಿವೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಸೋಮವಾರ ಅಜ್ಜರಕಾಡು ಪುರಭವನದಲ್ಲಿ ನಡೆದ ಜಿಲ್ಲಾ ಬಿಜೆಪಿ ವಿಶೇಷ ಕಾರ್ಯಕಾರಿಣಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊರೊನಾ ಸಂಕಷ್ಟದಲ್ಲಿ ಬಿಜೆಪಿ ಕಾರ್ಯಕರ್ತರು ಜನಪರ ಕೆಲಸ ಮಾಡಿದ್ದಾರೆ. 38 ಸಾವಿರ ಕಿಟ್‌ ಹಂಚಿದ್ದಾರೆ. 57 ಸಾವಿರ ಗಿಡಗಳನ್ನು ನೆಡಲಾಗಿದೆ. ಸೇವಾ ಹೀ ಸಂಘಟನೆಯ ಮೂಲಕ ಉತ್ತಮ ಕಾರ್ಯಗಳು ನಡೆದಿವೆ ಎಂದರು.

ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಪಕ್ಷದ ಕಾರ್ಯಕರ್ತರು ಹಳ್ಳಿಗಳಿಗೆ ತಲುಪಿಸಬೇಕು. ಜಲಜೀವನ್ ಮಿಷನ್ ಜಾರಿಗೆ ಕಾರ್ಯಕರ್ತರು, ಸ್ವಯಂ ಸೇವಕರು ಶ್ರಮಿಸಬೇಕು. ಪ್ರಧಾನಿ ಮೋದಿ ಅವವರ ದಿಟ್ಟ ನಿರ್ಧಾರಗಳಿಂದ ಕೊರೊನಾ ಹತೋಟಿಗೆ ಬಂದಿದೆ. ಕಾರ್ಯಕರ್ತರು ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸುವುದರ ಜತೆಗೆ, ಸೋಂಕಿತರ ನೆರವಿಗೆ ಧಾವಿಸಬೇಕು ಎಂದರು.

ADVERTISEMENT

ಶಾಸಕರಾದ ವಿ.ಸುನೀಲ್ ಕುಮಾರ್, ಲಾಲಾಜಿ ಮೆಂಡನ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಪ್ರಭಾರಿ ಉದಯಕುಮಾರ್ ಶೆಟ್ಟಿ, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಕೋಶಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು ಇದ್ದರು.

ಸಭೆಯಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಜಿಲ್ಲಾ ಉಪಾಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್ ಸ್ವಾಗತಿಸಿದರು. ರೇಷ್ಮಾ ಉದಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.