ADVERTISEMENT

ಬಿಜೆಪಿ ನಿಜವಾಗಿಯೂ ಹಿಂದೂಗಳ ಪರವಾಗಿಲ್ಲ; ಹಿಂದುತ್ವದ ಪರವಾಗಿದೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 12:46 IST
Last Updated 22 ಜನವರಿ 2023, 12:46 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಉಡುಪಿ: ಬಿಜೆಪಿಯ ದುರುದ್ದೇಶಪೂರಿತ ಹಿಂದುತ್ವಕ್ಕೆ ಕರಾವಳಿ ಯುವಕರು ಬಲಿಯಾಗುತ್ತಿರುವುದು ನೋವಿನ ಸಂಗತಿ. ಇನ್ನಾದರೂ ಬಿಜೆಪಿ ಷಡ್ಯಂತ್ಯದ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ನಡೆದ ಕಾಂಗ್ರೆಸ್‌ ಪ್ರಜಾಧ್ವನಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಆರ್‌ಎಸ್ಎಸ್‌ನಲ್ಲಿ ತರಬೇತಿ ಪಡೆಯುವ ಬಿಜೆಪಿ ನಾಯಕರು ಹಿಂದುತ್ವದ ಹೆಸರಲ್ಲಿ ಜನರ ದಾರಿ ತಪ್ಪಿಸುತ್ತಿದೆ. ಬಿಜೆಪಿ ನಿಜವಾಗಿಯೂ ಹಿಂದೂಗಳ ಪರವಾಗಿಲ್ಲ; ಹಿಂದುತ್ವದ ಪರವಾಗಿದೆ ಎಂದು ಟೀಕಿಸಿದರು.

ಮನುಷ್ಯತ್ವವನ್ನು ವಿರೋಧಿಸುವುದೇ ಹಿಂದುತ್ವ. ಕರಾವಳಿಯಲ್ಲಿ ಹಿಂದುತ್ವಕ್ಕಾಗಿ ಕೊಲೆಯಾದವರು, ಕೊಲೆ ಮಾಡಿ ಜೈಲಿಗೆ ಹೋದವರೆಲ್ಲ ಹಿಂದುಳಿದ ಜಾತಿಗೆ ಸೇರಿದವರು. ಆರ್‌ಎಸ್‌ಎಸ್‌ ಮುಖಂಡರ ಮಕ್ಕಳಾಗಲಿ, ಶಾಸಕರ ಮಕ್ಕಳಾಗಲಿ ಹಿಂದುತ್ವಕ್ಕಾಗಿ ಕೊಲೆಯಾದ ನಿದರ್ಶನ ಕರಾವಳಿಯಲ್ಲಿ ಸಿಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ADVERTISEMENT

ಕಾಂಗ್ರೆಸ್ ಹಿಂದುತ್ವ ಹಾಗೂ ಮನುವಾದದ ವಿರುದ್ಧವಾಗಿದೆಯೇ ಹೊರತು. ಹಿಂದೂಗಳ, ಹಿಂದೂ ಧರ್ಮದ ವಿರುದ್ಧವಾಗಿಲ್ಲ. ಬಿಜೆಪಿಯ ಹಿಂದುತ್ವಕ್ಕೆ ಮರುಳಾಗಿ ಯುವ ಜನತೆ ಬಲಿಯಾಗಬಾರದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರೇಶ್‌ ಮೇಸ್ತ ಸಾವಿನ ಪ್ರಕರಣವನ್ನು ಕೊಲೆ ಎಂದು ಬಿಂಬಿಸಿ, ಒಂದು ಧರ್ಮದ ತಲೆಗೆ ಕಟ್ಟಿ ಬಿಜೆಪಿ ಅಪಪ್ರಚಾರ ಮಾಡಲಾಯಿತು. ತನಿಖೆ ನಡೆಸಿದ ಸಿಬಿಐ ಪರೇಶ್‌ ಮೇಸ್ತನದ್ದು ಸಹಜ ಸಾವು ಎಂದು ವರದಿ ನೀಡಿದೆ ಎಂದರು.

ಮನುವಾದಿಗಳು ಒಂದು ಧರ್ಮ, ಒಂದು ದೇಶ, ಒಂದು ಭಾಷೆಯನ್ನು ಪ್ರತಿಪಾದಿಸುತ್ತಾರೆ. ಹಲವು ಜಾತಿ, ಧರ್ಮ, ಭಾಷೆಗಳನ್ನೊಳಗೊಂಡಿರುವ ಜಾತ್ಯತೀತ ರಾಷ್ಟ್ರದಲ್ಲಿ ಎಲ್ಲರೂ ಒಟ್ಟಾಗಿ ಸಾಗಬೇಕಾಗಿದೆ. ಅಂಬೇಡ್ಕರ್ ಸಂವಿಧಾನದಲ್ಲಿ ಪ್ರತಿಪಾದಿಸಿದ ಸಮಾನತೆಗೆ ಆರ್‌ಎಸ್‌ಎಸ್‌ ವಿರುದ್ಧವಾಗಿದೆ ಎಂದು ವಾಗ್ದಾಳಿ ನಡೆಸಿದರು.

ನಾರಾಯಣ ಗುರು, ಗಾಂಧೀಜಿ, ಅಂಬೇಡ್ಕರ್, ಕುದ್ಮಲ್ ರಂಗರಾಯರ ತತ್ವಗಳ ಮೇಲೆ ನಂಬಿಕೆ ಇಟ್ಟು ಜೀವಪರವಾಗಿ ಬದುಕೋಣ. ಯಾವ ಧರ್ಮವೂ ಕೊಲ್ಲಲು, ಹಿಂಸೆ ಮಾಡಲು ಪ್ರಚೋದಿಸುವುದಿಲ್ಲ. ಬಿಜೆಪಿ ಮಾತ್ರ ಧರ್ಮದ ಹೆಸರಿನಲ್ಲಿ ದ್ವೇಷ ಹಂಚುತ್ತಿದೆ ಎಂದರು.

ಕಾಂಗ್ರೆಸ್‌ ಬಡವರಿಗಾಗಿ ಕೃಷಿ ಭಾಗ್ಯ, ಕ್ಷೀರಭಾಗ್ಯ, ಅನ್ನಭಾಗ್ಯ, ಶಾದಿಭಾಗ್ಯ, ಹಸಿರು ಭಾಗ್ಯ, ಶೂ ಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೆ ತಂದರೆ ಬಿಜೆಪಿ ಲೂಟಿ ಹೊಡೆಯುವುದರಲ್ಲಿ ಮಗ್ನವಾಗಿದೆ. ವರ್ಗಾವಣೆ, ಬಡ್ತಿ, ಗುತ್ತಿಗೆ ಕಾಮಗಾರಿಗಳಲ್ಲಿ ಕಮಿಷನ್ ದಂಧೆಗಿಳಿದಿದೆ. ವಿಧಾನಸೌಧದ ಗೋಡೆಗಳಿಗೆ ಕಿವಿಗೊಟ್ಟರೆ ಲಂಚ ಪಿಸುಗುಡುತ್ತದೆ ಎಂದು ವಾಗ್ದಾಳಿ ನಡೆಸಿದರು.

ಸರ್ಕಾರದ ಬಣ್ಣ ಬಯಲಾಗುವ ಉದ್ದೇಶದಿಂದ ಸ್ಯಾಂಟ್ರೋ ರವಿಯನ್ನು ಹೆಚ್ಚಿನ ವಿಚಾರಣೆಗೆ ಪೊಲೀಸ್‌ ವಶಕ್ಕೆ ಪಡೆಯದೆ ಜೈಲಿಗೆ ಕಳಿಸಲಾಗಿದೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.